ಹದಿಹರೆಯದವರ ಖಿನ್ನತೆಗೆ ಯೋಗ, ಧ್ಯಾನಗಳೇ ಮದ್ದು ಎಂದ ಅಮೆರಿಕ ವಿವಿ ಅಧ್ಯಯನ

ನ್ಯೂಯಾರ್ಕ್​: ಹದಿಹರೆಯದವರಲ್ಲಿ ಉಂಟಾಗುವ ಖಿನ್ನತೆ ನಿವಾರಣೆಗೆ ಯೋಗ, ಧ್ಯಾನಗಳು ಉತ್ತಮ ಚಿಕಿತ್ಸೆ. ಧ್ಯಾನದಿಂದ ನಮ್ಮ ದೇಹ, ಮನಸನ್ನು ಸಮತೋಲನದಲ್ಲಿ ಇಡಬಹುದು. ಸಾವಧಾನವಾಗಿ ಉಸಿರಾಟ ಮಾಡುತ್ತ ನಮ್ಮ ದೇಹವನ್ನು ನಿಯಂತ್ರಿಸಬಹುದು ಹಾಗೂ ಏಕಾಗ್ರತೆ ಸಾಧಿಸಬಹುದು ಎಂದು ಕೊಲಂಬಿಯಾ ವಿಶ್ವ ವಿದ್ಯಾಲಯ ಸಂಶೋಧನೆ ಮಾಡಿ ಹೇಳಿದೆ.

ಖಿನ್ನತೆಗೆ ಒಳಗಾದ ಹದಿಹರೆಯದವರ ಮೇಲೆ ಸುಮಾರು ಆರು ಬಗೆಯ ಅಧ್ಯಯನ ನಡೆಸಿದ ಯೂನಿವರ್ಸಿಟಿ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ವಿದ್ಯಾರ್ಥಿಗಳಲ್ಲಿನ ಆತಂಕ, ಹತಾಶೆಗಳನ್ನು ಧ್ಯಾನ, ಉಸಿರಾಟದ ಮೂಲಕ ಶಮನ ಮಾಡಿ ಧನಾತ್ಮಕ ಫಲಿತಾಂಶ ಕಂಡುಕೊಂಡಿದೆ.

ಮನಸು, ದೇಹದ ಆರೋಗ್ಯ ಚಿಕಿತ್ಸೆಯಲ್ಲಿ ಯೋಗ, ಧ್ಯಾನಗಳು ಎಷ್ಟು ಮುಖ್ಯ ಎಂಬುದಕ್ಕೆ ಬೆಳೆಯುತ್ತಿರುವ ಮಕ್ಕಳು, ಯುವಕರು, ಅವರಲ್ಲಿನ ಖಿನ್ನತೆ ಸಾಕ್ಷಿ. ಧ್ಯಾನವನ್ನು ಅಳವಡಿಸಿಕೊಂಡರೆ ಖಿನ್ನತೆಯ ಪ್ರಮಾಣ ಕಡಿಮೆಯಾಗುತ್ತದೆ ಎಂಬುದನ್ನು ಐದು ಅಧ್ಯಯನಗಳ ಮೂಲಕ ಸಾಬೀತು ಪಡಿಸಿದ್ದೇವೆ ಎಂದು ಯೂನಿವರ್ಸಿಟಿ ಹೇಳಿದೆ.

ಹದಿಹರೆಯದವರಲ್ಲಿ ಖಿನ್ನತೆ ಸಹಜ. ಶೈಕ್ಷಣಿಕ, ಸಾಮಾಜಿಕವಾಗಿ ಬೆಳವಣಿಗೆಯಾಗುತ್ತಿರುವಾಗ ಆತಂಕವಿರುತ್ತದೆ. ಅಲ್ಲದೆ, ಆರೋಗ್ಯಕ್ಕೆ ಸಂಬಂಧಪಟ್ಟ ತೊಂದರೆಯಿದ್ದರೂ ಅಂಥವರು ಡಿಪ್ರೆಶನ್​ಗೆ ಒಳಗಾಗುತ್ತಾರೆ. ಅದು ನಿರಂತರವಾಗಿದ್ದು ಪ್ರತಿ ಕೆಲಸಕ್ಕೂ ಅಡ್ಡಿಯುಂಟುಮಾಡುತ್ತದೆ. ಈ ಎಲ್ಲ ವಿಧದ ಖಿನ್ನತೆಯಿಂದ ಹೊರಬರಲು ಯೋಗ, ಧ್ಯಾನವನ್ನು ಅಳವಡಿಸಿಕೊಳ್ಳಬೇಕು ಎಂದಿದೆ.
ಅಲ್ಲದೆ, ಬಯೋ ಫೀಡ್​ ಬ್ಯಾಕ್​ ಬಗ್ಗೆಯೂ ಅಧ್ಯಯನ ನಡೆಸಿರುವ ಯೂನಿವರ್ಸಿಟಿ, ಖಿನ್ನತೆ ಹಾಗೂ ಒತ್ತಡಕ್ಕೆ ಒಳಗಾಗಿರುವ ಹದಿಹರೆಯದವರ ಹೃದಯ ಬಡಿತ ನಿಯಂತ್ರಿಸುವಲ್ಲಿ ವಿಡಿಯೋ ಗೇಮ್​ ಆಧರಿತ ಬಯೋಫೀಡ್​ ಬ್ಯಾಕ್​ ಚಿಕಿತ್ಸೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದೂ ತಿಳಿಸಿದೆ.