ನೀರಿಲ್ಲದೆ ಸೊರಗುತ್ತಿದೆ ಹನಗಂಡಿ

ತೇರದಾಳ: ಬಿರುಬಿಸಿಲಿನಿಂದ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಒಂದೆಡೆ ಆಡಳಿತಾಧಿಕಾರಿಗಳು ಬೇಸಿಗೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ನೀರಿನ ಮೂಲಗಳಾದ ಕರೆ ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ.

ಕೃಷ್ಣೆಯ ಒಡಲಲ್ಲಿ ನೀರಿನ ಪ್ರಮಾಣವಿದ್ದರೂ ಸಮೀಪದ ಹನಗಂಡಿ ಗ್ರಾಮದ ವಿಶಾಲವಾದ ಕೆರೆ ಸಂಪೂರ್ಣ ಖಾಲಿಯಾಗಿದೆ. ಕೆರೆಯನ್ನೇ ನಂಬಿಕೊಂಡ ಧನಕರುಗಳು ಬಿಸಿಲಿನಿಂದ ಭುಗಿಲೇಳುವ ಖಾಲಿಕೆರೆ ನೋಡುವಂತಾಗಿದೆ.

ಸಾರ್ವಜನಿಕರಿಗೆ ತೊಂದರೆ
ಗುಡ್ಡದ ಬದಿಯಲ್ಲಿರುವ ಕೆರೆಯ ಸುತ್ತಮುತ್ತಲು ನೂರಾರು ಕುಟುಂಬಗಳು ವಾಸವಾಗಿದ್ದು. ನಿತ್ಯ ಬಳಕೆಗಾಗಿ ಕೆರೆ ನೀರನ್ನೇ ಬಳಸುತ್ತಿದ್ದರು. ಈಗ ಕೆರೆ ಖಾಲಿಯಾಗಿರುವುದರಿಂದ ಸಾರ್ವಜನಿಕರು ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು ಮಾತ್ರ ಕೆರೆ ತುಂಬಿಸುವುದಕ್ಕಿಂತ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದಂತೆ ಅಂತರ್ಜಲವು ಕುಸಿಯುತ್ತಿದೆ. ಸುತ್ತಲಿನ ಜನರು ಕೊಳವೆಬಾವಿಗಳನ್ನು ನಂಬುವುದು ಕಷ್ಟವಾಗಿದೆ. ಕಳೆದ ವರ್ಷವೂ ಕೆರ ಖಾಲಿಯಾದಾಗ ಆ ವೇಳೆ ಮಾಧ್ಯಮದಲ್ಲಿನ ವರದಿ ಕಂಡು ಆಡಳಿತಗಾರರು ಸ್ಥಳೀಯ ಅಧಿಕಾರಿಗಳು ಕೆರೆ ತುಂಬಿಸಿದ್ದರು. ಆದರೆ ಬೇಸಿಗೆ ಬಂದಾಗಲೆಲ್ಲ ಈ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ನೀರಿಗಾಗಿ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂಬುದು ಇಲ್ಲಿನ ನಿವಾಸಿಗಳ ಆಶಯವಾಗಿದೆ.

ಬೇಸಿಗೆಯಲ್ಲಿ ಕೆರೆ ನೀರು ಖಾಲಿಯಾಗುತ್ತದೆ. ಕುರಿಗಾರರು ನೀರು ಅರಸಿ ಬೇರೆಡೆ ಹೋಗುತ್ತಾರೆ. ಆದರೆ ನಾಲ್ಕಾರು ದನಗಳನ್ನು ಇಟ್ಟುಕೊಂಡು ನಾವೆಲ್ಲಿಗೆ ಹೋಗೋದು. ಇಲ್ಲಿನ ಜನ ನಮ್ಮ ಬಗ್ಗೆನೂ ಕಾಳಜಿ ಮಾಡಬೇಕು.
ಸಿದ್ದಪ್ಪ ಗಡದಿ ಧನಗಾಯಿ ಹನಗಂಡಿ