ದಾಂತೇವಾಡ: ಅದು ನಕ್ಸಲೈಟ್ ಪೀಡಿತ ಛತ್ತೀಸ್ಗಢದ ದಾಂತೇವಾಡ ಜಿಲ್ಲೆ. ಅಲ್ಲೊಬ್ಬ ಬಾಲಕ. ಆತನ ಹೆಸರು ಮಡ್ಡಾ ರಾಮ್ ಕವಾಸಿ. ವಯಸ್ಸು 12. ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರನ್ನೇ ಇನ್ಸ್ಪೈರ್ ಮಾಡಿದ ಬಾಲಕ ಈತ.
ಈತನ ವಿಡಿಯೋವನ್ನೇ ಸಚಿನ್ ಹೊಸ ವರ್ಷದ ಮೊದಲ ದಿನ ಟ್ವೀಟ್ ಮಾಡಿರುವಂಥದ್ದು- ಅದರಲ್ಲಿದ್ದ ಸಂದೇಶದ ಸಾರ ಇದು – 2020ರ ಆರಂಭದ ದಿನ ಮಡ್ಡಾ ರಾಮ್ ಎಂಬ ಬಾಲಕನ ಪ್ರೇರಣಾದಾಯಿ ಕ್ರಿಕೆಟ್ ಆಟ ನೋಡುತ್ತ ಆರಂಭಿಸಿ. ನನಗಂತೂ ಇದು ಹೃದ್ಯವಾಗಿತ್ತು. ಬಹುಶಃ ವಿಡಿಯೋ ನೋಡಿದ ನಿಮಗೂ ಇದು ಹೃದ್ಯವಾದೀತು.
ಯಾರು ಈ ಬಾಲಕ?: ಮಡ್ಡಾದ ಕಟ್ಕಲ್ಯಾಣ್ ಡೆವಲಪ್ಮೆಂಟ್ ಬ್ಲಾಕ್ನ ಬೆನ್ಗ್ಲೂರ್ ಗ್ರಾಮದ ನಿವಾಸಿ. ಪೊಲೀಯೋ ಪೀಡಿತನಾಗಿರುವ ಬಾಲಕ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿ.
ಈತ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸ್ಥಳೀಯರು ಯಾರೋ ಕಳೆದ ತಿಂಗಳು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ವೈರಲ್ ಆಗಿದ್ದು, ಈಗ ಸಚಿನ್ ಅವರು ಶೇರ್ ಮಾಡಿರುವ ಕಾರಣ ಇದರ ರೀಚ್ ಹೆಚ್ಚಾಗಿದೆ.
ದಾಂತೇವಾಡ ಜಿಲ್ಲಾ ಶಿಕ್ಷಣ ಅಧಿಕಾರಿ ರಾಜೇಶ್ ಕರ್ಮಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗಾಡ್ ಆಫ್ ಕ್ರಿಕೆಟ್ ಮಡ್ಡಾ ಆಡುತ್ತಿರುವ ವಿಡಿಯೋ ಶೇರ್ ಮಾಡಿರುವ ವಿಚಾರವನ್ನು ಆ ಬಾಲಕನಿಗೆ ತಿಳಿಸಿದ್ದೇವೆ. ಆತ ನಿಜಕ್ಕೂ ಮಕ್ಕಳಿಗೆ ಒಂದು ಪ್ರೇರಣೆಯೇ ಸರಿ. ಆತನಿಗೆ ನಾವು ಕ್ರಿಕೆಟ್ ಕಿಟ್ ಮತ್ತು ಟ್ರೈಸಿಕಲ್ ಒಂದನ್ನು ಕೊಡುಗೆಯಾಗಿ ನೀಡಿದ್ದೇವೆ.ಆತನ ಬದುಕಿಗೆ ಇನ್ನಷ್ಟು ನೆರವನ್ನು ನಾವು ಕೊಡುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)
Start your 2020 with the inspirational video of this kid Madda Ram playing cricket 🏏 with his friends.
— Sachin Tendulkar (@sachin_rt) January 1, 2020
It warmed my heart and I am sure it will warm yours too. pic.twitter.com/Wgwh1kLegS