ದರ್ಶನವಾಗಿ ಉಳಿದಿಲ್ಲ ಇಂದಿನ ದೂರದರ್ಶನ

| ದೀಪಾ ರವಿಶಂಕರ್

ಹೀಗೆಯೇ ಕ್ವಚಿತ್ತಾಗಿ ಇತಿಹಾಸದ ಒಂದು ವಿಷಯ ತಿಳಿಯಿತು. ಅಮೆರಿಕನ್ ವಿಜ್ಞಾನಿ ಇ.ಎಫ್.ಡಬ್ಲೂ್ಯ.ಅಲೆಕ್ಸಾಂಡರ್​ಸನ್ ಅವರ ಆವಿಷ್ಕಾರವಾದ ಮನೆ ಮನೆಗಳಲ್ಲಿ ಇಡಬಹುದಾದ ಟೆಲಿವಿಷನ್ ಸೆಟ್. 1928ರಲ್ಲಿ ಇದೇ ದಿನ ನ್ಯೂರ್ಯಾನ ನಗರವೊಂದರಲ್ಲಿ ಪ್ರಾಯೋಗಿಕವಾಗಿ ಮೂರು ಟೆಲಿವಿಷನ್ ಸೆಟ್​ಗಳನ್ನಿಟ್ಟು ಪ್ರಸಾರ ಮಾಡಲಾಯಿತಂತೆ. ಕೇವಲ ಒಂದೂವರೆ ಚದುರ ಇಂಚಿನಷ್ಟಿದ್ದ ಆ ತೆರೆಯ ಮೇಲೆ ಬಹಳ ಅಸ್ಪಷ್ಟವಾದ ಮತ್ತು ಅಲುಗಾಡುತ್ತಿರುವ ಚಿತ್ರಗಳು ಪ್ರದರ್ಶಿತವಾದುವಂತೆ!

ಹಾಗೆ ಆರಂಭವಾದ ಟೆಲಿವಿಷನ್ ಎಂಬ ವೈಜ್ಞಾನಿಕ ಕ್ರಾಂತಿ ಆಧುನಿಕ ರೂಪ ತಳೆದು ಭಾರತದಂಥ ದೇಶಕ್ಕೆ ಲಗ್ಗೆಯಿಟ್ಟಾಗ ಅದೊಂದು ಹೊಸ ಸಂಚಲನವನ್ನೇ ಮೂಡಿಸಿತ್ತು. ಅದುವರೆಗೆ ಮನರಂಜನೆಗಿದ್ದ ತಂತ್ರಜ್ಞಾನ ಎಂದರೆ ರೇಡಿಯೋ. ಅದು ಕೇವಲ ಶ್ರವಣ ಮಾಧ್ಯಮ. ಅಲ್ಲಿ ಶಬ್ದಗಳನ್ನು ಕೇಳಿ ನಾವು ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಳ್ಳಬೇಕು. ಅಂಥ ಪರಿಸರದಲ್ಲಿ ಶ್ರವಣ ಮತ್ತು ದೃಶ್ಯ ಮಾಧ್ಯಮವಾದ ಈ ಟೆಲಿವಿಷನ್ ಹೊರಜಗತ್ತಿಗೊಂದು ಬೆಳಕಿಂಡಿಯಂತೆ ಕಂಡಿತು. ಪ್ರಪಂಚದ ಮೂಲೆ ಮೂಲೆಯ ಆಗುಹೋಗುಗಳನ್ನು, ವಿಶ್ವದ ಬೇರೆ ಬೇರೆ ಪ್ರಾಂತ್ಯದ ಜನಜೀವನವನ್ನು ತೋರಿಸುವ ಸಿನಿಮಾಗಳನ್ನು, ಕಲಾ ಪ್ರಕಾರಗಳನ್ನು ಹೀಗೇ ಇಡೀ ಜಗತ್ತನ್ನು ನಮಗೆ ಕೂತ ಜಾಗದಲ್ಲಿ ಪರಿಚಯಿಸುವ ಅನೂಹ್ಯ ಆವಿಷ್ಕಾರವಾಗಿ ಜನ ಇದನ್ನು ಕಂಡರು. ಎಲ್ಲಾ ಹೊಸ ವಸ್ತು ವಿಷಯಗಳಿಗೆ ಇದ್ದಂತೆ ಇದಕ್ಕೂ ಪರ ವಿರೋಧಗಳಿದ್ದಿರಬಹುದು ಆದರೆ ನಿಧಾನವಾಗಿ ಒಂದೊಂದೇ ಮನೆಗೆ ಈ ವಸ್ತುವಿನ ಆಗಮನವನ್ನು ಯಾರೂ ತಡೆಯಲಿಲ್ಲ. ದೇಶದಲ್ಲಿ ಪ್ರತೀ ಮನೆಯೂ ಟೆಲಿವಿಷನ್ ಸೆಟ್ ಒಂದನ್ನು ಹೊಂದಿಯೇ ಇತ್ತು ಎಂಬಷ್ಟು ಮಟ್ಟಿಗೆ ಇದು ಆಕ್ರಮಿಸಿಕೊಂಡಿತು. ಈಗಂತೂ ರೂಮಿಗೊಂದು, ಹಾಲಿಗೊಂದು, ಅಡುಗೆ ಮನೆಗೊಂದರಂತೆ ಟೆಲಿವಿಷನ್​ಗಳು ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ.

ದೂರದರ್ಶನ ಹೆಸರೇ ಹೇಳುವಂತೆ ದೂರ ದೂರದ ಲೋಕದ ‘ದರ್ಶನ’ ಮಾಡಿಸಿತು. ಜಗತ್ತಿನ ಪರಿಚಯ ಮಾಡಿಸಿತು. ಆಗ ಇದರಿಂದ ಅನೇಕ ಲಾಭಗಳಾದವು.

ಮೊದಲನೆಯದು ನಮ್ಮದಲ್ಲದ ಮತ್ತೊಂದು ಊರಿನಲ್ಲಿ ಜನ ಹೇಗಿದ್ದಿರಬಹುದೆಂಬ ಕುತೂಹಲ ತಣಿಸಿತು, ಯಾರು ಹೇಗಿದ್ದರೇನು? ನಮ್ಮ ಬದುಕು ಹೀಗೇ ಎಂದು ನಿರಾಸಕ್ತರಾಗಿದ್ದವರಿಗೆ ಕುತೂಹಲವನ್ನು ಹುಟ್ಟು ಹಾಕಿತು, ದೂರದ ದೇಶಗಳಲ್ಲಿ ಹಾಗೆ ಇರುತ್ತದಂತೆ, ಹೀಗೆ ಮಾಡುತ್ತಾರಂತೆ ಎಂಬ ಅಂತೆ ಕಂತೆಗಳನ್ನು ಕೊನೆಗಾಣಿಸಿತು. ಒಟ್ಟಾರೆ ಹೇಳಬೇಕೆಂದರೆ ನಮ್ಮ ಮತ್ತು ಹೊರಜಗತ್ತಿನ ನಡುವಿನ ಅಂತರವನ್ನು ದೂರದರ್ಶನ ಕಡಿಮೆ ಮಾಡಿತು.

ಬೇರೆ ಬೇರೆ ಭೌಗೋಳಿಕ ಪ್ರದೇಶಗಳ ರೀತಿ ರಿವಾಜುಗಳು, ನಂಬಿಕೆಗಳು ನಮ್ಮಲ್ಲಿದ್ದ ಮೂಢ ನಂಬಿಕೆಗಳ ಬಗ್ಗೆ ಕೆಲವರನ್ನಾದರೂ ಜಾಗೃತಗೊಳಿಸಿದವು, ನಮ್ಮಲ್ಲಿರುವ ಉನ್ನತವಾದ ವಿಚಾರಗಳ ಬಗೆಗೆ ಹೆಮ್ಮೆ ಪಡುವಂತೆ ಮಾಡಿದವು. ಇನ್ನೊಂದರ ಜೊತೆಗೆ ತುಲನೆ ಮಾಡಿದಾಗ ಮಾತ್ರ ನಮ್ಮ ಸಂಸ್ಕೃತಿ, ಆಚಾರ ವಿಚಾರ, ನಂಬಿಕೆಗಳ ಹಿರಿಮೆ ಅಥವಾ ಮೌಢ್ಯಗಳು ಅರಿವಿಗೆ ಬರುವುದು. ಆ ಅರಿವನ್ನು ದೂರದರ್ಶನ ಕೊಟ್ಟಿತು.

ಹೀಗೆ ಬಹುವಿಧದಲ್ಲಿ ಜನಪ್ರಿಯವಾದ ದೂರದರ್ಶನದಲ್ಲಿ ಮನರಂಜನೆಯ ಒಂದು ಪ್ರಕಾರವಾಗಿ ಧಾರಾವಾಹಿಗಳು ಬಂದವು. ಬೇರೆಲ್ಲಾ ಕಾರ್ಯಕ್ರಮಗಳಿಗಿಂತ ಈ ಧಾರಾವಾಹಿಗಳು ಜನರನ್ನು ಹೆಚ್ಚು ಸೆಳೆದವು. ಅದನ್ನರಿತ ಉದ್ಯಮದ ಜನ ಅದನ್ನೇ ಹೆಚ್ಚು ಹೆಚ್ಚು ಕೊಡಲಾರಂಭಿಸಿದರು. ಒಂದು ಮನೆಯ ಒಳಗಿನ ಚಿಕ್ಕ ಪುಟ್ಟ ಜಗಳಗಳು, ವಿರಸ, ಸರಸಗಳು, ದಿನನಿತ್ಯದ ಗೋಜಲುಗಳಿಂದ ಯಾವ ಮಾಧ್ಯಮ ಕೆಲ ಹೊತ್ತಾದರೂ ಹೊರಗೆಳೆದುಕೊಂಡು ಹೋಗಿ ಜಗತ್ತನ್ನು ತೋರಿಸುತ್ತಿತ್ತೋ, ಅಂಥ ಮಾಧ್ಯಮವನ್ನು ಧಾರಾವಾಹಿ ಜಗತ್ತು ತಿರುಗಿ ಅದೇ ಮನೆ ಮನೆಯ ಗೋಜಲುಗಳನ್ನು, ಜಗಳ ಮುನಿಸುಗಳನ್ನು, ಆಸ್ತಿಗಾಗಿ ಹೊಡೆದಾಟ, ವ್ಯೂಹ ಪ್ರತಿ ವ್ಯೂಹದ ರಚನೆಗಳಿಗೆ ಸೀಮಿತಗೊಳಿಸಿಬಿಟ್ಟಿತು. ಅಲ್ಲಿಗೆ ದೂರದರ್ಶನ ಹುಟ್ಟಿಸಿದ್ದ ಎಲ್ಲಾ ಆಸೆಗಳನ್ನೂ ಧಾರಾವಾಹಿ ಜಗತ್ತು ಮಿಥ್ಯೆಯನ್ನಾಗಿಸಿತು.

ಬೇರೆ ಬೇರೆ ವಾಹಿನಿಗಳು ಬಂದವು. ಎಲ್ಲದರಲ್ಲೂ ಧಾರಾವಾಹಿಗಳು. ಒಂದಾದ ಮೇಲೆ ಇನ್ನೊಂದು, ಅದಾದ ಮೇಲೆ ಮತ್ತೊಂದು ಹೀಗೇ ನಿರಂತರವಾಗಿ ಧಾರಾವಾಹಿಗಳು. ಎಲ್ಲವೂ ಒಂದು ಮನೆಯ ಸುತ್ತಾ ಅಥವಾ ಒಬ್ಬ ವ್ಯಕ್ತಿಯ ಸುತ್ತಾ ಗಿರಕಿ ಹೊಡೆಯುವ ಕಥೆಗಳು. ಅದರಲ್ಲಿ ಬದುಕಿನ ಋಣಾತ್ಮಕತೆಯದ್ದೇ ಮೇಲುಗೈ. ಅಂದರೆ ಬದುಕಿನಲ್ಲಿ ಕಾಣುವ ನೆಗೆಟಿವ್ ಅಂಶಗಳನ್ನೇ ಪ್ರದರ್ಶನಕ್ಕಿಡುವ ಅಸಹ್ಯಕರ ಮನೋವೃತ್ತಿ. ನಮ್ಮವರೇ ಅಂದರೆ ನಮ್ಮ ಸೋದರತ್ತೆ, ಚಿಕ್ಕಮ್ಮ, ದೊಡ್ಡಮ್ಮ, ತಂಗಿ, ಅಕ್ಕ ಹೀಗೆ ನಾವು ಬಯಸುವ ಬಂಧುಗಳೇ ನಮಗೆ ಸುಪಾರಿ ಕೊಟ್ಟು ಕೊಲ್ಲಿಸುವ ಆಲೋಚನೆ ಮಾಡುವುದು, ಅಕ್ಕ ತಂಗಿಯರು ಒಂದೇ ಗಂಡನ್ನು ಪಡೆಯಲು ಹರಸಾಹಸ ಮಾಡುವುದು, ಮದುವೆಯಾಗಿ ಮಕ್ಕಳನ್ನು ಹೆರುವುದೇ ಹೆಣ್ಣು ಮಕ್ಕಳ ಬದುಕಿನ ಅತ್ಯುನ್ನತ ಧ್ಯೇಯ ಎಂಬ ವಿಚಾರಗಳು, ಗಂಡ ಮತ್ತು ಗಂಡನ ಮನೆಯವರಿಗಾಗಿ ತನ್ನ ಸುಖ ಸಂತೋಷ, ಆಸೆ ಆಕಾಂಕ್ಷೆಗಳನ್ನೆಲ್ಲಾ ಕೊಂದುಕೊಂಡು ಬದುಕುವ ಅಥವಾ ತನಗಾಗಿ ಯಾವ ಆಕಾಂಕ್ಷೆಗಳೇ ಇಲ್ಲದ ಹೆಣ್ಣು ಮಕ್ಕಳನ್ನೇ ಆದರ್ಶ ಎಂಬಂತೆ ಬಿಂಬಿಸುವುದು ಹೀಗೇ ಆಧುನಿಕ ಜಗತ್ತು ಎಷ್ಟು ಮುಂದುವರೆದಿದೆಯೋ ಅಷ್ಟೇ ಹಿಂದಕ್ಕೆಳೆಯುವ ಪ್ರವೃತ್ತಿಯದೇ ಅಟ್ಟಹಾಸ ಕಿರುತೆರೆಯಲ್ಲಿ ನಿರಂತರವಾಗಿ ನಡೆಯತೊಡಗಿತು.

ಇಷ್ಟು ಸಾಲದೆಂಬಂತೆ ಯಾವ ಮೌಢ್ಯಗಳನ್ನು ಮೀರಲು ಇದೇ ದೂರದರ್ಶನ ಸಮಾಜಕ್ಕೆ ಸಹಾಯ ಮಾಡಿತ್ತೋ ಅದೇ ದೂರದರ್ಶನದಲ್ಲಿ ಧಾರಾವಾಹಿಗಳು ಈಗಾಗಲೇ ದಾಟಿ, ಮರೆತು ಬಂದಿರುವ ಅವೇ ಮೌಢ್ಯಗಳ ವಿಜೃಂಭಣೆ ಅಸಹನೀಯವಾಗಿ ಪ್ರದರ್ಶಿಸುತ್ತಿವೆ. ಉದಾಹರಣೆಗೆ ಬಾಲ್ಯ ವಿವಾಹ, ವಿಧವಾ ಪದ್ಧತಿ, ಬಾಲ ವಿಧವೆಯ ಕಥೆಗಳು, ಗಂಡನಿಲ್ಲದ ವಿಧವೆ ಹೆಣ್ಣು ಮಗಳು ಬಿಳಿ ಸೀರೆಯುಟ್ಟು ಬೋಳು ಹಣೆಯಲ್ಲಿ ಇರುವುದು, ಸಣ್ಣ ಪುಟ್ಟದ್ದಕ್ಕೆಲ್ಲಾ ಗಂಡನ ಪಾದ ಸವರಿ ಕಣ್ಣಿಗೊತ್ತಿಕೊಳ್ಳುವುದು ಇವೇ ಮುಂತಾದ ಆಚರಣೆಗಳನ್ನು ಪದೇ ಪದೇ ತೋರಿಸುತ್ತಾ ಇದೇ ಸರಿ ಎಂಬ ಭಾವನೆಯನ್ನು ಜನರಲ್ಲಿ ಮತ್ತೆ ತುಂಬುತ್ತಿವೆ. ದೂರದರ್ಶನದಂಥ ಶಕ್ತಿಶಾಲಿ ಮಾಧ್ಯಮಕ್ಕೆ ಧಾರಾವಾಹಿಗಳು ಶಾಪವಾಗಿ ಪರಿಣಮಿಸಿವೆ.

ದೂರದರ್ಶನವನ್ನು, ಅದರ ಶಕ್ತಿಯನ್ನು, ಸಾಮರ್ಥ್ಯವನ್ನು ಅರಿಯದೇ ನಾವು ಕೂಪಮಂಡೂಕಗಳಾಗುತ್ತಿದ್ದೇವೆ. ತೊಂಬತ್ತು ವರ್ಷಗಳಲ್ಲಿ ತಾಂತ್ರಿಕವಾಗಿ ಬಹಳ ಮುನ್ನಡೆ ಸಾಧಿಸಿದ್ದೇವೆ. ಆದರೆ ಸಾಮಾಜಿಕವಾಗಿ ಹಿನ್ನಡೆಯುತ್ತಿದ್ದೇವೆ. ನಮ್ಮ ಕೈಯಲ್ಲಿರುವ ಸಾಧನ ಬರೀ ದುಡ್ಡು ಮಾಡುವ ಯಂತ್ರವಲ್ಲ ಬದಲಿಗೆ ಸಮಾಜ ಸುಧಾರಣೆಯ ಮಾಯಾ ಮಂತ್ರ ಎಂದು ನಾವು ಅರಿತ ದಿನ ನಮಗೂ, ದೂರದರ್ಶನ ಮಾಧ್ಯಮಕ್ಕೂ ಗೌರವ, ಬೆಲೆ.