ನೀರಿನ ಸಂರಕ್ಷಣೆಗಾಗಿ ಶಾಲಾ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರದಿಂದ 180 ವಿದ್ಯಾರ್ಥಿನಿಯರಿಗೆ ಸಿಕ್ಕ ಫಲವೇನು ಗೊತ್ತಾ?

ಮೇಡಕ್​: ನೀರಿನ ಸಂರಕ್ಷಣೆಗಾಗಿ ತೆಲಗಾಂಣದ ಬುಡಕಟ್ಟು ಕಲ್ಯಾಣ ವಸತಿ ಶಾಲೆಯೊಂದರ 180 ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿಯ ಆದೇಶದಂತೆ ತಲೆಗೂದಲು ಕತ್ತರಿಸಿರುವ ವಿನೂತನ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಪಾಲಕರಿಗೂ ತಿಳಸದೇ ಕೂದಲು ಕತ್ತರಿಸಿರುವುದು ಅಪಸ್ವರಕ್ಕೆ ಕಾರಣವಾಗಿದೆ.

ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿರುವ ಶಾಲಾ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಆದೇಶದಂತೆ ಕೂದಲು ಕತ್ತರಿಸಲಾಗಿದೆ. ವಿದ್ಯಾರ್ಥಿ ನಿಲಯದಲ್ಲಿ ನೀರಿನ ಕೊರತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಕೂದಲನ್ನು ಕತ್ತರಿಸುವುದು ನನಗೆ ಇಷ್ಟವಿರಲಿಲ್ಲ. ಆದರೆ, ಪ್ರಾಂಶುಪಾಲರು ಹೇಳಿದ್ದರಿಂದ ಗತ್ಯಂತರವಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ನಮ್ಮ ಪಾಲಕರಿಗೂ ಈ ವಿಚಾರವನ್ನು ತಿಳಿಸಿಲ್ಲ ಎಂದು ಆರನೇ ತರಗತಿ ವಿದ್ಯಾರ್ಥಿನಿ ಅಖಿಲಾ ತಿಳಿಸಿದ್ದಾಳೆ.

ಶಾಲೆಯ ಇನ್ನಿತರ ವಿದ್ಯಾರ್ಥಿನಿಯರು ಅಖಿಲಾ ಹೇಳಿಕೆಗೆ ಧ್ವನಿಗೂಡಿಸಿದ್ದು, ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದಕ್ಕೆ ತಮ್ಮ ಪಾಲಕರಿಂದ ಶಿಕ್ಷೆಗೆ ಗುರಿಯಾದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಲೆಯವರೇ ಕೂದಲನ್ನು ಕತ್ತರಿಸಿದ್ದಾರೆ ಎಂಬ ನಿಜ ಸಂಗತಿ ನಮ್ಮ ಪಾಲಕರಿಗೆ ಗೊತ್ತಿರಲಿಲ್ಲ. ನನ್ನ ಕುಟುಂಬದವರಿಂದ ನಾನು ಹೊಡೆಸಿಕೊಳ್ಳಬೇಕಾಯಿತು ಎಂದು ಅಖಿಲಾ ಸಹಪಾಠಿ ನಂದಿನಿ ಹೇಳಿದ್ದಾಳೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *