ನಿಖರ ಉತ್ತರದ ರುದ್ರಪ್ರಸಾದ

| ಪ್ರಶಾಂತ ರಿಪ್ಪನ್​ಪೇಟೆ

ಮನುಷ್ಯ ಎಷ್ಟೇ ಬುದ್ಧಿವಂತನಾದರೂ ಭಗವಂತನ ಮುಂದೆ ನಗಣ್ಯ. ವಿಶ್ವರಹಸ್ಯವನ್ನು ತನ್ನೊಳಗೆ ಹುದುಗಿಸಿಕೊಂಡ ಕೆಲವು ದೈವಸನ್ನಿಧಾನಗಳಲ್ಲಿ ನಡೆಯುವ ಘಟನೆಗಳನ್ನು ಪವಾಡ ಎನ್ನದೆ ವಿಧಿಯಿಲ್ಲ. ಮಾವಿನಹೊಳೆ ಮಹಾರುದ್ರ ಕ್ಷೇತ್ರದಲ್ಲಿ ಕೂಡ ಇಂಥ ಪವಾಡವನ್ನು ಪ್ರತ್ಯಕ್ಷ ಕಾಣಬಹುದು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾವಿನಹೊಳೆ ಮಹಾರುದ್ರಸ್ವಾಮಿ ಕ್ಷೇತ್ರದಲ್ಲಿ ಪ್ರತಿನಿತ್ಯ ಪವಾಡ ನಡೆಯುತ್ತದೆ. ಇಲ್ಲಿ ಭಗವಂತನೇ ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನೆಂಬ ನಂಬುಗೆಯಿದೆ. ಈ ಕಾರಣದಿಂದ ಭಕ್ತರು ಸ್ವಾಮಿಯನ್ನು ಮಾತನಾಡುವ ಮಹಾರುದ್ರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ದೇವರಲ್ಲಿ ಪ್ರಸಾದ ಕೇಳುವ ಪದ್ಧತಿ ಸಾಕಷ್ಟು ಕಡೆಗಳಲ್ಲಿದೆ. ಮಾವಿನಹೊಳೆ ಮಹಾರುದ್ರನ ಸನ್ನಿಧಾನದಲ್ಲಿ ಮಹಾರುದ್ರಸ್ವಾಮಿಯ ಮೂರ್ತಿಗೆ ಹೂವಿನ ಪಕಳೆಗಳನ್ನು ಅಂಟಿಸಲಾಗಿರುತ್ತದೆ. ಹೀಗಿದ್ದರೂ ಭಕ್ತರ ಬಹಿರಂಗ ಪ್ರಶ್ನೆಗಳಿಗೆ ಭಗವಂತ ಹೂವಿನ ಪ್ರಸಾದದ ಮೂಲಕ ನಿಖರ ಉತ್ತರ ನೀಡುತ್ತಾನೆ. ಮಹಾರುದ್ರನ ಮೂರ್ತಿಯ ಪ್ರತಿ ಅವಯವಗಳಿಂದ ಬೀಳುವ ಹೂವಿಗೂ ಒಂದೊಂದು ಅರ್ಥವಿದ್ದು; ಪರಂಪರಾನುಗತವಾಗಿ ಇದನ್ನು ವಿಶ್ಲೇಷಿಸಲಾಗುತ್ತದೆ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ರಾಜಕೀಯ ಗಣ್ಯರು ಇಲ್ಲಿ ಅಪ್ಪಣೆಯನ್ನು ಕೇಳಿ ಚುನಾವಣೆಗೆ ಸ್ಪರ್ಧಿಸುವ ಪರಿಪಾಠವಿದೆ. ಸಾಮಾನ್ಯ ಜನರ ಪಾಲಿಗಂತೂ ಇದೊಂದು ನ್ಯಾಯಾಲಯದಂತಾಗಿದೆ.

ಕ್ಷೇತ್ರದ ಹಿನ್ನೆಲೆ

ಈ ಕ್ಷೇತ್ರ ಪ್ರವರ್ಧಮಾನಕ್ಕೆ ಬಂದಿದ್ದು 15-16ನೆಯ ಶತಮಾನದಲ್ಲಿ. ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದ ಶ್ರೀ ಕೋಲುಶಾಂತಯ್ಯನವರು ಈ ಕ್ಷೇತ್ರಕ್ಕೆ ಬಂದು ಮಹಾರುದ್ರಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಜೀವಂತ ಸಮಾಧಿಯಾಗಿದ್ದಾರೆ. ಕೋಲುಶಾಂತಯ್ಯನವರು ಮಾವಿನಹೊಳೆ ಗ್ರಾಮದ ಹೊರವಲಯದ ಕರಡಿಗವಿಯಲ್ಲಿ ದೀರ್ಘಕಾಲ ಅನುಷ್ಠಾನ ಮಾಡುತ್ತಿದ್ದರು. ಸುದ್ದಿ ತಿಳಿದ ಮಠದ ವಂಶಸ್ಥರು ಹಾಗೂ ಗ್ರಾಮಸ್ಥರು ಸ್ವಾಮಿಗಳನ್ನು ಬೇಡಿಕೊಳ್ಳಲಾಗಿ ಗ್ರಾಮಕ್ಕೆ ಬಂದರು. ಹೀಗೆ ಬರುವಾಗ ತಮ್ಮ ಜೋಳಿಗೆಯಲ್ಲಿ ಚೌಡೇಶ್ವರಿದೇವಿಯನ್ನು ತಂದು ಗ್ರಾಮದಲ್ಲಿ ಸ್ಥಾಪಿಸಿದರು. ಇಂದಿಗೂ ದೇವಿ ಜೋಳಿಗೆ ಚೌಡಮ್ಮ ಎಂಬ ಹೆಸರಿನಿಂದ ಪೂಜೆಗೊಳ್ಳುತ್ತಿದ್ದಾಳೆ.

