More

  ಅಮೆರಿಕದಲ್ಲಿ ಮಂದಿರಯುಗ; 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ

  ಅಮೆರಿಕದಲ್ಲಿ ಪುಟ್ಟ ಭಾರತವೇ ನೆಲೆಸಿದ್ದು, ಹಿಂದು ಸನಾತನ ಸಂಸ್ಕೃತಿಯ ಆರಾಧನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೊರಟಿದೆ. ಭಾರತೀಯ ಮೂಲದವರು ಮಾತ್ರವಲ್ಲ, ವಾರಾಂತ್ಯದ ರಜೆಯಲ್ಲಿ ಮಂದಿರಗಳಿಗೆ ಭೇಟಿ ನೀಡುವ ಅಮೆರಿಕನ್ನರ ಸಂಖ್ಯೆಯೂ ಕಡಿಮೆ ಏನಲ್ಲ. ಹಿಂದು ಹಬ್ಬಗಳು, ಉತ್ಸವಗಳ ಆಚರಣೆಯೂ ಸಡಗರ, ಸಂಭ್ರಮದಿಂದ ನಡೆಯುತ್ತಿರುವುದು, ಸಂಸ್ಕೃತಿಯ ಶಕ್ತಿಗೆ ಸಾಕ್ಷಿ.

  ಕಾಲದ ಸ್ಥಿತ್ಯಂತರಗಳು ಹಲವು. ಆದರೆ ಅಮೆರಿಕದಲ್ಲಿ ಭಾರತೀಯ ಮೂಲದವರಿಗೆ ಈಗ ಭಕ್ತಿ ಕಾಲ! 2006ರಲ್ಲಿ ಇಡೀ ಅಮೆರಿಕದಲ್ಲಿ 53 ಮಂದಿರಗಳಿದ್ದವು. 2016ರಲ್ಲಿ ಈ ಸಂಖ್ಯೆ 250ಕ್ಕೆ ಏರಿಕೆಯಾಯಿತು ಮತ್ತು ಪ್ರಸ್ತುತ (2023ರಲ್ಲಿ) 750 ಮಂದಿರಗಳಿದ್ದು, ಕಳೆದ ಆರು ವರ್ಷಗಳಲ್ಲೇ ಐನೂರು ದೇವಸ್ಥಾನಗಳು ನಿರ್ವಣಗೊಂಡಿರುವುದು, ಅನಿವಾಸಿ ಭಾರತೀಯರ ಭಕ್ತಿ ಪರಂಪರೆಗೆ ಸಾಕ್ಷಿಯಾಗಿದೆ.

  ಕ್ಯಾಲಿಫೋರ್ನಿಯಾ ಒಂದರಲ್ಲೇ 120 ಮಂದಿರಗಳಿವೆ. ನ್ಯೂಯಾರ್ಕ್​ನಲ್ಲಿ 100, ಫ್ಲೋರಿಡಾದಲ್ಲಿ 60, ಜಾರ್ಜಿಯಾದಲ್ಲಿ 30 ದೇವಸ್ಥಾನಗಳಿವೆ. ಭಾರತೀಯರು ತಮ್ಮ ಸಂಸ್ಕೃತಿಯೊಂದಿಗೆ ಬೆರೆಯಲು ಮತ್ತು ಈ ಸಂಸ್ಕೃತಿಯ ಶಕ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಅಮೆರಿಕದ ಪ್ರತಿ ರಾಜ್ಯದಲ್ಲೂ ಮಂದಿರಗಳನ್ನು ನಿರ್ವಿುಸಿದ್ದಾರೆ. ಉದಾಹರಣೆಗೆ, ಟೆನೆಸಿ ರಾಜ್ಯದ ಚಟ್ನುಗಾ ನಗರದಲ್ಲಿ ಭಾರತೀಯ ಮೂಲದವರ ಸಂಖ್ಯೆ 1 ಸಾವಿರ. ಇವರು ಇತ್ತೀಚೆಗೆ, 56 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ವಿುಸಿದ್ದಾರೆ.

  ಅಧ್ಯಾತ್ಮ, ಭಕ್ತಿ ಆಂದೋಲನದತ್ತ ಸ್ಥಳೀಯ ಅಮೆರಿಕನ್ನರು ಆಕರ್ಷಿತರಾಗಿದ್ದು, ವಾರಾಂತ್ಯದ ರಜೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದಲ್ಲದೆ ಭಜನೆ, ಇತರ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

  ದಾನದಲ್ಲಿ ಎತ್ತಿದ ಕೈ: ದೇಗುಲಗಳ ನಿರ್ವಣಕ್ಕಾಗಿ ಅನಿವಾಸಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ದಾನ ನೀಡುತ್ತಿದ್ದಾರೆ. ಫ್ಲೋರಿಡಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ರಕ್ಷಿತ್ ಶಾ, ಮಂದಿರಗಳ ಜೀಣೋದ್ಧಾರಕ್ಕೆ 8 ಕೋಟಿ ರೂ.ಗಳ ನೆರವು ನೀಡಿದ್ದಾರೆ. ಇದಲ್ಲದೆ, ಓಹಿಯೋ ನಗರದಲ್ಲಿ ಮಂದಿರ ನಿರ್ವಣಕ್ಕೆ 15 ಕೋಟಿ ರೂ. ನೀಡಿದ್ದಾರೆ.

