ಶಿಥಿಲ ಮುಳುಗು ಸೇತುವೆಗೆ ಕೊನೆಗೂ ಮುಕ್ತಿ

ಆರ್.ಬಿ. ಜಗದೀಶ್ ಕಾರ್ಕಳ
ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿರುವ ಕಾರ್ಕಳ ನಗರ-ದುರ್ಗಾ ತೆಳ್ಳಾರು ಮುಳುಗು ಸೇತುವೆಗೆ ಕೊನೆಗೂ ಮುಕ್ತಿ ದೊರೆತಿದೆ. ಪಕ್ಕದಲ್ಲಿ ನಿರ್ಮಾಣವಾಗಿರುವ ನೂತನ ಸೇತುವೆಯಿಂದಾಗಿ ಮಳೆಗಾಲದಲ್ಲೂ ಸಂಪರ್ಕ ಕಡಿತ ಭೀತಿ ದೂರವಾಗಿ ಸುಗಮ ವಾಹನ ಸಂಚಾರ ಸಾಧ್ಯವಾಗಲಿದೆ.
ದುರ್ಗಾ, ಕೆರ್ವಾಸೆ, ಜಾರ್ಕಳ, ಅಜೆಕಾರು ಗ್ರಾಮಗಳಿಗೆ ಸಂಪರ್ಕಿಸುವ ಕೊಂಡಿ ಇದೇ ಮುಳುಗು ಸೇತುವೆಯಾಗಿತ್ತು. ಬಿರುಸಿನ ಮಳೆಗಾಲ ಸಂದರ್ಭದಲ್ಲಿ ಸೇತುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದಾಗ ಮುಳುಗು ಸೇತುವೆಯ ಮೇಲ್ಭಾಗದಲ್ಲಿ ಮಳೆ ನೀರು ಹರಿಯುವುದರಿಂದ ಎರಡೂ ಪ್ರದೇಶಗಳ ಸಂಪರ್ಕ ಕಡಿತಕ್ಕೊಳಗಾಗುವುದು ಸರ್ವೇ ಸಾಮಾನ್ಯವಾಗಿತ್ತು.

ಜಿಲ್ಲಾಡಳಿತ ಸ್ಪಂದನೆ: 2015ರ ಜುಲೈ 3ರಂದು ಕಾರ್ಕಳ ನಗರ-ದುರ್ಗಾ, ತೆಳ್ಳಾರು ಮುಳುಗು ಸೇತುವೆ ಸಮಸ್ಯೆ ಕುರಿತು ಸಚಿತ್ರ ವರದಿ ಪ್ರಕಟಿಸಿ ‘ವಿಜಯವಾಣಿ’ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ಕೆಲವು ವರ್ಷಗಳ ಹಿಂದೆ ಕಾರ್ಕಳ ನಗರ-ದುರ್ಗಾ, ತೆಳ್ಳಾರು ಅಪಾಯಕಾರಿ ಮುಳುಗು ಸೇತುವೆಯ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಬೈಕ್ ಸವಾರರೊಬ್ಬರು ಹೊಳೆಗೆ ಬಿದ್ದು ಮೃತಪಟ್ಟಿದ್ದರು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಗಮನಿಸಿ ಅಂದು ಮುಂಡ್ಲಿ ಜಿವಿಪಿ ವಿದ್ಯುತ್ ಉತ್ಪಾದನಾ ಸಂಸ್ಥೆ ತಡೆ ಬೇಲಿ ನಿರ್ಮಿಸಿ ಸಾಮಾಜಿಕ ಕಾಳಜಿ ಮೆರೆದಿತ್ತು.

ಸೇತುವೆ ಕಾಮಗಾರಿ: 2.10 ಕೋಟಿ ರೂ. ವೆಚ್ಚದಲ್ಲಿ 2017ರಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ತೆಳ್ಳಾರು ಸೇತುವೆ ನಿರ್ಮಾಣಕ್ಕೆ ಅಂದಿನ ಶಾಸಕ ವಿ.ಸುನೀಲ್‌ಕುಮಾರ್ ಭೂಮಿ ಪೂಜೆ ನೆರವೇರಿಸಿದ್ದರು. ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಿತ್ತು.

ತಾಲೂಕು ವ್ಯಾಪ್ತಿಯಲ್ಲಿ ಹಲವು ಜನಪರ ಕಾಳಜಿ ವಹಿಸಿ ವರದಿ ಪ್ರಕಟಿಸುವಲ್ಲಿ ವಿಜಯವಾಣಿ ಪತ್ರಿಕೆ ಕಾರ್ಯಸಾಧನೆ ಶ್ಲಾಘನೀಯ . ವಸ್ತು-ನಿಷ್ಠ ವರದಿ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವ ಕಾರ್ಯ ನಿರಂತರವಾಗಿ ಸಾಗಲಿ.
ವಿಜಯಕುಮಾರಿ ದುರ್ಗಾ ಮಾಜಿ ಅಧ್ಯಕ್ಷೆ, ತಾಪಂ ಕಾರ್ಕಳ

Leave a Reply

Your email address will not be published. Required fields are marked *