ತೈಲ ದರ ಇಳಿಕೆ: ಕೇಂದ್ರದ ಜತೆ ಕೈಜೋಡಿಸಿದ 10 ರಾಜ್ಯಗಳು

ನವದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಕೇಂದ್ರ ನಿರ್ಧಾರಕ್ಕೆ ಬಿಜೆಪಿ ಅಧಿಕಾರದಲ್ಲಿರುವ 10 ರಾಜ್ಯಗಳು ಕೈಜೋಡಿಸಿದ್ದು, 2.50 ರೂ. ತೆರಿಗೆಯನ್ನು ಇಳಿಕೆ ಮಾಡುವ ನಿರ್ಧಾರವನ್ನು ಪ್ರಕಟಿಸಿವೆ.

ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ 1.50 ರೂ. ಅಬಕಾರಿ ಸುಂಕ ಇಳಿಕೆ ಮಾಡಲಾಗುವುದು, ತೈಲ ಕಂಪನಿಗಳು 1 ರೂ. ಇಳಕೆ ಮಾಡಲಿವೆ. ಒಟ್ಟು 2.50 ರೂ. ಇಳಿಕೆಯಾಗಲಿದೆ ಎಂದು ತಿಳಿಸಿದ್ದರು. ಜತೆಗೆ ರಾಜ್ಯ ಸರ್ಕಾರಗಳು 2.50 ರೂ. ಇಳಕೆ ಮಾಡಿ ಗ್ರಾಹಕರ ಮೇಲಿನ ಭಾರವನ್ನು ಇಳಿಕೆ ಮಾಡಬೇಕು ಎಂದು ಮನವಿ ಮಾಡಿದ್ದರು.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಗುಜರಾತ್​, ಛತ್ತೀಸ್​ಗಢ, ಜಾರ್ಖಂಡ್​, ತ್ರಿಪುರಾ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಅಸ್ಸಾಂ ಮತ್ತು ಮಧ್ಯಪ್ರದೇಶ ರಾಜ್ಯಗಳು ಬೆಂಬಲ ಸೂಚಿಸಿದ್ದು, ತೆರಿಗೆಯನ್ನು ಕಡಿತ ಮಾಡಿವೆ.

ಬಿಹಾರದ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಅವರು ತೈಲ ಬೆಲೆ ಇಳಿಕೆ ಮಾಡುವ ಕುರಿತು ಕೇಂದ್ರದಿಂದ ಇದುವರೆಗೆ ಪತ್ರ ಬಂದಿಲ್ಲ. ಪತ್ರ ಬಂದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

ಪೆಟ್ರೋಲ್​, ಡೀಸೆಲ್​ ದರದಲ್ಲಿ 2.50 ರೂ. ಇಳಿಕೆ