ಮೂವರು ಅಪ್ರಾಪ್ತೆಯರು, ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಬಳಿಕವೂ ಈತ ಮಾಡಿದ್ದು ಹೀನ ಕೃತ್ಯ

ಹೈದರಾಬಾದ್‌: ಮೂವರು ಅಪ್ರಾಪ್ತೆಯರನ್ನು ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವ ಘಟನೆ ಯಾದಾದ್ರಿ ಭೋಂಗೀರ್‌ ಜಿಲ್ಲೆಯ ಹಾಜಿಪುರ ಗ್ರಾಮದಲ್ಲಿ ನಡೆದಿದೆ ಮತ್ತು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಹಿಳೆಯನ್ನು ಕೂಡ ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗಿರುವ 28 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮರ್ರಿ ಶ್ರೀನಿವಾಸ ರೆಡ್ಡಿ ಎಂದು ಗುರುತಿಸಲಾಗಿದ್ದು, ಹೈದರಾಬಾದ್‌ನವನಾದ ಈತ ಮದ್ಯವ್ಯಸನಿಯಾಗಿದ್ದ ಮತ್ತು ಅಶ್ಲೀಲ ಚಿತ್ರಗಳಿಗೆ ದಾಸನಾಗಿದ್ದ ಎಂದು ರಾಚಕೊಂಡ ಪೊಲೀಸ್‌ ಕಮೀಷನರ್‌ ಮಹೇಶ್‌ ಭಾಗವತ್‌ ತಿಳಿಸಿದ್ದಾರೆ.

ಸಾಕ್ಷಿಗಳನ್ನು ನಾಶ ಮಾಡುವ ಉದ್ದೇಶದಿಂದಾಗಿ ಮೂವರು ಅಪ್ರಾಪ್ತೆಯರ ಮೃತದೇಹಗಳನ್ನು ಗ್ರಾಮದ ಹೊರವಲಯದಲ್ಲಿರುತ್ತಿದ್ದ ಪಾಳುಬಿದ್ದ ಬಾವಿಗೆ ಹಾಕುತ್ತಿದ್ದ ಮತ್ತು ಕರ್ನೂಲ್‌ ಜಿಲ್ಲೆಯ ಮಹಿಳೆಯನ್ನು ಆಕೆಯ ಮನೆಯ ನೀರಿನ ತೊಟ್ಟಿಯಲ್ಲೇ ಹಾಕಿ ಕೊಲೆ ಮಾಡಿದ್ದಾನೆ.

ಕಳೆದ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿಯ ಮೃತದೇಹ ಹೊರವಲಯದ ಬಾವಿಯಲ್ಲಿ ಪತ್ತೆಯಾಗಿದ್ದರೆ, ಕಳೆದ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದ ಅದೇ ಗ್ರಾಮದ 17 ವರ್ಷದ ಬಾಲಕಿಯ ಅಸ್ಥಿಪಂಜರವು ಕೂಡ ಅದೇ ಬಾವಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಇದರೊಂದಿಗೆ 2015ರಲ್ಲಿ ನಾಪತ್ತೆಯಾಗಿದ್ದ ಮೈಸಿರೇಡ್ಡಿಪಲ್ಲೆ ಗ್ರಾಮದ 12 ವರ್ಷದ ಬಾಲಕಿಯನ್ನು ಕೂಡ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾನೆ. ಸ್ಥಳೀಯರ ನೆರವಿನೊಂದಿಗೆ ಗ್ರಾಮದ ಹೊರವಲಯದಲ್ಲಿದ್ದ ಬಾವಿಯನ್ನು ಪತ್ತೆಹಚ್ಚಿ ಮೃತದೇಹಗಳನ್ನು ಹೊರತೆಗೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಾಲೆಯಿಂದ ಮರಳುತ್ತಿದ್ದ 14 ವರ್ಷದ ಬಾಲಕಿಗೆ ಲಿಫ್ಟ್‌ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಬಾಲಕಿ ಕಾಣೆಯಾದ ಕುರಿತು ಪಾಲಕರು ನೀಡದ್ದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಬಾವಿಯ ಸಮೀಪದಲ್ಲಿ ಶಾಲೆಯ ಬ್ಯಾಗ್‌ ದೊರಕಿದೆ. ತನಿಖೆ ಮುಂದುವರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2015ರಲ್ಲೂ ಇನ್ನಿಬ್ಬರು ಅಪ್ರಾಪ್ತೆಯರು ಮತ್ತು ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ಹಾಜಿಪುರ ಗ್ರಾಮಸ್ಥರು ಶ್ರೀನಿವಾಸ ರೆಡ್ಡಿಯ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಪೊಲೀಸರೇ ಹತ್ಯೆ ಮಾಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಒಂದು ಮೋಟರ್‌ ಬೈಕ್‌, ಎರಡು ಮೊಬೈಲ್‌ ಫೋನ್‌ ಮತ್ತು ರೆಡ್ಡಿ ವೃತ್ತಿಯ ಕಿಟ್‌ನ್ನು ವಶಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *