ಅಜ್ಜಂಪುರ: ಬುಕ್ಕಾಂಬುದಿಯಲ್ಲಿ ಶುಕ್ರವಾರ ಗ್ರಾಮ ದೇವರಾದ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಉಜ್ಜಯಿನಿ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಯಡಿಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ತೆಪ್ಪೋತ್ಸವದ ನೇತೃತ್ವ ವಹಿಸಿದ್ದರು. ತಾವರೆಕೆರೆ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದೀಪುರದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಿವಿಧ ಹೂವು ಹಾಗೂ ಬಲೂನುಗಳಿಂದ ತೆಪ್ಪವನ್ನು ಅಲಂಕರಿಸಲಾಗಿತ್ತು. ಬುಕ್ಕರಾಯನ ಕೆರೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಂಪಾ ವಿರೂಪಾಕ್ಷೇಶ್ವರ ಉತ್ಸವ ಮೂರ್ತಿ, ಶಿವಾಚಾರ್ಯರನ್ನು ತೆಪ್ಪದಲ್ಲಿ ಕೂರಿಸಿ ಉತ್ಸವ ನಡೆಸಲಾಯಿತು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯದೊಂದಿಗೆ ವಿರೂಪಾಕ್ಷೇಶ್ವರ ಸ್ವಾಮಿ ಮೆರವಣಿಗೆ ನಡೆಯಿತು.
ಐತಿಹಾಸಿಕ ಬುಕ್ಕರಾಯನ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ‘ಕೆರೆ ಶಾಂತಿ’ಗಾಗಿ ತೆಪ್ಪೋತ್ಸವ ನಡೆಸಲಾಗುತ್ತಿದೆ. ಕೆರೆಗೆ ವಿಶೇಷ ಪೂಜೆ(ಹಿಟ್ಟು ಬಿಡುವುದು) ಸಲ್ಲಿಸಲಾಗಿದೆ ಎಂದು ಗ್ರಾಮದ ಮಲ್ಲಿಕಾರ್ಜುನ್ ಹೇಳಿದರು.
ತೆಪ್ಪೋತ್ಸವ ಕೆರೆ ನೀರಿನ ಸಮೃದ್ಧಿಯ ಪ್ರತೀಕ. ಕೆರೆ ತುಂಬಿದರೆ ಮಾತ್ರ ನಮ್ಮ ತೋಟಗಳ ಉಳಿವು. ಈಗ ಕೆರೆ ತುಂಬಿ ತೋಟಗಳು ಹಸಿರಾಗಿವೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ತೆಪ್ಪೋತ್ಸವ ಹರ್ಷ ತಂದಿದೆ ಎಂದು ವಿಕಾಸ್ ತಿಳಿಸಿದರು.