ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹೇಳಿ ಸ್ವತಂತ್ರ ಸ್ಪರ್ಧೆ ತಿರಸ್ಕರಿಸಿದ ತೇಜಸ್ವಿನಿ ಅನಂತ್ ಕುಮಾರ್

ಬೆಂಗಳೂರು: ಸ್ವತಂತ್ರವಾಗಿ ನಿಲ್ಲುವ ಬೆಂಬಲಿಗರ ನಿರ್ಣಯವನ್ನು ಮಾಜಿ ಕೇಂದ್ರ ಸಚಿವ, ದಿವಂಗತ ಅನಂತ್​ ಕುಮಾರ್​ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ತಳ್ಳಿಹಾಕಿದ್ದಾರೆ.

ತೇಜಸ್ವಿನಿ ಅನಂತ್​ ಕುಮಾರ್​ಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಗ್ರಹಿಸಿದ್ದರು. ನಿನ್ನೆವರೆಗೂ ಪಕ್ಷಕ್ಕಾಗಿ ದುಡಿಸಿಕೊಂಡು ಈಗ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ವತಂತ್ರವಾಗಿ ನಿಲ್ಲುವುದಿಲ್ಲ. ನಾವು ಪಕ್ಷದ ಜತೆಗಿದ್ದೇವೆ. ಪ್ರಚಾರದ ಜವಾಬ್ದಾರಿ ನಮ್ಮ ಮೇಲಿದೆ. ಮೋದಿಯವರು ಮತ್ತೊಮ್ಮೆ ನಮ್ಮ ಪ್ರಧಾನಿಯಾಗಬೇಕು. ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತೇವೆ. ಹೀಗಾಗಿ ಸಮಾಧಾನದಿಂದ ವರ್ತಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ದೇಶ ಮೊದಲು ಪಕ್ಷ ಆಮೇಲೆ ಎಂಬುದು ಮುಖ್ಯ. ನಮ್ಮ ಪ್ರಬುದ್ಧತೆಯನ್ನು ತೋರಿಸುವ ಸಂದರ್ಭ ಇದಾಗಿದ್ದು, ಪಕ್ಷದ ಮುಖಂಡರ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ. ಬೇರೆ ರೀತಿಯಲ್ಲಿ ಯೋಚನೆ ಮಾಡುವುದು ಬೇಡ. ಯಾವುದೇ ಊಹಾಪೋಹಗಳಿಗೆ ಯಾರು ಕಿವಿಗೊಡಬೇಡಿ. ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡೋಣ ಎಂದು ತಿಳಿಸಿದರು.

ಅನಂತಕುಮಾರ್ ಹಾದಿಯಲ್ಲಿ ನಾವೆಲ್ಲ ಮುನ್ನಡೆಯಬೇಕು. ಹಾಗೆ ಮಾಡಿದರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದ ಅವರು ಕುಟುಂಬ ರಾಜಕಾರಣದಲ್ಲಿ ನಮಗೆ ನಂಬಿಕೆಯಿಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ನಮ್ಮ ಪ್ರಚಾರ ನಿರಂತರವಾಗಿರುತ್ತದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)