Wednesday, 12th December 2018  

Vijayavani

Breaking News

10 ಸಾವಿರ ವಿದ್ಯಾರ್ಥಿಗಳಿಗಿಲ್ಲ ಪರೀಕ್ಷೆಗೆ ಪ್ರವೇಶ

Friday, 23.03.2018, 3:04 AM       No Comments

| ದೇವರಾಜ್ ಎಲ್.

ಬೆಂಗಳೂರು: ಮಾ.23ರಿಂದ ಎಸ್ಸೆಸ್ಸೆಲ್ಸಿ 2018ನೇ ಸಾಲಿನ ವಾರ್ಷಿಕ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ತರಗತಿಗೆ ಚಕ್ಕರ್ ಹಾಕಿದ 10,867 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅರ್ಹತೆ ಕಳೆದುಕೊಂಡಿದ್ದಾರೆ.

20-25 ವಿದ್ಯಾರ್ಥಿಗಳು ಮಾತ್ರ ಅನಾರೋಗ್ಯದಿಂದ ಪರೀಕ್ಷೆ ಹಾಜರಾಗಲು ಸಾಧ್ಯವಾಗಿಲ್ಲ. ಮಿಕ್ಕೆಲ್ಲಾ ಪ್ರಕರಣಗಳು ಕನಿಷ್ಠ ಹಾಜರಾತಿ ಕೊರತೆಯಿಂದ ಅರ್ಹತೆ ಕಳೆದುಕೊಂಡಿದ್ದು, ಇವರೆಲ್ಲ ಪರೀಕ್ಷೆ ಬರೆಯಲು ಮುಂದಿನ ಶೈಕ್ಷಣಿಕ ವರ್ಷದವರೆಗೂ ಕಾಯಬೇಕು. ಪೂರಕ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ಈ ವರ್ಷ ಬಂಕ್ ಮಾಡುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. 2017ರಲ್ಲಿ ಇದರ ಪ್ರಮಾಣ 19,306 ಇತ್ತು.

ಆಕರ್ಷಣೆಯೇ ಕಾರಣ: ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಕಸಿಯಲು ದೂರದರ್ಶನ, ವಿಡೀಯೋ ಗೇಮ್ ಮತ್ತಿತರ ವಸ್ತುಗಳೇ ಕಾರಣ ಎನ್ನಲಾಗಿದೆ. ಉತ್ಪನ್ನಗಳ ಕಡೆ ಮಕ್ಕಳು ಹೆಚ್ಚು ಆಕರ್ಷಿತರಾಗುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಬಂಕ್ ಮಾಡುತ್ತಾರೆ. ಶಾಲಾ ಹಂತದಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿದರೆ ವಿದ್ಯಾರ್ಥಿಗಳು ತರಗತಿಗಳಿಗೆ ಹೆಚ್ಚು ಹಾಜರಾಗುತ್ತಾರೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ವಿದ್ಯಾರ್ಥಿಗಳಿಗೆ ಜವಾಬ್ದಾರಿ ಇದ್ದಿದ್ದರೇ ತರಗತಿಗಳಿಗೆ ಹಾಜರಾಗಿ ಕನಿಷ್ಠ ಹಾಜರಾತಿ ಪಡೆದುಕೊಳ್ಳುತ್ತಿದ್ದರು. ನಾಲ್ಕು ತಿಂಗಳಿನಿಂದ ನಾವು ಇದನ್ನು ಸರಿದೂಗಿಸಿಕೊಳ್ಳುವಂತೆ ಮಾಡಿದರೂ ಯಾವುದೇ ಪ್ರಯೋಜನ ಕಂಡಿಲ್ಲ.

| ವಿ.ಸುಮಂಗಲಾ ನಿರ್ದೇಶಕಿ, ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

 

ರಾಜ್ಯಾದ್ಯಂತ 2817 ಕೇಂದ್ರ

ರಾಜ್ಯದ 2,817 ಪರೀಕ್ಷಾ ಕೇಂದ್ರಗಳಲ್ಲಿ 2018ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದ್ದು, 8,54,424 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಅಗತ್ಯ ಭ್ರದತಾ ಮತ್ತು ಸುಧಾರಣಾ ಕ್ರಮ ಅನುಸರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆಯೇ ಪರೀಕ್ಷೆ ಬರೆಯಬೇಕೆಂದು ಮಂಡಳಿಯು ಮನವಿ ಮಾಡಿದೆ.

