ಯಲಬುರ್ಗಾ: ದೇವರ ಹೆಸರಿನಲ್ಲಿ ಪ್ರಾಣಿಬಲಿ ನಿಲ್ಲಿಸಬೇಕು. ಇಂತಹ ಕೆಟ್ಟ ಸಂಪ್ರದಾಯ ತೊಲಗಿಸಲು ಸಾಮೂಹಿಕ ಕೈಜೋಡಿಸಬೇಕು ಎಂದು ತಿಂಥಿಣಿ ಬ್ರಿಜ್ಡ್‌ನ ಕಾಗಿನೆಲೆ ಕನಕಗುರುಪೀಠದ ಸಿದ್ಧರಾಮನಂದಾ ಸ್ವಾಮೀಜಿ ಹೇಳಿದರು.
ದಮ್ಮೂರಿನಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿದರು. ದೇವರ ಹೆಸರಿನಲ್ಲಿ ಪ್ರಾಣಿ ಕೊಲ್ಲುವುದು, ಕುಡಿಯುವುದು ಭಗವಂತನಿಗೆ ಮಾಡುವ ಅಪಮಾನ. ಜೀವನದಲ್ಲಿ ಹೊಂದಾಣಿಕೆ ಮುಖ್ಯ. ಮೊಬೈಲ್ ಬಂದ ಮೇಲೆ ಬದುಕು ಬದಲಾಗಿದೆ. ಮೂಲ ಕಸುಬುಗಳು ಮರೆಯಾಗುತ್ತಿವೆ. ಹಾಲುಮತ ಸಮಾಜ ಸರ್ವಧರ್ಮವನ್ನು ಆರಾಧಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು ಎಂದರು.
ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜದವರು ಬಂಡಾರದ ಮಹತ್ವ ತಿಳಿಯಬೇಕಿದೆ. ಅದನ್ನು ಎರಚದೇ ಹಣೆಗೆ ಹಚ್ಚಿಕೊಳ್ಳಬೇಕು. ಸ್ವಾಮೀಜಿಗಳ ಆಶೀರ್ವಚನ ಆಲಿಸಿದಾಗ ಜೀವನ ಪಾವನವಾಗುತ್ತದೆ. ದಮ್ಮೂರಿನಲ್ಲಿ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಕಾರ್ಯಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಧಾರ್ಮಿಕ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು. ದಾನ-ಧರ್ಮದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಲೇಬಗೇರಿಯ ಸರಸ್ವತಿ ಪೀಠದ ನಾಗಮೂತೇರ್ಂದ್ರ ಸ್ವಾಮೀಜಿ, ಬಾದಿಮನಾಳ-ಹಾಲವರ್ತಿಯ ಶಿವಸಿದ್ದೇಶ್ವರ ಸ್ವಾಮೀಜಿ, ಧರ್ಮರಮಠದ ಹನಮಂತಪ್ಪಜ್ಜ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ವೀರನಗೌಡ ಬಳೂಟಗಿ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಪ್ರಮುಖರಾದ ಶರಣಯ್ಯ ಹಿರೇಮಠ, ಶಿವಶಂಕರ ದೇಸಾಯಿ, ಈಶ್ವರ ಅಟಮಾಳಗಿ, ಸತೀಶ ಗಾಂವಕಾರ, ರಸೂಲಸಾಬ ದಮ್ಮೂರ, ಭೀಮಣ್ಣ ಜರಕುಂಟಿ, ಶರಣಗೌಡ ಗೌಡ್ರ, ಈರಣ್ಣ ರ‌್ಯಾವಣಕಿ, ಸಂಗಯ್ಯ ಶಾಸ್ತ್ರೀಮಠ, ಮೌನೇಶ ಬಡಿಗೇರ, ಭೀಮನಗೌಡ ಚಿಕ್ಕಗೌಡ್ರ ಇತರರಿದ್ದರು.