ತೇರದಾಳ: ಪಟ್ಟಣದ ಕುಡಚಿ ರಸ್ತೆ 3 ಮತ್ತು 4ನೇ ಕಾಲುವೆ ಬಳಿ ಎಲ್ಲ ಬಸ್‌ಗಳನ್ನು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಸ್ಥಳೀಯ ನಿಯಂತ್ರಣಾಧಿಕಾರಿ ಎಸ್.ವಿ. ವಾಜಂತ್ರಿ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಿಂದ 4-5 ಕಿ.ಮೀ. ದೂರವಿರುವ ಘಟಪ್ರಭಾ ಎಡದಂಡೆ ಕಾಲುವೆ ಸಮೀಪದ ತೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಅಲ್ಲದೆ, ಕೂಡನಹಳ್ಳ ಪ್ರದೇಶದಲ್ಲಿ ಒಂದು ಗ್ರಾಮವೇ ಇದೆ. ನಾಲ್ಕು ಸಾವಿರಕ್ಕಿಂತ ಹೆಚ್ಚು ಜನತೆ ವಾಸ ಮಾಡುವ ಈ ಭಾಗದಲ್ಲಿ ಬಸ್ ನಿಲುಗಡೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಮಕ್ಕಳ ಶಿಕ್ಷಣಕ್ಕಾಗಿ, ಸಂತೆ-ಪೇಟೆೆಗಾಗಿ, ಆಸ್ಪತ್ರೆ, ಕಚೇರಿಗಳ ಕೆಲಸಕ್ಕಾಗಿ ಪಟ್ಟಣಕ್ಕೆ ಆಗಮಿಸಲು ಜನತೆಗೆ ತುಂಬಾ ಸಮಸ್ಯೆಯಾಗುತ್ತಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಶಿವಲಿಂಗಪ್ಪ ಮುದಕಣ್ಣವರ, ಸತ್ಯಪ್ಪ ಹಳ್ಳೂರ ಎಚ್ಚರಿಕೆ ನೀಡಿದ್ದಾರೆ. ಜೆ.ಎನ್. ಅಥಣಿ, ಡಿ.ಬಿ. ಹಟ್ಟೆನ್ನವರ, ಕೆ.ಐ. ಪತ್ತಾರ ಇದ್ದರು.
ಕುಡಚಿ ರಸ್ತೆಯ 3 ಮತ್ತು 4ನೇ ಕಾಲುವೆ ಬಳಿ ಬಸ್ ನಿಲುಗಡೆಗಾಗಿ ಜನರು ಮನವಿ ಸಲ್ಲಿಸಿದ್ದಾರೆ. ಮೇಲಧಿಕಾರಿಗಳಿಗೂ ತಿಳಿಸಲಾಗಿದೆ. ಶೀಘ್ರದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಎಸ್.ವಿ. ವಾಜಂತ್ರಿ ಸಾರಿಗೆ ನಿಯಂತ್ರಣಾಧಿಕಾರಿ ತೇರದಾಳ ಬಸ್ ನಿಲ್ದಾಣ