 

ಮೌಲ್ಯಮಾಪಕರು ಗೈರಾದರೆ ಮಾನ್ಯತೆ ರದ್ದು

ಬೆಳಗಾವಿ: ಪ್ರತಿವರ್ಷ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆ ತಡವಾಗಿ ಮುಗಿದು ಫಲಿತಾಂಶ ಪ್ರಕಟಿಸಲು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಇತಿಶ್ರೀ ಹಾಡುವ ಸಲುವಾಗಿ ಹೊಸ ಹಾದಿ ತುಳಿದಿರುವ ಸರ್ಕಾರ, ಪ್ರಥಮ ಭಾಷೆ ಇಂಗ್ಲಿಷ್ ವಿಷಯದ ಮೌಲ್ಯಮಾಪನಕ್ಕೆ ನೋಂದಣಿಯಾಗಿರುವ ಖಾಸಗಿ ಶಾಲೆಗಳ ಮೌಲ್ಯಮಾಪಕರು ಗೈರಾದರೆ ಆ ಶಾಲೆಯ ನೋಂದಣಿಯನ್ನೇ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ. ಸರ್ಕಾರದ ಈ ನಡೆ ಖಾಸಗಿ ಶಾಲೆಗಳ ಇಂಗ್ಲಿಷ್ ವಿಷಯ ಮೌಲ್ಯಮಾಪಕರಲ್ಲಿ ತಳಮಳ ಸೃಷಿಸಿದ್ದು, ಮೌಲ್ಯಮಾಪನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಉಪಾಯ ಹೆಣೆಯುತ್ತಿದ್ದಾರೆ. ಏ. 16ರಿಂದ ಮೌಲ್ಯಮಾಪನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಪ್ರತಿಬಾರಿ ಪರೀಕ್ಷೆ ಮುಗಿದ ಒಂದು ತಿಂಗಳೊಳಗಾಗಿ ಸರ್ಕಾರ ಫಲಿತಾಂಶ ಪ್ರಕಟಿಸುತ್ತ ಬಂದಿದೆ. ಆದರೆ, ಪ್ರಥಮ ಭಾಷೆ ಇಂಗ್ಲಿಷ್ ಮೌಲ್ಯಮಾಪನಕ್ಕೆ ಖಾಸಗಿ ಶಾಲೆಗಳ ಮೌಲ್ಯಮಾಪಕರು ಗೈರು ಉಳಿಯುತ್ತಿರುವುದರಿಂದ ಫಲಿತಾಂಶ ಪ್ರಕಟಣೆಗೆ ಹಿನ್ನಡೆ ಉಂಟಾಗುತ್ತಿದೆ. ಶಾಲಾ ಆಡಳಿತ ಮಂಡಳಿಗಳು ಸಕಾಲಕ್ಕೆ ಸಿಬ್ಬಂದಿಯನ್ನು ಮೌಲ್ಯಮಾಪನ ಪ್ರಕ್ರಿಯೆಗೆ ಬಿಡುಗಡೆಗೊಳಿಸದಿರುವುದು ಕಂಡುಬಂದಿದೆ. ಇದರಿಂದ ಎಚ್ಚೆತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ (ಪರೀಕ್ಷೆಗಳು) ನಿರ್ದೇಶಕಿ ವಿ.ಸುಮಂಗಲಾ, ಎಲ್ಲ ವಿಷಯಗಳ ಮೌಲ್ಯಮಾಪಕರು ಕಡ್ಡಾಯವಾಗಿ ಮೌಲ್ಯಮಾಪನ ಪ್ರಕ್ರಿಯೆಗೆ ಹಾಜರಾಗಬೇಕು. ಗೈರಾದರೆ ಆಯಾ ಖಾಸಗಿ ಶಾಲೆಗಳ ಮಾನ್ಯತೆ ರದ್ದುಪಡಿಸಲು ಡಿಡಿಪಿಐಗಳಿಂದ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು. ಅಲ್ಲದೆ, ಆ ಶಾಲೆಗಳ ಫಲಿತಾಂಶ ತಡೆಹಿಡಿಯಲಾಗುವುದು ಎಂದು ಸುತ್ತೋಲೆ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top