ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾದ ನೆರೆ

ತೇರದಾಳ: ಪ್ರವಾಹದಲ್ಲಿ ಅಳೆದುಳಿದ ಪುಸ್ತಕಗಳನ್ನೇ ಒಣಗಿಸಿ ಸಹಪಾಠಿಯೊಂದಿಗೆ ಹಂಚಿಕೊಂಡು ಓದುವ ಪರಿಸ್ಥಿತಿ ತಮದಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬಂದೊದಗಿದೆ.

ಕೃಷ್ಣೆಯ ಆರ್ಭಟದಿಂದಾಗಿ ತಮದಡ್ಡಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ನೀರಿನ ರಭಸಕ್ಕೆ ಅಯೋಮಯವಾಗಿದ್ದ ಸರ್ಕಾರಿ ಶಾಲೆ ಇತ್ತೀಚೆಗೆ ಆರಂಭಗೊಂಡಿದೆ. ನೆರೆಯಲ್ಲಿ ಶಾಲಾ ಮಕ್ಕಳ ಬ್ಯಾಗ್, ಪಠ್ಯಪುಸ್ತಕಗಳು ಹಾಳಾಗಿವೆ. ನೆರೆ ಸಂತ್ರಸ್ತ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿ ಒದಗಿಸುವುದಾಗಿ ಹೇಳಿದ್ದ ಸರ್ಕಾರ ಕೊಟ್ಟ ಮಾತು ಮರೆತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಕೆಲವೇ ದಿನಗಳಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ನೆರೆ ಸಂತ್ರಸ್ತ ಶಾಲೆಗಳ ಮಕ್ಕಳಿಗೆ ಆತಂಕ ಎದುರಾಗಿದೆ. ಕಲಿಕಾ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಅಧ್ಯಯನಕ್ಕೆ ತೊಂದರೆಯಾಗಿದೆ. ಪಠ್ಯ, ಪುಸ್ತಕಗಳಿಲ್ಲದೇ ಪರೀಕ್ಷೆ ಹೇಗೆ ಎದುರಿಸುವುದು ಎಂಬ ಚಿಂತೆ ಕಾಡುತ್ತಿದೆ.

ಶಿಕ್ಷಕರ ಪ್ರಯತ್ನ: ಮಕ್ಕಳ ಪುಸ್ತಕಗಳು ನೆನೆದು ಹೋಗಿರುವುದರಿಂದ ಬನಹಟ್ಟಿ ಸೇರಿ ವಿವಿಧ ಶಾಲೆಗಳಿಗೆ ಇಲ್ಲಿನ ಶಿಕ್ಷಕರು ಆಟೋ ಮೂಲಕ ತೆರಳಿ ಅಲ್ಲಿರುವ ಅಳಿದುಳಿದ ಹಳೆಯ ಪುಸ್ತಕಗಳನ್ನು ಕಲೆಹಾಕಿಕೊಂಡು ತಂದು ಮಕ್ಕಳ ಅಧ್ಯಯನಕ್ಕೆ ಅನುವು ಮಾಡುತ್ತಿದ್ದಾರೆ. ಒಂದು ಪುಸ್ತಕದಲ್ಲಿ ನಾಲ್ಕೈದು ಮಕ್ಕಳು ಹೊಂದಾಣಿಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದಾರೆ.

ಇನ್ನೂವರೆಗೂ ಪುಸ್ತಕ ಬಂದಿಲ್ಲ. ಬದಲಾಗಿ ಬೇರೆ ಬೇರೆ ಶಾಲೆಗಳಿಂದ ಪುಸ್ತಕಗಳನ್ನು ತಂದು ಹೊಂದಾಣಿಕೆ ಮಾಡಲಾಗಿದೆ. ಸ್ಥಳಿಯರು ನೋಟ್‌ಬುಕ್ ಕೊಡುವ ಉತ್ಸಾಹ ತೋರಿದ್ದಾರೆ. ಶೂ ವಿತರಣೆಗೆ ಸೂಚನೆ ಬಂದಿದ್ದು, ಶೀಘ್ರ ಮಕ್ಕಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುವುದು.
– ಆರ್.ಎಲ್. ಪತ್ತಾರ ಮುಖ್ಯ ಶಿಕ್ಷಕ

ಜಮಖಂಡಿ ತಾಲೂಕಿನ ಪ್ರವಾಹ ಪೀಡಿತ 52 ಗ್ರಾಮಗಳ ಪೈಕಿ ಸಾವಿರಾರು ವಿದ್ಯಾರ್ಥಿಗಳ ಪುಸ್ತಕ ನೀರಲ್ಲಿ ನೆನೆದಿವೆ. ಇಲಾಖೆಗೆ ಬೇಡಿಕೆ ಪಟ್ಟಿ ಕಳಿಸಿದ್ದು, ಸರ್ಕಾರದಿಂದ ಬಂದ ತಕ್ಷಣ ವಿತರಿಸಲಾಗುವುದು. ಸರ್ಕಾರದಿಂದ ಬ್ಯಾಗ್ ಕೊಡುವ ಯೋಜನೆ ಇಲ್ಲ. ಶೂಗಳ ಹಣ ಜಮೆಯಾಗಿದೆ.
– ಎಂ.ಬಿ. ಮೊರಟಗಿ ಬಿಇಒ, ಜಮಖಂಡಿ

Leave a Reply

Your email address will not be published. Required fields are marked *