  ಯೋಗದತ್ತ ಚಿತ್ತ: ಭಾರತೀಯ ಯೋಗಕ್ಕೆ ಅಮೆರಿಕದಲ್ಲಿ ಭಾರಿ ಬೇಡಿಕೆ ಇದೆ. ಒತ್ತಡದ ಜೀವನಶೈಲಿ, ಖಿನ್ನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಅಮೆರಿಕನ್ನರು ಇದರಿಂದ ಹೊರಬರಲು ಯೋಗ, ಧ್ಯಾನದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ, ಮಹಾನಗರಗಳಲ್ಲಿ ಯೋಗ ತರಗತಿಗಳ ಸಂಖ್ಯೆ ಹೆಚ್ಚಿದೆ. ಯೋಗ ಕಲಿಸುವ ಕಾಲೇಜು, ಸಂಸ್ಥೆಗಳೂ ಹುಟ್ಟಿಕೊಂಡಿವೆ. ಬೇಸಿಗೆಯಲ್ಲಿ ಯೋಗದ ವಿಶೇಷ ಶಿಬಿರ, ತರಗತಿಗಳನ್ನು ಆಯೋಜಿಸಲಾಗುತ್ತಿದೆ. ಸಂಸ್ಕೃತವನ್ನು ಅನಿವಾಸಿ ಭಾರತೀಯರು ಮಾತ್ರವಲ್ಲದೆ ಅಮೆರಿಕನ್ನರು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಹಿಂದು ಯುನಿವರ್ಸಿಟಿ ಆಫ್ ಅಮೆರಿಕ ಎಂದೇ ಕರೆಯಲ್ಪಡುವ International Vedic Hindu Universityಯನ್ನು ಫ್ಲೋರಿಡಾ ಪ್ರಾಂತ್ಯದಲ್ಲಿ 1993ರಲ್ಲಿ ಪ್ರಾರಂಭಿಸಲಾಗಿದೆ. ಕ್ಯಾಂಪಸ್ ಹಾಗೂ ಇಂಟರ್​ನೆಟ್ ಮೂಲಕ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದಾಗಿ ವಿ.ವಿ ಹೇಳಿಕೊಂಡಿದೆ. ಇಲ್ಲಿ ಸಂಸ್ಕೃತ, ಹಿಂದೂ ತತ್ತ್ವಶಾಸ್ತ್ರ, ಯೋಗ, ಆಯುರ್ವೆದ ವಿಷಯಗಳನ್ನು ಬೋಧಿಸಲಾಗುತ್ತದೆ.

  ಸಪ್ತಪದಿ ತುಳಿಯುತ್ತಿರುವ ಅಮೆರಿಕನ್ನರು

  ಹಿಂದು ಸಂಸ್ಕೃತಿ, ಆಚಾರ-ವಿಚಾರ ಅಮೆರಿಕನ್ನರನ್ನು ಬಹುವಾಗಿ ಪ್ರಭಾವಿಸಿದೆ. ಅವರೂ ಹಿಂದುಗಳಂತೆ ದೇವಸ್ಥಾನಕ್ಕೆ ಹೋಗುವುದು, ಅರ್ಚನೆ ಮಾಡಿಸುವುದು, ಹಿಂದುಗಳ ಹಬ್ಬಗಳನ್ನು ಆಚರಿಸುವುದು, ಅದಕ್ಕಾಗಿ ತಮ್ಮ ಮನೆಗಳನ್ನು ಸಿಂಗರಿಸುವಂಥ ಸಂಭ್ರಮ, ಆಚರಣೆಗಳು ಸಾಕಷ್ಟು ಪ್ರಮಾಣದಲ್ಲಿ ಕಾಣಲು ಸಿಗುತ್ತವೆ. ಅಮೆರಿಕನ್ನರಿಗೆ ಗಾಢವಾಗಿ ಇಷ್ಟವಾಗಿರೋದು ಹಿಂದು ವಿವಾಹ ಪದ್ಧತಿ. ಅಗ್ನಿಸಾಕ್ಷಿಯಾಗಿ ಮದುವೆಯಾಗುವುದು, ಸಪ್ತಪದಿ ತುಳಿಯುವುದು, ವಿಶಿಷ್ಟ ವೇಷಭೂಷಣ ಧರಿಸುವುದು ಸೇರಿದಂತೆ ಮದುವೆಯ ಬಹುತೇಕ ಸಂಗತಿಗಳಿಗೆ ಅಮೆರಿಕ ಮನಸ್ಸುಗಳು ಫಿದಾ ಆಗಿವೆ. ಈ ಹಿನ್ನೆಲೆಯಲ್ಲೇ ಹಿಂದು ವಿವಾಹ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಡುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದು ಮುಖ್ಯವಾದ ಸಂಗತಿ ಎಂದರೆ ಅಮೆರಿಕದ ಹಿಂದುಗಳಲ್ಲಿ ವಿವಾಹ ವಿಚ್ಛೇದನ ಪ್ರಮಾಣವೂ ಇತರರಿಗಿಂತ ಕಡಿಮೆ ಇದೆ.

