More

  ‘ನಾಗಮಲೆ ಟ್ರೆಕ್ಕಿಂಗ್’ಗೆ ತಾತ್ಕಾಲಿಕ ನಿರ್ಬಂಧ

  ಹನೂರು ; ರಾಜ್ಯದ ಚಾರಣ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಹೋಗುವವರ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಈ ದಿಸೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವವರನ್ನು ಶನಿವಾರದಿಂದ ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.

  ಹಿನ್ನೆಲೆ: ಜ.26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿ ರಾತ್ರಿ ತಂಗಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗಿರಿ ಪ್ರದೇಶಗಳಿಗೆ ಪ್ರತಿವಾರವೂ ಸಾವಿರಾರು ಚಾರಣಿಗರು ಆಗಮಿಸಿದರೆ ಅವರನ್ನು ನಿಯಂತ್ರಿಸುವುದು, ತಪಾಸಣೆ ಮಾಡುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗುತ್ತದೆ. ಜತೆಗೆ ಪರಿಸರಕ್ಕೂ ಹಾನಿಯಾಗುತ್ತದೆ. ಜಲ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಇದನ್ನು ಮನಗಂಡು ರಾಜ್ಯದ ಎಲ್ಲ ಚಾರಣ ತಾಣಗಳಲ್ಲೂ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಚಾರಣ ತಾಣಗಳಲ್ಲಿ ಚಾರಣಿಗರನ್ನು ನಿರ್ಬಂಧಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು.

  ಈ ದಿಸೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್ ವನ್ಯಜೀವಿ ವ್ಯಾಪ್ತಿಯಲ್ಲಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಸದ್ಯ ಕಾಲ್ನಡಿಗೆಯಲ್ಲಿ ನಾಗಮಲೆಗೆ ತೆರಳಬಹುದಾಗಿದೆ.
  ನಿರ್ಬಂಧಿಸಲು ಕಾರಣವೇನು?: ಮ.ಬೆಟ್ಟದಿಂದ ನಾಗಮಲೆಗೆ ತೆರಳುವ ಚಾರಣಿಗರು ಇಂಡಿಗನತ್ತದವರೆಗೆ ಖಾಸಗಿ ಜೀಪ್‌ಗಳ (ಕ್ಯಾಬ್) ಮೂಲಕ ಅರಣ್ಯ ಇಲಾಖೆಗೆ ಪ್ರವೇಶ ಶುಲ್ಕವನ್ನು ಪಾವತಿಸಿ ಸಂಚರಿಸುತ್ತಿದ್ದರು. ಆದರೆ ಇಲ್ಲಿ ಸಂಚರಿಸುವ ಬಹುತೇಕ ಜೀಪ್‌ಗಳಿಗೆ ವಿಮೆ, ಕ್ಷಮತಾ ಪ್ರಮಾಣಪತ್ರ ಇಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರನ್ನು ಕೊಂಡೊಯ್ಯಲಾಗುತ್ತಿತ್ತು. ಇದು ಒಂದೆಡೆಯಾದರೆ, ಚಾರಣಿಗರು ಮನಬಂದಂತೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲ್, ತಟ್ಟೆ, ಆಹಾರ, ಇನ್ನಿತರ ವಸ್ತುಗಳನ್ನು ಅಲ್ಲಲ್ಲಿ ಬಿಸಾಡುತ್ತಿದ್ದರು. ಇದು ವನ್ಯಜೀವಿಗಳ ಜೀವಕ್ಕೆ ಕುತ್ತು ತರುವುದರ ಜತೆಗೆ ಪರಿಸರಕ್ಕೆ ಹಾನಿ ಉಂಟಾಗುತ್ತಿತ್ತು. ಜತೆಗೆ ಜಲಮೂಲಗಳು ಸಹ ಕಲುಷಿತಗೊಳ್ಳುತ್ತಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿತ್ತು. ಜತೆಗೆ ರಾತ್ರಿ ವೇಳೆ ಪ್ರವೇಶ ನಿರ್ಬಂಧಿಸಿದರೂ ಚಾರಣಿಗರು ಅರಣ್ಯ ಇಲಾಖೆಯ ಸಿಬ್ಬಂದಿ ಕಣ್ತಪ್ಪಿಸಿ ಪ್ರವೇಶಿಸುತ್ತಿದ್ದರು. ಇದರಿಂದ ಚಾರಣಿಗರು ಹಾಗೂ ವನ್ಯಪ್ರಾಣಿಗಳ ನಡುವೆ ಸಂಘರ್ಷ ಉಂಟಾಗಿ ಪ್ರಾಣ ಹಾನಿಯಾಗಿರುವ ಘಟನೆಗಳು ಸಹ ಜರುಗುತ್ತಿತ್ತು.
  ಈ ದಿಸೆಯಲ್ಲಿ ತೊಳಸಿಕೆರೆ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಮ.ಬೆಟ್ಟದಿಂದ ಇಂಡಿಗನತ್ತ ಗ್ರಾಮದವರೆಗೆ ಚಾರಣಿಗರನ್ನು ಹೊತ್ತೊಯ್ಯುವ ಖಾಸಗಿ ವಾಹನಗಳಿಗೆ ಪ್ರವೇಶ ಸ್ಥಗಿತಗೊಳಿಸಿ, ನಾಗಮಲೆ ಪ್ರದೇಶದ ಸಾಮರ್ಥ್ಯ, ಪ್ರಮಾಣಿತ ಕಾರ್ಯವಿಧಾನ ರೂಪಿಸಿ ಮತ್ತು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವವರೆಗೆ ತಾತ್ಕಾಲಿಕವಾಗಿ ಚಾರಣಿಗರು ಅರಣ್ಯ ಪ್ರದೇಶ ಪ್ರವೇಶಿಸದಂತೆ ಪಾಲರ್ ವನ್ಯಜೀವಿ ವಲಯ ಅರಣ್ಯಾಧಿಕಾರಿ ಭಾರತಿ ನಂದಿಹಳ್ಳಿ ಆದೇಶ ಹೊರಡಿಸಿದ್ದಾರೆ.

  ಜೀವನ ನಿರ್ವಹಣೆ ಕಷ್ಟ: ಮ.ಬೆಟ್ಟಕ್ಕೆ ದೀಪಾವಳಿ, ಮಹಾ ಶಿವರಾತ್ರಿ, ಯುಗಾದಿ ಸೇರಿದಂತೆ ಇನ್ನಿತರ ಜಾತ್ರೆ ವೇಳೆ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಇದರಲ್ಲಿ ಸಾವಿರಾರು ಭಕ್ತರು ನಾಗಮಲೆಗೆ ತೆರಳುತ್ತಾರೆ. ತೊಳಸಿಕೆರೆ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ಸುಮಾರು 120ಕ್ಕೂ ಹೆಚ್ಚು ಜೀಪ್‌ಗಳು ಇಲ್ಲಿ ಸಂಚರಿಸುತ್ತಿದ್ದು, ಚಾರಣಿಗರನ್ನು ಹೊತ್ತು ಸಾಗುತ್ತಿದ್ದವು. ಇದನ್ನೇ ನಂಬಿಕೊಂಡು ಚಾಲಕರು ಹಾಗೂ ಮಾಲೀಕರ ಕುಟುಂಬಗಳು ಜೀವನ ನಡೆಸುತ್ತಿದ್ದವು. ಈ ನಿರ್ಬಂಧದಿಂದಾಗಿ ಕೆಲಸ ಇಲ್ಲದಂತಾಗಿದ್ದು, ಜೀವನ ನಿರ್ವಹಣೆಗೆ ತೊಡಕುಂಟಾಗಿದೆ. ಇದರಿಂದ ಕೆಲ ಚಾಲಕರು ಪರ್ಯಾಯ ಕೆಲಸ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

  ಮ.ಬೆಟ್ಟದಿಂದ ನಾಗಮಲೆಗೆ ತೆರಳುವ ಚಾರಿಣಿಗರ ಪ್ರವೇಶವನ್ನು ಸರ್ಕಾರದ ಆದೇಶದಂತೆ ಈಗಾಗಲೇ ನಿರ್ಬಂಧಿಸಲಾಗಿದೆ. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಸಂಬಂಧ ಸರ್ಕಾರದ ಮುಂದಿನ ಆದೇಶ ಆಞಈ ಬಳಿಕ ಬುಕ್ಕಿಂಗ್ ಆರಂಭಿಸಲಾಗುವುದು. ಸದ್ಯ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ತೆರಳುವ ಅವಕಾಶ ನೀಡಲಾಗಿದೆ.

  ಭಾರತಿ ನಂದಿಹಳ್ಳಿ ಆರ್‌ಎಫ್‌ಒ ಪಾಲಾರ್ ವನ್ಯಜೀವಿ ವಲಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts