ನೀರು ರೇಷನಿಂಗ್ ತಾತ್ಕಾಲಿಕ ಬ್ರೇಕ್

* ಏ.30ರವರೆಗೆ ತುಂಬೆ ಡ್ಯಾಂ ನೀರು ನಿರಂತರ ಪಂಪಿಂಗ್
* ಮಂಗಳೂರು ಜನತೆಗೆ ಜಿಲ್ಲಾಡಳಿತ ಶುಭಸುದ್ದಿ

– ವಿಜಯವಾಣಿ ಸುದ್ದಿಜಾಲ ಮಂಗಳೂರು
ತುಂಬೆ ಅಣೆಕಟ್ಟಿನಿಂದ ಏಪ್ರಿಲ್ 30ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರಿನ ನಿರಂತರ ಪಂಪಿಂಗ್ ನಡೆಯಲಿದ್ದು, ತಾತ್ಕಾಲಿಕವಾಗಿ ರೇಷನಿಂಗ್ ಸ್ಥಗಿತಗೊಳಿಸಲಾಗಿದೆ.
ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಬಿಟ್ಟ ಎರಡು ದಿನಗಳ ಬಳಿಕ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಸ್ಥಿರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
* ಫಲಿಸಿದ ಹೋರಾಟ: ರೇಷನಿಂಗ್ ವೇಳಾಪಟ್ಟಿಯಂತೆ ಬುಧವಾರ ಬೆಳಗ್ಗೆ 6 ಗಂಟೆಯಿಂದ ಮುಂದಿನ ಎರಡು ದಿನ ಪಂಪಿಂಗ್ ಸ್ಥಗಿತಗೊಳಿಸಬೇಕಿತ್ತು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ರೇಷನಿಂಗ್ ಅಗತ್ಯವಿಲ್ಲ ಎಂದು ಸ್ಥಳೀಯ ಶಾಸಕರು, ಮಾಜಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಎಎಂಆರ್ ಡ್ಯಾಂನಿಂದ ನೀರು ಬಿಟ್ಟು ಎರಡು ದಿನ ಪರಿಸ್ಥಿತಿ ಅವಲೋಕಿಸುವುದು, ಅದುವರೆಗೆ ರೇಷನಿಂಗ್ ಮಾಡದಿರಲು ಮತ್ತು ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ತೀರ್ಮಾನಿಸಿದ್ದರು.
ತುಂಬೆಯಲ್ಲಿ ಮಂಗಳವಾರ ರಾತ್ರಿ 5.2 ಮೀ.ನಷ್ಟಿದ್ದ ನೀರು ಎಎಂಆರ್ ನೀರು ಬಿಟ್ಟ ಬಳಿಕ ಬುಧವಾರ ಸಾಯಂಕಾಲ ವೇಳೆಗೆ 5.10 ಮೀ.ಗೆ ಏರಿಕೆಯಾಗಿತ್ತು. ನಿರಂತರ ಪಂಪಿಂಗ್ ಬಳಿಕ ಗುರುವಾರವೂ 5.10 ಮೀ. ನೀರು ಇರುವ ಹಿನ್ನೆಲೆಯಲ್ಲಿ ಮತ್ತೆ ಐದು ದಿನ ಪಂಪಿಂಗ್ ಮುಂದುವರಿಯಲಿದೆ.
* ನೀರಿನ ಸಮಸ್ಯೆ ಇಳಿಕೆ: ಆರು ದಿನಗಳಿಂದ ನಿರಂತರ ಪಂಪಿಂಗ್ ನಡೆಯುತ್ತಿರುವ ಕಾರಣ ಪಾಲಿಕೆಯ ಎತ್ತರದ ಪ್ರದೇಶಗಳಿಗೆ ಕೂಡ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರ ದೂರುಗಳು ಕಡಿಮೆಯಾಗಿವೆ. ಕಚೇರಿಗೆ ಬರುತ್ತಿರುವ ದೂರು ಕರೆಗಳು ಕೂಡ ಕನಿಷ್ಠ ಮಟ್ಟಕ್ಕೆ ಇಳಿದಿವೆ.
ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ವಿವಿಧೆಡೆ ಕಳೆದೆರಡು ದಿನಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಪ್ರಕಟಿಸಿದೆ. ತುಂಬೆ ಡ್ಯಾಂಗೆ ನೀರಿನ ಒರತೆ ತುಂಬಿಕೊಡುವ ಪಶ್ಚಿಮ ಘಟ್ಟದ ತಪ್ಪಲಲ್ಲಿ ಕೆಲ ಮುಂಗಾರುಪೂರ್ವ ಉತ್ತಮ ಬೇಸಿಗೆ ಮಳೆ ಸುರಿದರೆ ರೇಷನಿಂಗ್ ಇಲ್ಲದೆಯೇ ಮಳೆಗಾಲಕ್ಕೆ ಕಾಲಿಡಬಹುದು ಎನ್ನುವುದು ಎಲ್ಲರ ನಿರೀಕ್ಷೆ.

— ಕೋಟ್ —
ಎಎಂಆರ್ ಡ್ಯಾಂ ನೀರು ಬಿಟ್ಟ ತುಂಬೆ ಡ್ಯಾಂ ನೀರಿನ ಮಟ್ಟ ಸುಧಾರಿಸಿದೆ. ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಕೆಲವೆಡೆ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರೂ ಪರಿಣಾಮ ತುಂಬೆ ಡ್ಯಾಂ ನೀರಿನಲ್ಲಿ ಇನ್ನೂ ಗೋಚರಿಸಿಲ್ಲ. ಇನ್ನಷ್ಟು ಮಳೆ ಮುಂದುವರಿದರೆ ಪ್ರಯೋಜನವಾಗಬಹುದು.
– ಲಿಂಗೇಗೌಡ, ಎಇಇ, ಮಂಗಳೂರು ಮಹಾನಗರ ಪಾಲಿಕೆ
………..
ತುಂಬೆ ಡ್ಯಾಂ ನೀರಿನ ಮಟ್ಟ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಸದ್ಯ ರೇಷನಿಂಗ್ ವೇಳಾಪಟ್ಟಿ ಕೈಬಿಡಲಾಗಿದೆ. ನೀರಿನ ಮಟ್ಟದಲ್ಲಿ ತೀವ್ರ ರೀತಿಯ ಕುಸಿತ ಕಂಡುಬಂದರೆ ಪ್ರಕಟಣೆ ನೀಡಿ ರೇಷನಿಂಗ್ ಮರು ಆರಂಭಿಸಲಾಗುವುದು. ಪರಿಸ್ಥಿತಿಯು ಇನ್ನಷ್ಟು ಸುಧಾರಣೆಯಾಗುವ ನಿರೀಕ್ಷೆ ಹೊಂದಿದ್ದೇವೆ.
– ಬಿ.ಎಚ್.ನಾರಾಯಣಪ್ಪ, ಆಯುಕ್ತ, ಮನಪಾ

Leave a Reply

Your email address will not be published. Required fields are marked *