ಚಳ್ಳಕೆರೆ: ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಬೆಲ್ಲದಾರಹಟ್ಟಿ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಇದ್ದ ದಾರಿ ಸಮಸ್ಯೆ ಶನಿವಾರ ತಹಸೀಲ್ದಾರ್ ರೆಹಾನ್ ಪಾಷಾ ಸಮ್ಮುಖದಲ್ಲಿ ಬಗೆಹರಿದಿದೆ.
ಮಜರೆ ಗ್ರಾಮವಾದ ಬೆಲ್ಲದಾರಹಟ್ಟಿಯಲ್ಲಿ ಒಂದು ಸಾವಿರ ಜನಸಂಖ್ಯೆ ಇದೆ. ಈಡಿಗ ಮತ್ತು ಕುಂಬಾರ ಎರಡೇ ಸಮುದಾಯವಿದ್ದು, ಮನೆಗಳ ಮಧ್ಯೆ ಓಡಾಡುವ ದಾರಿ ಸಮಸ್ಯೆ ಸರಿಪಡಿಸಲು ಮೇಲಧಿಕಾರಿಗಳ ಸೂಚನೆಯಂತೆ ತಹಸೀಲ್ದಾರ್, ಸರ್ವೇ ಇಲಾಖೆ ಅಧಿಕಾರಿಗಳು ಮತ್ತು 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದು ವಿಶೇಷವಾಗಿತ್ತು.
ಗ್ರಾಮದ ಎರಡು ಗುಂಪುಗಳ ನಡುವೆ ಚರ್ಚೆ ಬಳಿಕ ಜೆಸಿಬಿ ಕಾರ್ಯಾಚರಣೆಯಲ್ಲಿ ದಾರಿ ವಿಂಗಡಣೆಯ ಕಾರ್ಯ ನಡೆಸಲಾಯಿತು.
ತಹಸೀಲ್ದಾರ್ ರೆಹಾನ್ ಪಾಷ ಮಾತನಾಡಿ, ಕುಡಿವ ನೀರಿನ ಅನುಕೂಲಕ್ಕೆ ಜಲ ಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಅಳವಡಿಕೆ ಮತ್ತು ಓಡಾಡಲು ದಾರಿ ಮಾಡಿಕೊಡಬೇಕಿದೆ.
ಸರ್ಕಾರಿ ಅಧಿಕಾರಿಯಾಗಿ ಬಂದಿರುವ ಕಾರಣದಿಂದ ಯಾರನ್ನು ಮನವೊಲಿಸುವ ಅಗತ್ಯವಿಲ್ಲ. ಇದು ನಿಮ್ಮಗಳ ಜವಾಬ್ದಾರಿ ಎಂದರು.
ಒತ್ತುವರಿಯಾಗಿರುವ ಗ್ರಾಮ ಠಾಣಾ ಜಾಗ ಇರುವ 6.27 ಎಕರೆ ಭೂಮಿ ಮತ್ತು ಸಮೀಪದ ಹಿಡುವಳಿ ಜಮೀನನ್ನು ಅಳತೆ ಮಾಡಿಸಿದ ಬಳಿಕ ಉಳಿಕೆಯಾಗುವ ಜಾಗವನ್ನು ದಾರಿಗೆ ಬಿಡಬೇಕು ಎಂದು ಮನವರಿಕೆ ಮಾಡಿದರು.
ಭೂ ಮಾಪನ ಇಲಾಖೆ ಅಧಿಕಾರಿಗಳು ಅಳತೆ ಮಾಡಿ ದಾರಿ ಗುರುತು ಮಾಡಿದರು. ಈ ಮಧ್ಯೆ ಹಿಡುವಳಿ ಜಮೀನಿನ ಮಾಲೀಕ ಕೆ.ಜಿ.ಸಣ್ಣಪ್ಪ ದಾರಿ ಸಮಸ್ಯೆ ಕೋರ್ಟ್‌ನಲ್ಲಿದೆ. ಇದಕ್ಕೆ ಇಂಜೆಕ್ಷನ್ ಆರ್ಡರ್ ಇದೆ. ನಮ್ಮ ಜಮೀನಿಗೆ ಯಾರೂ ಬರುವಂತಿಲ್ಲ ಎಂದು ವಾದಕ್ಕೆ ಇಳಿದವರನ್ನು ತಹಸೀಲ್ದಾರ್ ಸಮಾಧಾನ ಪಡಿಸಿದರು.
ಸರ್ವೇ ಇಲಾಖೆ ಎಡಿಎಲ್ಆರ್ ಬಿ.ಎಸ್.ಬಾಬುರೆಡ್ಡಿ, ಮೋಹನ್ ಕುಮಾರ್, ಬಸವರಾಜ್, ಪೊಲೀಸ್ ಉಪ ನಿರೀಕ್ಷಕ ಎಚ್.ವಿ.ಲೋಕೇಶ್, ಎಚ್.ಮಾರುತಿ, ಪೊಲೀಸ್ ಸಿಬ್ಬಂದಿ ಆರ್.ಕೆ.ನಾಗರಾಜ್, ಎಚ್.ವೀರಭದ್ರಪ್ಪ, ಕೆ.ಆರ್.ಲೋಕೇಶ್, ಜೆ.ರಾಮಾಂಜಿನಯ್ಯ, ಕೆ.ಮಾರೇಶ್, ಧನಂಜಯ, ಡಿ.ಪ್ರಸನ್ನ, ಡಿ.ವೀರಣ್ಣ, ಒ.ಶಶಿಕುಮಾರ್, ಸಿ.ಸಂತೋಷ್‌ಕುಮಾರ್ ಇದ್ದರು.
ಪ್ರಕರಣ ದಾಖಲು: ಗ್ರಾಮದ ಹತ್ತು ವರ್ಷಗಳ ದಾರಿ ಸಮಸ್ಯೆ ಇತ್ಯರ್ಥಕ್ಕೆ ಈ ಹಿಂದಿನ ತಹಸೀಲ್ದಾರ್ ಎನ್.ರಘುಮೂರ್ತಿ ಸಿಬ್ಬಂದಿಯೊಂದಿಗೆ ತೆರಳಿದ್ದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಐದಾರು ಜನರ ಮೇಲೆ ದೂರು ದಾಖಲಿಸಲಾಗಿತ್ತು.