ನೀತಿ ಸಂಹಿತೆ ಉಲ್ಲಂಘನೆ: ತೆಲಂಗಾಣದ ಐವರು ನಾಯಕರಿಗೆ ಚುನಾವಣಾ ಆಯೋಗ ನೋಟಿಸ್​

ಹೈದರಾಬಾದ್​: ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿದ ಕುರಿತು ಹಲವು ದೂರುಗಳ ಬಂದ ಹಿನ್ನೆಲೆಯಲ್ಲಿ ತೆಲಂಗಾಣದ ಐವರು ಹಿರಿಯ ನಾಯಕರಿಗೆ ಚುನಾವಣಾ ಆಯೋಗ ನೋಟಿಸ್​ ನೀಡಿದೆ.

ನೀರಾವರಿ ಸಚಿವ ಟಿ. ಹರೀಶ್​ ರಾವ್​, ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ಉತ್ತಮ್​ ಕುಮಾರ್​ ರೆಡ್ಡಿ, ಕಾರ್ಯಾಧ್ಯಕ್ಷ ರೇವಂತ್​ ರೆಡ್ಡಿ, ಟಿಡಿಪಿಯ ವಂಟೇರು ಪ್ರತಾಪ್​ ರೆಡ್ಡಿ, ರೇವೂರಿ ಪ್ರಕಾಶ್​ ರೆಡ್ಡಿಗೆ ನೋಟಿಸ್​ ನೀಡಲಾಗಿದೆ ಎಂದು ತೆಲಂಗಾಣ ರಾಜ್ಯ ಚುನಾವಣೆ ಆಯೋಗದ ಆಯುಕ್ತ ರಜತ್​ ಕುಮಾರ್​ ತಿಳಿಸಿದ್ದಾರೆ.

ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ಉತ್ತಮ್​ ಕುಮಾರ್​ ರೆಡ್ಡಿ ಅವರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ ಆರೋಪ ಕೇಳಿ ಬಂದಿದೆ. ಈ ಎಲ್ಲಾ ಐವರಿಗೂ ಕೂಡಲೇ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನೊಂದೆಡೆ, ಟಿಆರ್​ಎಸ್​ನ ಮಾಜಿ ಶಾಸಕ ಮತ್ತು ಸದ್ಯ ಚುನಾವಣೆಗೆ ಸ್ಪರ್ಧಿಸಿರುವ ಗಂಗುಲ ಕಮಲಾಕರ್​ ಅವರು ಬಿಜೆಪಿ ಮುಖಂಡನಿಗೆ ಬೆದರಿಗೆ ಹಾಕಿದ ಆರೋಪ ಕೇಳಿ ಬಂದಿದ್ದು, ಪ್ರಕರಣವನ್ನು ಪರಾಮರ್ಶಿಸುತ್ತಿದ್ದೇವೆ ಎಂದು ಚುನಾವಣಾ ಆಯುಕ್ತ ರಜತ್​ಕುಮಾರ್​ ತಿಳಿಸಿದ್ದಾರೆ.