ಹೆಬ್ಬಾವು ಮಾರಲು ಜಾಲತಾಣದಲ್ಲಿ ಪೋಟೋ ಅಪ್​ಲೋಡ್​ ಮಾಡಿದ ವ್ಯಕ್ತಿಗಳಿಬ್ಬರ ಬಂಧನ!

ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಹಾವುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ತೆಲಂಗಾಣ ಅರಣ್ಯ ಇಲಾಖೆ ಸೋಮವಾರ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಮೆಡ್ಕಲ್ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಹೈದರಾಬಾದ್​ನ ಕಳ್ಳಬೇಟೆ ವಿರೋಧಿ ಪಡೆಯು ಒಂದು ಹೆಬ್ಬಾವು ಹಾಗೂ ಒಂದು ಕಂಚು ಬಣ್ಣದ ಹಾವನ್ನು ಬೇಟೆಗಾರರಿಂದ ರಕ್ಷಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಮೆಡ್ಕಲ್ ಜಿಲ್ಲೆಯ ಛೌದರ್​ಗುಡ್ಡ ಗ್ರಾಮದಲ್ಲಿ ರಕ್ಷಿಸಲಾಗಿದೆ.

ಶರಣ್​ ಮೋಸಸ್​ ಮತ್ತು ಆತನ ಸ್ನೇಹಿತ ವನೊರೌಷ್​ ಪ್ರವೀಣ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಸರೀಸೃಪಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಸೆಳೆಯುವುದಕ್ಕಾಗಿ ಪ್ರವೀಣ್​ ಎಂಬಾತ ತನ್ನ ಕತ್ತಿನ ಭಾಗಕ್ಕೆ ಹೆಬ್ಬಾವನ್ನು ಸುತ್ತಿಕೊಂಡು ಫೋಟೋ ತೆಗೆದು ಫೇಸ್​ಬುಕ್​ ಮತ್ತು ವ್ಯಾಟ್ಸ್​ಆ್ಯಪ್​ನಲ್ಲಿ ಅಪ್​ಲೋಡ್​ ಮಾಡುತ್ತಿದ್ದರು ಎಂದು ಹೇಳಲಾಗಿದೆ.​​

1972ರ ಅರಣ್ಯ ಸಂರಕ್ಷಣೆ ಕಾಯಿದೆ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾದಲ್ಲಿ ಕನಿಷ್ಠ 3 ರಿಂದ 7 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)