ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸ್ಮರಣ್ ರೆಡ್ಡಿ ನಿರ್ದೇಶನದ ಅಂಜನ್ ರಾಮಚಂದ್ರ, ಶ್ರಾವಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ “ಲವ್ ರೆಡ್ಡಿ’. ಕಳೆದ ಅ. 18ರಂದು ಚಿತ್ರ ತೆಲುಗಿನಲ್ಲಿ ರಿಲೀಸ್ ಆಗಿತ್ತು. ಇದೀಗ ಇದೇ ತಿಂಗಳ 22ರಂದು ಕನ್ನಡದಲ್ಲಿ ಡಬ್ ಆಗಿ ಕರ್ನಾಟಕದಲ್ಲೂ ಬಿಡುಗಡೆಯಾಗಲು ರೆಡಿಯಾಗುತ್ತಿದೆ. ವಿಶೇಷ ಅಂದರೆ ನಟ ವಿಜಯ್ ಕುಮಾರ್ “ಲವ್ ರೆಡ್ಡಿ’ಯನ್ನು ನೋಡಿ, ಇಷ್ಟಪಟ್ಟು ಕನ್ನಡದಲ್ಲಿ ಪ್ರೆಸೆಂಟ್ ಮಾಡುತ್ತಿದ್ದು, ಹೊಂಬಾಳೆ ಫಿಲಂಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ.
ಇತ್ತೀಚೆಗಷ್ಟೆ ವಿಜಯ್ ಅವರೇ ಈ ಕನ್ನಡ ಅವತರಣಿಕೆಯ ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು. ಆಂಧ್ರ ಮತ್ತು ಕರ್ನಾಟಕದ ಗಡಿಭಾಗದಲ್ಲಿ ನಡೆದ ನೈಜ ಟನೆಯಾಧಾರಿತ ಚಿತ್ರವಿದು. ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಎನ್.ಟಿ. ರಾಮಸ್ವಾಮಿ ಇಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸಿದ್ದು, “ಹೊಸಬರ ಚಿತ್ರವಾದರೂ ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ರಿಲೀಸ್ ಆದ ಸಮಯದಲ್ಲಿ ಹೈದರಾಬಾದ್ನಲ್ಲಿ ಥಿಯೇಟರ್ ಒಂದಕ್ಕೆ ಭೇಟಿ ನೀಡಿದ್ದಾಗ ಏಕಾಯೇಕಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಬಾರಿಸೋಕೆ ಶುರು ಮಾಡಿದರು. ನನ್ನ ಪಾತ್ರ ನೋಡಿ ಅವರಿಗೆ ಕೋಪ ಬಂದು ನನ್ನ ಮೇಲೆ ಕೈಮಾಡಿದ್ದರು. ಇದು ಒಂದು ರೀತಿಯಲ್ಲಿ ವರವೂ ಹೌದು. ಏಕೆಂದರೆ ನನ್ನ ಪಾತ್ರ ಜನರಿಗೆ ಮುಟ್ಟಿದರೆ ಮಾತ್ರ ಅಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು’ ಎಂದು ಹೇಳಿಕೊಂಡರು.
ನಾಯಕ ಅಂಜನ್ ರಾಮಚಂದ್ರ ಮತ್ತು ನಾಯಕಿ ಶ್ರಾವಣಿ, “ನಾವೂ ಕನ್ನಡದವರೇ, ದಯವಿಟ್ಟು ಸಿನಿಮಾ ನೋಡಿ ನಮ್ಮನ್ನು ಬೆಂಬಲಿಸಿ’ ಎಂದು ಮನವಿ ಮಾಡಿಕೊಂಡರು.