ಮಗಳು ಓದಲಿ ಎಂದು ಮನೆಯಲ್ಲೇ ಕೂಡಿ ಹಾಕಿ ಮದುವೆಗೆ ಹೋದ ತಂದೆ-ತಾಯಿ: ವಾಪಸ್​ ಬರುವಷ್ಟರಲ್ಲಿ ಕಾದಿತ್ತು ದೊಡ್ಡ ಶಾಕ್​

ಮುಂಬೈ: ಮಗಳು ಓದಲಿ ಎಂದು ಮನೆಯಲ್ಲೇ ಕೂಡಿ ಹಾಕಿ ಮದುವೆಗೆ ತೆರಳಿದ್ದ ತಂದೆ-ತಾಯಿಗೆ ವಾಪಸ್​ ಬರುವಷ್ಟರಲ್ಲಿ ಅತಿದೊಡ್ಡ ಶಾಕ್​ ಕಾದಿತ್ತು.

ಇದೊಂದು ದುರ್ಘಟನೆ ಮುಂಬೈ ಉಪನಗರ ದಾದರ್​ನ ಪೊಲಿಸ್​ ಠಾಣೆಯ ಕಾಂಪೌಂಡ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಭಾನುವಾರ ನಡೆದಿದೆ. ತಂದೆ-ತಾಯಿಗೆ ಒಂದು ಮದುವೆಗೆ ಹೋಗಬೇಕಿತ್ತು. ಮಗಳು ಶ್ರಾವಣಿ ಚೌಹಾಣ್​ ಳನ್ನು ಮನೆಯಲ್ಲಿ ಬಿಟ್ಟು ಹೋಗುವ ಮುನ್ನ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದರು. ಮಗಳು ಮನೆಯಿಂದ ಎಲ್ಲಿಯೂ ಹೊರಗೆ ಹೋಗದೆ ಓದಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ವಾಪಸ್​ ಬರುವಷ್ಟರಲ್ಲಿ ಆ ಮಗಳು ಸಾವನ್ನಪ್ಪಿದ್ದಳು.

ಅದು ಐದು ಅಂತಸ್ತಿನ ಕಟ್ಟಡವಾಗಿದ್ದು ಮಧ್ಯಾಹ್ನ 1.45ರಷ್ಟರಲ್ಲಿ ಮೂರನೇ ಮಹಡಿಯ ಒಂದು ಕ್ವಾರ್ಟರ್ಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಪೊಲೀಸರು, ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಮನೆಯ ಹೊರಗಿನಿಂದ ಬೀಗ ಹಾಕಿದ್ದ ಕಾರಣ ಶ್ರಾವಣಿ ಈಚೆ ಬರಲು ಆಗಲಿಲ್ಲ. ಆದರೆ, ಅಗ್ನಿ ಶಾಮಕ ದಳದ ಸಿಬ್ಬಂದಿ ಹೇಳುವ ಪ್ರಕಾರ, ಶ್ರಾವಣಿ ಇದ್ದ ಕೋಣೆಯ ಬಾಗಿಲು ಕೂಡ ಒಳಗಿನಿಂದ ಲಾಕ್​ ಆಗಿತ್ತು. ಅಲ್ಲದೆ, ಆ ಮನೆಯ ಸಮೀಪ ಸೀಮೆಎಣ್ಣೆಯ ಖಾಲಿ ಕ್ಯಾನ್​ವೊಂದು ಸಿಕ್ಕಿದೆ.

ಬಾಗಿಲು ಮುರಿದು ಆಕೆಯ ಕೋಣೆಯೊಳಗೆ ಹೋಗುವಷ್ಟರಲ್ಲಿ ಶ್ರಾವಣಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ಮನೆಯ ವಿದ್ಯುತ್​ ವೈರ್​, ಹಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು ಮೂರು ಗಂಟೆ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿರುವ ಏರ್​ ಕಂಡೀಷನರ್​ನಿಂದ ಶಾರ್ಟ್ ​ಸರ್ಕ್ಯೂಟ್​ ಆಗಿದ್ದು ಬೆಂಕಿ ಹೊತ್ತಿಕೊಂಡಿದೆ. ಅಲ್ಲದೆ, ಸ್ಥಳದಲ್ಲಿ ಸೀಮೆಎಣ್ಣೆ ಚೆಲ್ಲಿದ್ದರಿಂದ ಬಹುಬೇಗ ಎಲ್ಲೆಡೆ ವ್ಯಾಪಿಸಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *