ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅವಶ್ಯ

ತೇರದಾಳ: ಸ್ವಚ್ಛ ಭಾರತ ಅಭಿಯಾನದಡಿ ಪಟ್ಟಣ ಸ್ವಚ್ಛವಾಗಿಡಲು ಪುರಸಭೆಯಿಂದ ಕಸ ತುಂಬುವ ಡಬ್ಬಿಗಳನ್ನು ನೀಡಲಾಗುತ್ತಿದ್ದು, ಮನೆ ಮನೆಗೆ ಬರುವ ಪುರಸಭೆ ವಾಹನಗಳಿಗೆ ಸಾರ್ವಜನಿಕರು ಕಸ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಕೈಜೋಡಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಘನತ್ಯಾಜ್ಯ ವಸ್ತುಗಳ ಪ್ರಾಥಮಿಕ ಹಂತದ ಕಸ ಸಂಗ್ರಹಕ್ಕೆ ಡಬ್ಬಿಗಳ ವಿತರಣೆ ಹಾಗೂ ಬರ ನಿರ್ವಹಣೆಗೆ ಸಹಕರಿಸಿದ ಪುರಸಭೆ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನೀಡಿರುವ ಎರಡು ಡಬ್ಬಿಗಳಲ್ಲಿ ಹಸಿ ಕಸ ಮತ್ತು ಒಣ ಕಸಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಿ, ಪುರಸಭೆ ಕಸ ಸಂಗ್ರಹಣೆ ವಾಹನಕ್ಕೆ ಹಾಕುವ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಪುರಸಭೆ ಮುಖ್ಯಾಕಾರಿ ಮಹಾವೀರ ಬೊರೆನ್ನವರ ಅವರಿಂದ ಅಂಕಿ-ಅಂಶಗಳ ಮಾಹಿತಿಯನ್ನು ಶಾಸಕರು ಪಡೆದುಕೊಂಡರು. ಪಟ್ಟಣದ 4000 ಕುಟುಂಬಗಳಿಗೆ ಕಸದ ಡಬ್ಬಿ ಪೂರೈಸಲು ಟೆಂಡರ್ ಕರೆಯಲಾಗಿದ್ದು, ಅರ್ಧದಷ್ಟು ಜನರಿಗೆ ಡಬ್ಬಿಗಳ ಕೊರತೆಯಾಗುತ್ತದೆ. ಹೀಗಾಗಿ ಯಾವ ವಾರ್ಡ್‌ಗೆ ವಿತರಿಸಬೇಕೆಂಬ ಗೊಂದಲ ಮೂಡಿತು. ಅಂತಿಮವಾಗಿ ಮೊದಲು ಎಸ್‌ಸಿ ಹಾಗೂ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಡಬ್ಬಿಗಳನ್ನು ವಿತರಿಸಲು ತೀರ್ಮಾನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನೆರಡು ತಿಂಗಳಲ್ಲಿ ಪಟ್ಟಣದ ಎಲ್ಲ ಜನತೆಗೆ ಡಬ್ಬಿಗಳನ್ನು ವಿತರಿಸಲಾಗುವುದು ಎಂದು ಅಕಾರಿಗಳು ಮಾಹಿತಿ ನೀಡಿದರು.
ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಶಾಸಕ ಸವದಿ ಅವರನ್ನು ಸನ್ಮಾನಿಸಿದರು. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ನೀರು ಒದಗಿಸಲು ಶ್ರಮಿಸಿದ 23 ವಾರ್ಡ್‌ಗಳ ಸದಸ್ಯರನ್ನು ಸನ್ಮಾನಿಸಲಾಯಿತು.
ಮುಖ್ಯಾಕಾರಿ ಮಹಾವೀರ ಬೊರೆನ್ನವರ ನಿರೂಪಿಸಿದರು. ಅಕೌಂಟೆಂಟ್ ಎಸ್.ಜಿ. ಮುಲ್ಲಾ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *