ದೇಗುಲ ಗೋಪುರಕ್ಕೆ ಭಕ್ತರ ಸೆಳೆವ ಶಕ್ತಿ: ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಶಿರ್ವ
ದೇಗುಲ ದೇವರ ಶರೀರ ಇದ್ದಂತೆ. ಗೋಪುರ ಭಕ್ತರನ್ನು ಸೆಳೆಯುವ ಶಕ್ತಿ ಇರುವ ಮುಖದಂತೆ. ಗೋಪುರ ದೇವಸ್ಥಾನಕ್ಕೆ ಭಕ್ತರನ್ನು ಸೆಳೆಯುತ್ತದೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಪಾಜಕ ಕ್ಷೇತ್ರಕ್ಕೆ ಗುರುವಾರ ಬೆಳ್ಳೆ ದೊಡ್ಡಮನೆ ಸೀತಾರಾಮ ಶೆಟ್ಟಿ ನಿರ್ಮಿಸಿ ಕೊಟ್ಟ ವ್ಯಾಸಮಧ್ವ ಶಿಲಾಮಯ ರಾಜಗೋಪುರ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇವರಿಗೆ ನೀಡುವ ಸೇವೆ ಸಂಪತ್ತು, ಶ್ರೇಯಸ್ಸಾಗಿ ಮರು ಲಭ್ಯವಾಗುತ್ತದೆ. ಸಮುದ್ರದ ನೀರು ಸೂರ್ಯನಿಂದಾಗಿ ಆವಿಯಾಗುತ್ತದೆ. ಅದೇ ನೀರು ಮೋಡವಾಗಿ ಮಳೆಯಾಗಿ ವಾಪಸಾಗುತ್ತದೆ. ಹಾಗೆಯೇ ದೇವರ ಸೇವೆ ಎಂದೂ ನಿಷ್ಪ್ರಯೋಜಕವಾಗುವುದಿಲ್ಲ ಎಂದು ಹೇಳಿದರು.

ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು ಮಾತನಾಡಿದರು. ದಾನಿ ಆನ್‌ಶೋರ್ ಸಂಸ್ಥೆ ಮುಖ್ಯಸ್ಥ ಸೀತಾರಾಮ ಶೆಟ್ಟಿ ಮತ್ತು ಸಹಕಾರ ನೀಡಿದ ಉದ್ಯಮಿ, ಬೆಳ್ಳೆ ಗ್ರಾಪಂ ಉಪಾಧ್ಯಕ್ಷ ಕಕ್ರಮನೆ ಹರೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗೋಪುರ ನಿರ್ಮಾಣದ ಇಂಜಿನಿಯರ್ ಪಟ್ಟಾಭಿರಾಮ್ ಅವರನ್ನು ಗೌರವಿಸಲಾಯಿತು.

ಕಕ್ರಮನೆ ಹರೀಶ ಶೆಟ್ಟಿ ಮಾತನಾಡಿದರು. ಕ್ಷೇತ್ರದ ಅರ್ಚಕ ಮಾಧವ ಉಪಾಧ್ಯಾಯ, ಬೆಳ್ಳೆ ಮಹಾಬಲ ಶೆಟ್ಟಿ, ಗೋವಿಂದ ರಾಜ್ ಭಟ್, ಬೆಳ್ಳೆ ಮಹಾಬಲ ಶೆಟ್ಟಿ, ಭಾಸ್ಕರ ಶೆಟ್ಟಿ, ಸದಾನಂದ ಶೆಟ್ಟಿ, ದೇವರಾಜ್, ನಡಿಮನೆ ವಿಶ್ವನಾಥ ಶೆಟ್ಟಿ, ದಯಾನಂದ ಶೆಟ್ಟಿ, ಸದಾನಂದ ಶೆಣೈ ಮೊದಲಾದವರಿದ್ದರು.
ಮಧ್ವೇಶ ಆಚಾರ‌್ಯ ಮಠದ ನಿರೂಪಿಸಿದರು.