ದಿಲೆರ್ ಡೆಲ್ಲಿಗೆ ಬೆದರಿದ ತೆಲುಗು ಬುಲ್ಸ್

ಪುಣೆ: ಆರಂಭಿಕ ಹಿನ್ನಡೆ ನಡುವೆಯೂ ಸಂಘಟಿತ ನಿರ್ವಹಣೆ ತೋರಲು ಯಶಸ್ವಿಯಾದ ದಿಲೆರ್ ಡೆಲ್ಲಿ ತಂಡ ಚೊಚ್ಚಲ ಆವೃತ್ತಿಯ ಇಂಡೋ-ಇಂಟರ್​ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್) ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು.

ಬಾಲೆವಾಡಿಯ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 40-31 ಅಂಕಗಳಿಂದ ತೆಲುಗು ಬುಲ್ಸ್ ತಂಡವನ್ನು ಸೋಲಿಸಿತು. ಇದರೊಂದಿಗೆ ಡೆಲ್ಲಿ ತಂಡ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ತೆಲುಗು ಬುಲ್ಸ್ ತಂಡ ಹ್ಯಾಟ್ರಿಕ್ ಸೋಲು ಕಂಡಿತು. ಮೊದಲ ಕ್ವಾರ್ಟರ್​ನಲ್ಲೇ ತೆಲುಗು ತಂಡ 13-7ರಿಂದ ಭಾರಿ ಮುನ್ನಡೆ ಸಾಧಿಸುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಲು ಯತ್ನಿಸಿತು. ಆದರೆ 2ನೇ ಹಾಗೂ 3ನೇ ಕ್ವಾರ್ಟರ್​ನಲ್ಲಿ ಡೆಲ್ಲಿ ಆಟಗಾರರ ಪ್ರದರ್ಶನ ಎದುರು ತೆಲಗು ಬುಲ್ಸ್ ಸಂಪೂರ್ಣ ಮಂಕಾಯಿತು. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ತೆಲುಗು ತಂಡ ಸಮಬಲದ ಹೋರಾಟ ನೀಡಿದರೂ, ಡೆಲ್ಲಿ ತಂಡ ಜಯ ದಾಖಲಿಸಲು ಯಶಸ್ವಿಯಾಯಿತು. ಇದರೊಂದಿಗೆ ಡೆಲ್ಲಿ 6 ಅಂಕಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇಂದಿನ ಪಂದ್ಯಗಳು

ಹರಿಯಾಣ vs ಪುಣೆ ಪ್ರೖೆಡ್

·ಆರಂಭ: ರಾತ್ರಿ 8.00

ಪಾಂಡಿಚೇರಿ vs ಬೆಂಗಳೂರು

·ಆರಂಭ: ರಾತ್ರಿ 9.00

ದಿಲೆರ್ ಡೆಲ್ಲಿ vs ಚೆನ್ನೈ

·ಆರಂಭ: ರಾತ್ರಿ 10.00

·ನೇರಪ್ರಸಾರ: ಡಿ ಸ್ಪೋರ್ಟ್ಸ್