ಪರಿಸರ ನಾಶದಿಂದ ತಾಪಮಾನ ಏರಿಕೆ

  • ಚಾಮರಾಜನಗರ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಭೂ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
  • ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ದಿನೇ ದಿನೆ ತಾಪಮಾನ ಏರಿಕೆಯಾಗುತ್ತಿದೆ. ಇದನ್ನು ತಡೆಗಟ್ಟಲು ಗಿಡ, ಮರಗಳನ್ನು ಬೆಳೆಸಬೇಕು. ಪ್ರತಿಯೊಬ್ಬರೂ ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆ, ಕಟ್ಟೆಗಳನ್ನು ಉಳಿಸಬೇಕು ಎಂದರು.
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಡಾ.ಪಿ.ದೇವರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಸಮಾನತೆ ನೀಡುವ ಸಂವಿಧಾನವನ್ನು ರಚಿಸಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಸಂವಿಧಾನದಲ್ಲಿ ಎಸ್ಸಿ, ಎಸ್ಟಿಗೆ ಉಚಿತ ಕಾನೂನು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
  • ಮೈಸೂರಿನ ಮಾನಸ ಗಂಗೋತ್ರಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅತಿಥಿ ಉಪನ್ಯಾಸಕಿ ಡಾ.ಟಿ.ಪದ್ಮಶ್ರೀ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಶಿಕ್ಷಣ, ಸಂಘಟನೆ, ಹೋರಾಟವು ಅಂಬೇಡ್ಕರ್ ಅವರ ಧ್ಯೇಯವಾಗಿತ್ತು. ಗ್ರಾಮೀಣ ಭಾಗದ ಜನರು ಮೌಢ್ಯತೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
  • ಸಮತಾ ಸೊಸೈಟಿ ಅಧ್ಯಕ್ಷ ಇರ್ಫಾನ್ ಪಾಷಾ, ವಕೀಲ ದಲಿತರಾಜು, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿದರು. ಸಮತಾ ಸೊಸೈಟಿಯ ಸಂಯೋಜಕರಾದ ದೀಪು, ಗುರುಮೂರ್ತಿ, ರಾಜು ಇತರರಿದ್ದರು.