ಈ ಕ್ಷೇತ್ರದ ಮೂಲ ಅಧಿಪತಿ ಶ್ರೀಮಲ್ಲಿಕಾರ್ಜುನ ಸ್ವಾಮಿ. ದೇವಾಲಯದ ಪಕ್ಕದಲ್ಲಿದ್ದ ಒಂದು ಹುತ್ತದಲ್ಲಿ ಶ್ರೀಮಹಾರುದ್ರಸ್ವಾಮಿಯ ಮೂರ್ತಿ ಇರುವುದನ್ನು ಯೋಗದೃಷ್ಟಿಯಿಂದ ಅವಲೋಕಿಸಿದ ಸ್ವಾಮಿಗಳು ಆ ಮೂರ್ತಿಯನ್ನು ಹೊರತೆಗಿಸಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಪಕ್ಕದಲ್ಲಿ ಪ್ರತಿಷ್ಠಾಪಿಸಿ ಆ ಮೂರ್ತಿಯ ಹಿಂದೆ ತಾವು ಜೀವಂತ ಸಮಾಧಿಯಾದರು. ಸಮಾಧಿಯಾಗುವ ಮೊದಲು ‘ನಂಬಿ ಬರುವ ಭಕ್ತರಿಗೆ ಮಹಾರುದ್ರಸ್ವಾಮಿಯ ಮುಖಾಂತರ ನಾನು ಆಶೀರ್ವಾದ ನೀಡಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದಿದ್ದರು. ಅಂತೆಯೇ ಮಹಾರುದ್ರಸ್ವಾಮಿಯ ಮುಖಾಂತರ ಸ್ವಾಮಿಗಳು ಉತ್ತರ ನೀಡುತ್ತಿದ್ದಾರೆಂಬ ನಂಬಿಕೆಯಿದೆ.

ಹೋಗುವ ಮಾರ್ಗ

ಬೆಂಗಳೂರಿನಿಂದ 273 ಕಿ.ಮೀ. ದೂರವಿರುವ ಮಾವಿನಹೊಳೆಗೆ ರಾ.ಹೆ. 48ರ ಮೂಲಕ ಚಿತ್ರದುರ್ಗ ಮಾರ್ಗವಾಗಿ ಚನ್ನಗಿರಿ ತಲುಪಿ ಅಲ್ಲಿಂದ ಹೋಗಬಹುದು.

ನಿರಂತರ ಧರ್ಮಜಾಗೃತಿ

ಈ ಕ್ಷೇತ್ರದಲ್ಲಿ ಪ್ರತಿ ಶ್ರಾವಣಮಾಸ, ಮಹಾಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಶ್ರಾವಣಮಾಸದಲ್ಲಿ ಒಂದು ತಿಂಗಳ ಪರ್ಯಂತ ನಿತ್ಯ ರುದ್ರಾಭಿಷೇಕ, ಪೂಜೆ, ದಾಸೋಹ ನಡೆದರೆ; ಶಿವರಾತ್ರಿಯಲ್ಲಿ ಪಲ್ಲಕ್ಕಿ ಉತ್ಸವ, ಜಂಗಮಾರಾಧನೆ, ಅಮ್ಮನವರ ಜಾತ್ರೆ ಮತ್ತು ಮಹಾ ದಾಸೋಹ ನಡೆಯುತ್ತದೆ. ಹಾಗೆಯೇ ಕಾರ್ತಿಕ ಮಾಸದ ಪೌರ್ಣಿಮೆಯಂದು ದೀಪೋತ್ಸವ ನಡೆಯುತ್ತದೆ. ತಾವರೆಕೆರೆ ಶಿಲಾಮಠದ ಶ್ರೀಗಳಾದ ಯಡಿಯೂರು ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಇಲ್ಲಿನ ಎಲ್ಲ ಧಾರ್ವಿುಕ ಉತ್ಸವಗಳು ನಡೆಯುತ್ತವೆ. ಹೊನ್ನಾಳಿ ಹಿರೇಕಲ್ಮಠದ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಹ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ. ಇದೇ ನ. 11-12ರಂದು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗುರುಮಹಾರುದ್ರಸ್ವಾಮಿ ನಿತ್ಯದಾಸೋಹ ಮಂದಿರ ಹಾಗೂ ಶ್ರೀಮಲ್ಲಿಕಾರ್ಜುನಸ್ವಾಮಿ ಸಮುದಾಯ ಭವನ ಲೋಕಾರ್ಪಣೆ ನಡೆಯಲಿದೆ. ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ. ವಿವಿಧ ಮಠಾಧೀಶರು, ಸಮಾಜದ ಗಣ್ಯರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.