ಮನೆಯಲ್ಲಿ ಮಾತಾಡಿ ಪ್ಲೀಸ್…

| ಬಿ.ಎನ್​.ಧನಂಜಯಗೌಡ, ಮೈಸೂರು

ಹದಿಹರೆಯದ ಮಕ್ಕಳು ನಮ್ಮ ಬಳಿ ಏನೂ ಹೇಳಲ್ಲ ಅನ್ನೋದು ಪಾಲಕರ ಗೋಳು. ಸಣ್ಣ ವಿಷ್ಯನೆಲ್ಲ ಹೇಳೋಕೆ ನಾನಿನ್ನೂ ಸ್ಕೂಲ್ ಹುಡ್ಗಾನ ಅಂತಾರೆ ಆಗ ತಾನೆ ಪಿಯು ಕಾಲೇಜು ಮೆಟ್ಟಿಲೇರುತ್ತಿರುವ ಹರೆಯದ ಹೈಕಳು. ಹುಡುಗರು ಯಾಕೆ ಎಲ್ಲ ಹೇಳಬೇಕು, ಮಕ್ಕಳು ಮಾತಾಡುವಂತೆ ಪಾಲಕರು ಏನು ಮಾಡಬೇಕು. ಈ ಕುರಿತ ಲೇಖನ ನಿಮ್ಮ ಮುಂದೆ.

ಕೃತಿ 8ನೇ ಕ್ಲಾಸ್​ನಲ್ಲಿ ಇದ್ದಾಗ ಸ್ಕೂಲ್ ಬಿಟ್ಟ ಕೂಡಲೇ ಮನೆಗೆ ಓಡಿ ಬಂದು ಅಪ್ಪನ ಭುಜಕ್ಕೆ ಆತು ಕುಳಿತು ಇಡೀ ದಿನದ ತರಗತಿಯ ಎಲ್ಲ ಚಟುವಟಿಕೆಯ ವರದಿಯನ್ನು ಪಟಪಟ ಎಂದು ಒಪ್ಪಿಸುತ್ತಿದ್ದಳು. ಸುಭಾಷ್ ಸಂಜೆ ಶಾಲೆಯಿಂದ ಬಂದೊಡನೆಯೇ ಅಮ್ಮನ ಕೊರಳಿಗೆ ಜೋತು ಬೀಳುತ್ತಿದ್ದ. ಅಮ್ಮ ಕೈತೋಟಕ್ಕೆ ಹೋದರೆ ತಾನೂ ಅಲ್ಲಿಗೇ ಓಡುತ್ತಿದ್ದ. ನಾನೂ ಹೂ ಕುಯ್ದು ಕೊಡ್ಲಾ, ತರಕಾರಿ ಕಿತ್ತು ಕೊಡ್ಲಾ ಅಂತಿದ್ದ. ಆಗೆಲ್ಲ ಅಪ್ಪ- ಅಮ್ಮನಿಗೆ ಮಕ್ಕಳ ಈ ಮಾತುಗಳು ಖುಷಿ ಕೊಡುತ್ತಿದ್ದವು. ಆ ಮಾತುಗಳನ್ನು ಕೇಳುತ್ತಿದ್ದಂತೆ ಮಕ್ಕಳನ್ನು ಬಾಚಿ ತಬ್ಬಿಕೊಳ್ಳುತ್ತಿದ್ದರು….

ಆದರೆ, ಈಗ ಮಕ್ಕಳು ಬೆಳೆದು ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಅವರು ಕುಟುಂಬದ ಸದಸ್ಯರನ್ನು ಪ್ರೀತಿಯಿಂದ ಮಾತನಾಡಿಸಲು ಸಾಧ್ಯವಾಗದಷ್ಟು ಬಿಜಿಯಾಗಿದ್ದಾರೆ. ಗೆಳೆಯ- ಗೆಳತಿಯರು, ಗ್ಯಾಜೆಟ್​ಗಳೇ ಅವರ ಲೋಕ. ಸದಾ ಹೊಸತನಕ್ಕೆ ತುಡಿಯುತ್ತಿರುವ ಅವರ ಮನಸ್ಸುಗಳಿಗೆ ಹಳೆಯದು ನೆನಪಾಗುತ್ತಲೇ ಇಲ್ಲ.

ಹದಿವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ನಾವು ಅಪ್ಪ-ಅಮ್ಮನ ಪ್ರೀತಿಯನ್ನು ಮರೆಯಲು ಸಾಧ್ಯವೇ? ಚಂದಮಾಮನನ್ನು ತೋರಿಸಿ ಅಮ್ಮ ತಿನ್ನಿಸುತ್ತಿದ್ದ ಕೈತುತ್ತು, ಅಪ್ಪ ಆಡಿಸುತ್ತಿದ್ದ ಆನೆ ಸವಾರಿ ಆಟ, ಅಜ್ಜಿ ಹೇಳುತ್ತಿದ್ದ ಕಥೆಗಳು, ಅಜ್ಜ ತೋಟದಿಂದ ತಂದು ಕೊಡುತ್ತಿದ್ದ ಸೀಬೆಕಾಯಿ.. ಒಮ್ಮೆ ನೆನಪಿಸಿಕೊಳ್ಳಿ… ಅದೆಷ್ಟು ಹಿತ ಅನ್ಸಲ್ವಾ. ಆ ನೆನಪು ನಮ್ಮ ಅಂತಃಕರಣಕ್ಕೆ ತಾಕಿದರೆ ಒಂದು ಕ್ಷಣ ಕಣ್ಣಲ್ಲಿ ನೀರು ಬಂದು ಬಿಡುತ್ತೆ. ಹಾಗಾದ್ರೆ, ಆ ಪ್ರೀತಿಯನ್ನು ನೀವು ಅವರಿಗೆ ವಾಪಸ್ ಕೊಡಬೇಕು ಅನ್ನಿಸುವುದಿಲ್ಲವಾ?, ಕೊಡಲಾಗದಷ್ಟು ದೊಡ್ಡವರಾಗಿದ್ದೇವೆ ಎಂಬ ಭಾವನೆಯಾ?.. ಪ್ರೀತಿ, ಅಕ್ಕರೆಯನ್ನು ಅಭಿವ್ಯಕ್ತಿಸಲು ಸಂಕೋಚವಾ? ಯಾವುದು ಎಂದು ನಿಮ್ಮ ಮನಸ್ಸನ್ನು ಒಮ್ಮೆ ಕೇಳಿಕೊಳ್ಳಿ.. ಪ್ಲೀಸ್.

ಕುಟುಂಬ ಸದಸ್ಯರ ಬಗ್ಗೆ ಪ್ರೀತಿ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ವ್ಯಕ್ತಪಡಿಸುವ ರೀತಿ ಯಾವುದು ಎಂಬುದು ಸ್ಪಷ್ಟವಾಗಿ ಗೊತ್ತಿರುವುದಿಲ್ಲ. ಮತ್ತೆ ಕೆಲವರಿಗೆ ಪ್ರೀತಿಯನ್ನು ವ್ಯಕ್ತಪಡಿಸುವುದು ಜವಾಬ್ದಾರಿಯೇನೋ ಎಂಬ ಮನೋಭಾವ ಕಾಡುತ್ತಿರುತ್ತದೆ.

ಒಂದು ಹುಡುಗಿ ಅಥವಾ ಒಬ್ಬ ಹುಡುಗನಿಗೆ ಅಪ್ಪ, ಅಮ್ಮ ಸೇರಿ ಕುಟುಂಬದ ಸದಸ್ಯರ ಮೇಲೆ ಪ್ರೀತಿಯಿದ್ದರೂ ವ್ಯಕ್ತಪಡಿಸುವ ಮಾರ್ಗಗಳು ಗೊತ್ತಿಲ್ಲದಿರುವ ಸಾಧ್ಯತೆಯೇ ಅಧಿಕ. ಅದಕ್ಕೆ ಪ್ರಮುಖ ಕಾರಣ ವಯೋಸಹಜ ಬೆಳವಣಿಗೆ. ಆದರೆ ಮಾರ್ಗಗಳನ್ನು ನಾವೇ ಹುಡುಕಿಕೊಳ್ಳಬೇಕು. ಪ್ರತಿಯೊಬ್ಬರ ಮನೆಯ ವಾತಾವರಣಕ್ಕೆ ಅನುಗುಣವಾಗಿ ಪ್ರೀತಿ ವ್ಯಕ್ತಪಡಿಸುವ ಮಾರ್ಗಗಳು ಭಿನ್ನವಾಗಿರುತ್ತವೆ.

ಹಿರಿಯರ ಗಮನಕ್ಕೆ: ಪ್ರೀತಿ, ಅಕ್ಕರೆ ವ್ಯಕ್ತಡಿಸುವುದನ್ನು ನೀವು ಮಕ್ಕಳಿಗೆ ಹೇಳಿಕೊಡಬೇಕು. ಅದನ್ನು ಹೇಳಿಕೊಡದಿದ್ದರೂ, ಅಕ್ಕರೆಯನ್ನು ಅಭಿವ್ಯಕ್ತಿಸುವ ಸನ್ನಿವೇಶಗಳು ಎದುರಾದಾಗ. ಅದಕ್ಕೆ, ಯಾರೂ ಅಡ್ಡಿಯಾಗಬಾರದು.

ಉದಾಹರಣೆಗೆ: ಮಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಅಜ್ಜಿಗೆ ಕಾಲು ನೋವು, ಮಗಳು ಅಜ್ಜಿಗೆ ಹತ್ತು ನಿಮಿಷ ಕಾಲು ಒತ್ತಲು ಹೋಗುತ್ತಾಳೆ. ಅಷ್ಟರಲ್ಲಿ ಅಮ್ಮ ನಾನು ಕಾಲ ಒತ್ತುತ್ತೇನೆ ನೀನು ಹೋಗಿ ಓದಿಕೋ ಎಂದು ಹೇಳುತ್ತಾಳೆ. ಅಲ್ಲಿಗೆ ಮಗಳಿಗೆ ಅಜ್ಜಿಯ ನೋವನ್ನು ಹಂಚಿಕೊಳ್ಳಲು ಮತ್ತು ಅಜ್ಜಿಗೆ ಮೊಮ್ಮಗಳ ಪ್ರೀತಿ ಪಡೆಯಲು ಸಾಧ್ಯವಾಗುವುದೇ ಇಲ್ಲ. ಅಷ್ಟಕ್ಕೂ ಹತ್ತು ನಿಮಿಷ ಪಠ್ಯವನ್ನು ಪಕ್ಕಕ್ಕೆ ಇಟ್ಟು ಕಾಲು ಒತ್ತಿದರೆ ನಿಮ್ಮ ಮಗಳ ಅಂಕ ತಲೆಕೆಳಗಾಗುವುದಿಲ್ಲ. ನಾವು ಹೀಗೆ ಮಕ್ಕಳು ಅಕ್ಕರೆ ವ್ಯಕ್ತಡಿಸುವಾಗ ಅಡ್ಡಿಯಾದರೆ ಮಕ್ಕಳು ಬೆಳದಂತೆ, ಪ್ರೀತಿ, ಅಕ್ಕರೆ ವ್ಯಕ್ತಡಿಸುವ ಗುಣ ಕಳೆದುಕೊಳ್ಳಬಹುದು. ವಯಸ್ಸಿನಲ್ಲಿ ಹಿರಿಯರಾದವರು ಪೂಜೆ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನಮ್ಮ ಮೊಮ್ಮಕ್ಕಳೂ ಭಜನೆ, ಪೂಜೆ ಮಾಡಲಿ ಎಂದೂ ಅವರ ಬಯಕೆ. ಇದರಿಂದ ಮಕ್ಕಳ ಓದಿಗೆ ತೊಂದರೆಯಾಗುತ್ತದೆಂದು ಪಾಲಕರು ಅಡ್ಡಿಪಡಿಸದಿರಿ. ದೊಡ್ಡವರ ಪ್ರೀತಿ ಅವರನ್ನು ಕಳೆದುಕೊಂಡಾಗಲೇ ಅರಿವಿಗೆ ಬರುತ್ತದೆ ಎಂಬುದು ನೆನಪಿರಲಿ.

ಬೆಳೆದ ಮಕ್ಕಳನ್ನು ಹತ್ತಿರಾಗಿಸಿಕೊಳ್ಳಿ: ಹದಿ ಹರೆಯದ ಮಕ್ಕಳು ಬೆಳೆದಂತೆ ಪಾಲಕರ ಮೇಲಿನ ಪ್ರೀತಿಯನ್ನು ಪ್ರಕಟಿಸಲು ಮುಜುಗರ ಪಡುತ್ತಾರೆ. ಇದಕ್ಕೆ ಮನೆ ವಅತಾವರಣ, ಸಮಾಜವೂ ಕಾರಣವಿರಬಹುದು. ಶಾಲೆಯಿಂದ ಬಂದಕೂಡಲೇ ಅಪ್ಪ, ಅಮ್ಮನ ಬಳಿ ಚಾಚು ತಪ್ಪದೇ ಅಂದು ತರಗತಿಯಲ್ಲಿ ನಡೆದ ಇಡೀ ವಿಷಯವನ್ನು ಹೇಳುತ್ತಿದ್ದ ಮಗ ಈಗ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಅದ್ಯಾವುದನ್ನೂ ಹೇಳುವುದಿಲ್ಲ. ಕಾರಣ ಅವನಲ್ಲಿ ನಾನು ಈಗೇನು ಚಿಕ್ಕ ಹುಡುಗನಲ್ಲ ಎಂಬ ದೊಡ್ಡ ಭಾವ. ಹೌದು, ಅಂತಹ ಮಕ್ಕಳನ್ನು ಅನೇಕ ಪಾಲಕರು ಹತ್ತಿರಾಗಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಇದು ಪಾಲಕರಿಂದಮಕ್ಕಳನ್ನು ಮತ್ತಷ್ಟು ದೂರವಾಗಿಸಬಹುದು.

ಈ ಮಾರ್ಗ ಅನುಸರಿಸಿ

  1. ಅಮ್ಮನಿಗೆ ಮನೆಯಲ್ಲಿ ಕೆಲಸ ಸಿಕ್ಕಾಪಟ್ಟೆ ಇರುತ್ತದೆ. ಎಲ್ಲ ಕೆಲಸ ಅವಳೇ ಮಾಡ್ಬೇಕು. ನೀವು ಫ್ರೀ ಇದ್ರೂ ಟಿವಿ, ಫೋನ್, ಫೇಸ್​ಬುಕ್, ವಾಟ್ಸ್​ಆಪ್ ಅಂತ ಹಿಡ್ಕೊಂಡು ಕುಳಿತಿರುತ್ತೀರಿ. ಸ್ವಲ್ಪ ಹೊತ್ತು ಅದೆಲ್ಲವನ್ನೂ ಬಿಡಿ. ಅಮ್ಮ, ನೀನು ಅಡುಗೆ ಮಾಡು ಹೋಗು, ನಾನು ಮನೆ ಕ್ಲೀನ್ ಮಾಡ್ತೀನಿ ಅಂತ ಒಂದು ಮಾತನ್ನು ಸರಾಗವಾಗಿ ಹೇಳಿ ಬಿಡಿ. ಅಮ್ಮ ತಿಂಡಿ ಏನ್ಮಾಡ್ತಿಯಾ, ಚಿತ್ರನ್ನಾನ.., ಸರಿ ನಾನು ಈರುಳ್ಳಿ ಕಟ್ ಮಾಡ್ತೀನಿ ಕೊಡು ಎಂಬ ಒಂದು ಮಾತು ಹೇಳಿ ಸಾಕು. ಅಮ್ಮ ಅದೆಷ್ಟು ಖುಷಿಯಾಗ್ತಾಳೆ ಗೊತ್ತಾ?
  2. ಅಪ್ಪ ಕೆಲಸ ಮುಗಿಸಿ ಮನೆಗೆ ಬರ್ತಾರೆ, ಬಂದ ತಕ್ಷಣ ಒಂದ್ ಕಪ್ ಕಾಫಿ ಮಾಡ್ಕೊಡಿ. ಅಪ್ಪನ ತಲೆಗೆ ಪ್ರತಿ ಬಾರಿ ಅಮ್ಮನೇ ಯಾಕೆ ಎಣ್ಣೆ ಹಚ್ಚಬೇಕು. ವಕ್ಷಿುಕ್ಕಳೇಕೆ ಹಚ್ಚಬಾರದು? ಅಪ್ಪ ಎಂದಾದ್ರೂ ತಲೆ ನೋವು ಅಂದಾಗ ನೀವೆ ನೋವು ನಿವಾರಕ ಬಾಮ್ ಹಚ್ಚಿ ಮಸಾಜ್ ಮಾಡಿ. ಅಪ್ಪನಿಗೆ ಆಗ ಎಷ್ಟು ಖುಷಿಯಾಗುತ್ತೆ ನೋಡಿ.
  3. ಅಪ್ಪ – ಅಮ್ಮನ ಮದುವೆ ವಾರ್ಷಿಕೋತ್ಸವ ಅಥವಾ ಜನುಮ ದಿನದಂಥ ವಿಶೇಷವಿದ್ದಾಗ, ಅಂದು ನೀವಿಬ್ಬರೂ ದೇವಸ್ಥಾನಕ್ಕೆ ಹೋಗಿ ಬನ್ನಿ. ನಾನು ತಿಂಡಿ ಮಾಡಿಟ್ಟಿರುತ್ತೇನೆ ಅನ್ನಿ.
  4. ಮನೆಯಲ್ಲಿ ವಯಸ್ಸಾದವರಿದ್ದರೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬನ್ನಿ. ಆಗಾಗ ಅವರೊಂದಿಗೆ ಒಂದು ಸಣ್ಣ ವಾಕ್ ಹೋಗ್ಬನ್ನಿ. ಅವರಿಗೆ ಮಂಡಿ ನೋವಿದ್ದರೆ ಮಸಾಜ್ ಮಾಡಿ. ಆ ಹಿರಿಯ ಜೀವಗಳಿಗೆ ಹಿತವಾಗುತ್ತದೆ. ಅವರಿಗೂ ತಮ್ಮ ಮೊಮ್ಮಕ್ಕಳ ಬಗ್ಗೆ ಸಾರ್ಥಕ ಭಾವ ಮೂಡುತ್ತದೆ.
  5. ತಂಗಿಗೆ ಸ್ಕೂಲ್​ಗೆ ಲೇಟಾಗಿದೆ, ಜಡೆ ಹಾಕಿಲ್ಲ ಅಂತ ಮನೇಲಿ ಕೂಗಾಡ್ತಾ ಇದ್ದಾಳೆ. ಅಮ್ಮ ಅವಳಿಗೆ ಟಿಫನ್ ರೆಡಿ ಮಾಡ್ತಿದ್ದಾಳೆ. ನೀವು ಆರಾಮಾಗಿ ಪೇಪರ್ ಓದುತ್ತಿದ್ದೀರಾ ಅಥವಾ ಮೊಬೈಲ್ ಹಿಡಿದು ಕೂತಿರುತ್ತೀರಾ. ಸ್ವಲ್ಪ ಹೊತ್ತು ಅದನ್ನು ಪಕ್ಕಕ್ಕೆ ಇಟ್ಟು, ಬಾರೆ ನಾನು ಜಡೆ ಹಾಕ್ತೀನಿ ಅನ್ನಿ. ನಿಮಗೆ ಹಾಕೋಕೆ ಬರದಿದ್ರೂ ಅವಳಿಗೆ ಅಣ್ಣನ ಆ ಮಾತು ಸಂತೋಷ ಉಕ್ಕಿಸುತ್ತದೆ.
  6. ಅಕ್ಕನ ಕೈಗೆ ಗೋರಂಟಿ ಹಚ್ಚಿ, ಅವಳು ಕೆಲಸಕ್ಕೆ ಹೋಗೊ ಮುನ್ನ ಅವಳದೊಂದು ಸೀರೆ ಅಥವಾ ಡ್ರೆಸ್ ಇಸ್ತ್ರಿ ಮಾಡಿ ಇಡಿ.
  7. ಪ್ರೀತಿಯನ್ನು ಪ್ರಕಟಿಸುವುದಕ್ಕೆ ನೀವು ದೊಡ್ಡ ದೊಡ್ಡ ವಸ್ತುಗಳನ್ನೇ ತಂದು ಕೊಡಬೇಕಿಲ್ಲ. ಇಂತಹ ಸಣ್ಣ ಕೆಲಸಗಳು ಸಾಕು. ಯಾರೂ ಊಹಿಸದಷ್ಟು ಖುಷಿಗಳು ದಕ್ಕುವುದೇ ಸಣ್ಣ ಮಾತು ಮತ್ತು ಕೆಲಸಗಳಿಂದ. 

Leave a Reply

Your email address will not be published. Required fields are marked *