  ನ್ಯೂಜೆರ್ಸಿಯಲ್ಲಿ ಅತಿ ದೊಡ್ಡ ಮಂದಿರ

  ಭಾರತದಿಂದ ಹೊರಗಿರುವ ಅತಿ ದೊಡ್ಡ ಹಿಂದು ಮಂದಿರ ನ್ಯೂಜೆರ್ಸಿಯ ಲಿಟಲ್ ರಾಬಿನ್ಸ್​ವಿಲ್ಲೆಯಲ್ಲಿ ನಿರ್ವಣಗೊಂಡಿದೆ. 183 ಎಕರೆಯಲ್ಲಿ, 850 ಕೋಟಿ ರೂ. ವೆಚ್ಚದಲ್ಲಿ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವನ್ನು ನಿರ್ವಿುಸಲಾಗಿದ್ದು, ಇದೇ ಅಕ್ಟೋಬರ್ 8ರಂದು ಉದ್ಘಾಟನೆಗೊಂಡಿದೆ. 2011ರಿಂದ ಆರಂಭವಾದ ಈ ದೇಗುಲದ ಕಾಮಗಾರಿ, 12 ವರ್ಷದಲ್ಲಿ ಪೂರ್ಣಗೊಂಡಿದ್ದು, 12,500 ಸ್ವಯಂಸೇವಕರು ನೆರವು ನೀಡಿದ್ದಾರೆ. ಪ್ರಾಚೀನ ಭಾರತ ಸಂಸ್ಕೃತಿಯ 10 ಸಾವಿರ ವಿಗ್ರಹಗಳ ರಚನೆಗಳನ್ನು ಇದರಲ್ಲಿ ಕೆತ್ತಲಾಗಿದೆ. ಪ್ರಾಚೀನ ಹಿಂದು ಧರ್ಮಗ್ರಂಥಗಳ ಆಧಾರದ ಮೇಲೆ ದೇಗುಲ ನಿರ್ವಣಗೊಂಡಿದ್ದು, ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ.

  ಸಾಗಿ ಬಂದ ಹಾದಿ

  ದಕ್ಷಿಣ ಫ್ಲೋರಿಡಾದ ತಾಂಪಾದಲ್ಲಿರುವ ವಿಷ್ಣು ದೇವಸ್ಥಾನ ಅಮೆರಿಕದ ಹಳೆಯ ದೇವಸ್ಥಾನ. ಇದನ್ನು 160 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ವೇದಾಂತ ಸೊಸೈಟಿ 1906ರಲ್ಲಿ ಅಮೆರಿಕದಲ್ಲಿ ದೇವಸ್ಥಾನಗಳ ನಿರ್ಮಾಣ ಕಾರ್ಯ ಆರಂಭಿಸಿತ್ತು. ರಾಧಾ ಮಾಧವ್ ಧಾಮ್ ಚಾರಿಟೇಬಲ್ ಟ್ರಸ್ಟ್ ಉತ್ತರ ಅಮೆರಿಕದ ಟೆಕ್ಸಾಸ್ ಬಳಿಯ ಆಸ್ಟಿನ್​ನಲ್ಲಿ ನಿರ್ವಿುಸಿರುವ ಶ್ರೀ ರಾಸೇಶ್ವರಿ ರಾಧಾ ರಾಣಿ ಟೆಂಪಲ್ ಕೂಡ ಸಾಕಷ್ಟು ಹಳೆಯದು. 1971ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಮಹಾವಲ್ಲಭ್ ಗಣಪತಿ ದೇವಸ್ಥಾನವನ್ನು ನಿರ್ವಿುಸಲಾಯಿತು, ಸ್ವಾಮಿ ನಾರಾಯಣ ದೇವಸ್ಥಾನಗಳನ್ನು ಹಲವು ನಗರಗಳಲ್ಲಿ ಸ್ಥಾಪಿಸಲಾಗಿದೆ. 1994ರಲ್ಲಿ ಮಿಚಿಗನ್ ಬಳಿ ಸ್ಥಾಪಿಸಲಾಗಿರುವ ಪರಾಶಕ್ತಿ ಮಂದಿರವೂ ತುಂಬ ಪ್ರಸಿದ್ಧಿಯನ್ನು ಹೊಂದಿದೆ. 2002ರಲ್ಲಿ ಉದ್ಘಾಟಿಸಲ್ಪಟ್ಟ ಭಾರತೀಯ ಟೆಂಪಲ್ ಅನ್ನು Indian American Cultural Center of Northwest Indiana (IACC) ನಿರ್ವಿುಸಿದ್ದು, ಭಾರತದ ವಿವಿಧ ಸಂಪ್ರಯದಾಯಗಳ ಪ್ರಕಾರ (ಜೈನ ಸಂಪ್ರದಾಯವೂ ಸೇರಿ) ಇಲ್ಲಿ ಪೂಜೆ ನಡೆಯುತ್ತದೆ. ಅಲ್ಲದೆ ಇದೊಂದು ಸಾಂಸ್ಕೃತಿಕ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಲನ್​ಹಾಮ್ ಶ್ರೀ ಶಿವವಿಷ್ಣು ದೇವಸ್ಥಾನಕ್ಕೆ 2009ರ ಅಕ್ಟೋಬರ್​ನಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಭೇಟಿ ನೀಡಿ ದರ್ಶನ ಪಡೆದು, ಕೆಲ ಹೊತ್ತು ಕಳೆದಿದ್ದರು. ಅಲ್ಲದೆ ದೇವಸ್ಥಾನದ ಮುಖ್ಯ ಅರ್ಚಕರು ಒಬಾಮರಿಗೆ ಕೆಂಪು ವರ್ಣದ ಶಾಲು ಹಾಕಿ ಗೌರವಿಸಿದ್ದರು.

  ಪುನರ್ಜನ್ಮದಲ್ಲಿ ನಂಬಿಕೆ!: ಹಿಂದುಗಳು ಪುನರ್ಜನ್ಮದಲ್ಲಿ ಅಪಾರ ವಾದ ನಂಬಿಕೆ ಇರಿಸಿಕೊಂಡಿದ್ದಾರೆ. ‘ಈ ಜನ್ಮದಲ್ಲಿ ಒಳ್ಳೆಯ ಕರ್ಮ (ಕೆಲಸ)ಗಳನ್ನು ಮಾಡಿದರೆ ಮುಂದಿನ ಜನ್ಮದಲ್ಲೂ ಒಳ್ಳೆಯವರಾಗಿ ಜನಿಸುತ್ತೇವೆ’ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಹಿಂದುಗಳ ಈ ಪುನರ್ಜನ್ಮ ಸಿದ್ಧಾಂತ ಮೇಲೆ ಅಮೆರಿಕನ್ನರೂ ವಿಶ್ವಾಸ ಮಾಡ ತೊಡಗಿದ್ದಾರೆ. ‘ದೇಹ ನಶ್ವರ ಆತ್ಮ ಶಾಶ್ವತ’ ಎಂಬ ಸಂಗತಿಯನ್ನು ನಂಬುತ್ತಿದ್ದಾರೆ.

  ನ್ಯೂಯಾರ್ಕ್​ನಲ್ಲಿ ಟೆಂಪಲ್ ಸ್ಟ್ರೀಟ್: ನ್ಯೂಯಾರ್ಕ್ ನಗರದ ಒಂದು ಪ್ರಮುಖ ರಸ್ತೆಗೆ ಗಣೇಶ ಟೆಂಪಲ್ ಸ್ಟ್ರೀಟ್ ಎಂದು ನಾಮಕರಣ ಮಾಡಲಾಗಿದೆ. 1971ರಲ್ಲಿ ಈ ಗಣೇಶ ಮಂದಿರ ಸ್ಥಾಪಿಸಲಾಗಿದೆ. ಮುಂಚೆ, ಈ ರಸ್ತೆಯನ್ನು ‘ಬ್ರೌನಿ ಸ್ಟ್ರೀಟ್’ ಎಂದು ಕರೆಯಲಾಗುತ್ತಿತ್ತು. ಆದರೆ, ಮಂದಿರದ ಖ್ಯಾತಿ ಹೆಚ್ಚಾಗಿದ್ದರಿಂದ ಮತ್ತು ಅಲ್ಲಿ ಭೇಟಿ ನೀಡುವವರ ಸಂಖ್ಯೆ ಏರಿಕೆ ಆಗಿದ್ದರಿಂದ, ಈಗ ಗಣೇಶ ಟೆಂಪಲ್ ಸ್ಟ್ರೀಟ್ ಎಂದೇ ಕರೆಯಲಾಗುತ್ತಿದೆ.

  ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

  ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts