ಮೀಸಲು ಅರಣ್ಯ ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರ ಮೋಜುಮಸ್ತಿ

ಬಣಕಲ್: ಸುಂಕಸಾಲೆ ಗ್ರಾಪಂ ವ್ಯಾಪ್ತಿಯ ಬಲ್ಲಾಳರಾಯನದುರ್ಗ ಮೀಸಲು ಅರಣ್ಯದಲ್ಲಿ ಎಗ್ಗಿಲ್ಲದೆ ಪ್ರವಾಸಿಗರ ಮೋಜುಮಸ್ತಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಬಲ್ಲಾಳರಾಯನ ದುರ್ಗ ಮೀಸಲು ಅರಣ್ಯವಾಗಿದ್ದು ಇದರ ಪ್ರವೇಶಕ್ಕೆ ಅರಣ್ಯ ಇಲಾಖೆ ಅನುಮತಿ ಅಗತ್ಯ. ಆದರೆ ದುರ್ಗದಹಳ್ಳಿಯ ರಾಣಿಝುರಿಯ ನೆತ್ತಿ ಮೇಲೆ ಕೆಲ ಪ್ರವಾಸಿಗರು ಟೆಂಟ್ ನಿರ್ವಿುಸಿ ಮೋಜುಮಸ್ತಿಯಲ್ಲಿ ತೊಡಗುತ್ತಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿರುವುದು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ವನ್ಯ ಮೃಗಗಳಿಗೆ ತೊಂದರೆ: ಅರಣ್ಯದ ನಡುವೆ ಪ್ರವಾಸಿಗರೂ ಟೆಂಟ್​ಹಾಕಿ ಫೈರ್​ಕ್ಯಾಂಪ್ ನಡೆಸಿ ಜೋರಾಗಿ ಕೇಕೆ ಹಾಕುವುದರಿಂದ ಪ್ರಶಾಂತ ಪರಿಸರದಲ್ಲಿರುವ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ. ಫೈರ್ ಕ್ಯಾಂಪ್​ನ ಬೆಂಕಿ ಕಾಡಿಗೆ ಹರಡುವ ಸಾಧ್ಯತೆ ಇದೆ. ಹಿಂದಿನಿಂದಲೂ ಪ್ರವಾಸಿಗರ ಮೋಜುಮಸ್ತಿಯಲ್ಲಿ ತೊಡಗಿದರೂ ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು: ಬೆಂಗಳೂರು, ಹಾಸನ, ಮಂಗಳೂರು ಸೇರಿದಂತೆ ಕೆಲ ಪ್ರವಾಸಿಗರು ಅರಣ್ಯದ ನಡುವೆ ವಾಸ್ತವ್ಯ ಹೂಡಿ ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುವುದು ಕಂಡು ಬರುತ್ತಿದೆ. ಬಲ್ಲಾಳರಾಯನದುರ್ಗದಲ್ಲಿ ಮದ್ಯದ ಬಾಟಲಿಗಳು ಕಂಡು ಬರುತ್ತಿರುವುದು ಇಲ್ಲಿ ಮಿತಿ ಮೀರಿದ ಮೋಜು ಮಸ್ತಿ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಮೀಸಲು ಅರಣ್ಯದ ಫಲಕವಿಲ್ಲ: ಬಲ್ಲಾಳರಾಯನ ದುರ್ಗದ ಪ್ರವೇಶಿಸುವ ಮಾರ್ಗದ ಆರಂಭದಲ್ಲಿ ಅರಣ್ಯ ಇಲಾಖೆ ಮೀಸಲು ಅರಣ್ಯದೊಳಗೆ ಪ್ರವೇಶಿಸದಂತೆ ಸೂಚನಾಫಲಕಗಳನ್ನು ಅಳವಡಿಸುವ ಅಗತ್ಯವಿದೆ. ಅಕ್ರಮ ಪ್ರವೇಶ ಮಾಡಿದರೆ ಕಾನೂನಿನಡಿ ಶಿಕ್ಷೆ ಅಥವಾ ದಂಡದ ಪ್ರಮಾಣವನ್ನು ಸೂಚನಾಫಲಕದಲ್ಲಿ ಅಳವಡಿಸಿದರೆ ಅಕ್ರಮ ಪ್ರವೇಶ ಮಾಡುವವರ ಪ್ರಮಾಣ ಕಡಿಮೆಯಾಗಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಬಂಗಾಡಿ, ಸುಂಕಸಾಲೆಯಿಂದ ಪ್ರವೇಶ: ಮಂಗಳೂರು ಕಡೆಯಿಂದ ಚಾರಣ ಕೈಗೊಳ್ಳುವ ಕೆಲ ಪ್ರವಾಸಿಗರು ಬಂಗಾಡಿ ಮೂಲಕ ಚಾರಣ ಕೈಗೊಂಡು ಬಲ್ಲಾಳರಾಯನದುರ್ಗದಲ್ಲಿ ರಾತ್ರಿ ಉಳಿದುಕೊಳ್ಳುತ್ತಿದ್ದಾರೆ. ಸುಂಕಸಾಲೆಯ ಮೂಲಕ ರಾಣಿಝುರಿ ಬಲ್ಲಾಳರಾಯನ ದುರ್ಗಕ್ಕೆ ಸಾಗುವ ಪ್ರವಾಸಿಗರು ರಾತ್ರಿ ಇಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಒಮ್ಮೆ ಇಲ್ಲಿ ಬಂದು ಹೋದ ಪ್ರವಾಸಿಗರು ಮತ್ತಷ್ಟು ಜನರನ್ನು ಮತ್ತೆ ಕರೆ ತರುತ್ತಿದ್ದು ದಿನದಿಂದ ದಿನಕ್ಕೆ ಪ್ರವಾಸಿಗರ ಮೋಜುಮಸ್ತಿ ಹೆಚ್ಚುತ್ತಿದೆ.

ಗ್ರಾಪಂ ಪ್ರಯತ್ನ ವ್ಯರ್ಥ: ಬಲ್ಲಾಳರಾಯನ ದುರ್ಗ ಮೀಸಲು ಅರಣ್ಯ ಸುಂಕಸಾಲೆ ಗ್ರಾಪಂ ವ್ಯಾಪ್ತಿಗೆ ಬರುವುದರಿಂದ ಈ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಆಗಾಗ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿದೆ. ಅಲ್ಲಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಸೂಚನಾಫಲಕಗಳನ್ನು ಅಳವಡಿಸಿದೆ. ಹತ್ತಾರು ಕಸದ ತೊಟ್ಟಿಗಳನ್ನು ಇಡಲಾಗಿದೆ. ಆದರೂ ಪ್ರವಾಸಿಗರು ಪ್ಲಾಸ್ಟಿಕ್ ಮದ್ಯದ ಬಾಟಲಿಗಳನ್ನು ಕಸದ ತೊಟ್ಟಿಗೆ ಹಾಕದೆ ಅರಣ್ಯದೊಳಗೆ ಎಸೆಯುತ್ತಿರುವುದರಿಂದ ಸ್ವಚ್ಛತೆ ಕಾಪಾಡಲು ಗ್ರಾಪಂ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿದೆ.