ಲಖನೌ: ತೋಳಗಳ ನಿರಂತರ ದಾಳಿಯಿಂದ ಉತ್ತರ ಪ್ರದೇಶದ ಕೆಲ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ. ಈಗಾಗಲೇ 10ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದು ಭಾರಿ ಭಯ ಹುಟ್ಟಿಸಿರುವ ಈ ಪರಭಕ್ಷಕಗಳನ್ನು ಹಿಡಿಯಲು ಅರಣ್ಯ ಇಲಾಖೆ ಒಂದು ವಿಶೇಷ ಪ್ಲಾನ್ ಮಾಡಿದೆ.
ಉತ್ತರ ಪ್ರದೇಶದ ಮಹಾಸಿ ಉಪ ವಲಯ ವ್ಯಾಪ್ತಿಯ ಬಹ್ರೈಚ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತೋಳಗಳ ಹಿಂಡು ಓಡಾಡುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅದರಲ್ಲೂ ಮಕ್ಕಳೇ ತೋಳಗಳ ಪ್ರಮುಖ ಟಾರ್ಗೆಟ್ ಆಗಿವೆ. ಹೀಗಾಗಿ ಗ್ರಾಮದ ಜನರು ತೋಳಗಳ ದಾಳಿಯ ಭಯದಲ್ಲೇ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ. ಈ ಭಯಾನಕ ಪರಿಸ್ಥಿತಿಯನ್ನು ನಿಭಾಯಿಸಲು ಅರಣ್ಯ ಇಲಾಖೆ ಇದೀಗ ವಿನೂತನ ಪ್ಲಾನ್ನೊಂದಿಗೆ ಕಾರ್ಯಾಚರಣೆ ಆರಂಭಿಸಿದೆ.
ಗಾಢ ಬಣ್ಣದ ಟೆಡ್ಡಿ ಬೇರ್‌ಗಳನ್ನು ಮಕ್ಕಳ ಮೂತ್ರದಲ್ಲಿ ನೆನೆಸಿ, ತೋಳಗಳಿಗೆ ಗಾಳದ ರೂಪದಲ್ಲಿ ಇಟ್ಟು ಬಲೆಗೆ ಕೆಡವಲು ಅರಣ್ಯ ಇಲಾಖೆ ಪ್ಲಾನ್ ಮಾಡಿದೆ. ಈ ತೋಳಗಳು ರಾತ್ರಿಯ ವೇಳೆ ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಹೆಸರುವಾಸಿಯಾಗಿವೆ. ಅಲ್ಲದೆ, ಸೆರೆಹಿಡಿಯುವುದನ್ನು ತಪ್ಪಿಸಲು ಆಗಾಗ ತಮ್ಮ ಸ್ಥಳಗಳನ್ನು ಸಹ ಬದಲಾಯಿಸುತ್ತವೆ. ಈ ಸವಾಲನ್ನು ಮೆಟ್ಟಿನಿಲ್ಲಲು ಅರಣ್ಯ ಇಲಾಖೆಯು ವರ್ಣರಂಜಿತ ಟೆಡ್ಡಿ ಬೇರ್‌ಗಳನ್ನು ನದಿ ದಡದ ಬಳಿ ಮತ್ತು ತೋಳಗಳ ತಂಗುದಾಣ ಹಾಗೂ ಪೊದೆಗಳ ಸಮೀಪದಲ್ಲಿ ಇರಿಸಿದೆ. ಟೆಡ್ಡಿ ಬೇರ್‌ಗಳನ್ನು ಮಕ್ಕಳ ಮೂತ್ರದಲ್ಲಿ ನೆನೆಸಲಾಗಿದೆ. ಈ ಕ್ರಮವು ಮಾನವನ ಉಪಸ್ಥಿತಿಯ ತಪ್ಪು ಪ್ರಜ್ಞೆಯನ್ನು ತೋಳಗಳಲ್ಲಿ ಸೃಷ್ಟಿಸುತ್ತದೆ ಮತ್ತು ತೋಳಗಳನ್ನು ಬಲೆಗಳ ಹತ್ತಿರಕ್ಕೆ ಸೆಳೆಯುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಅವರು ಈ ವಿನೂತನ ತಂತ್ರದ ಬಗ್ಗೆ ವಿವರಿಸುತ್ತಾ, ತೋಳಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಬೇಟೆಯಾಡಿದ ನಂತರ ಬೆಳಗ್ಗೆ ತಮ್ಮ ಗೂಡುಗಳಿಗೆ ಮರಳುತ್ತವೆ ಎಂದು ಹೇಳಿದರು. ಇಲಾಖೆಯ ಈ ವಿನೂತನ ತಂತ್ರವು ತೋಳಗಳನ್ನು ಜನನಿಬಿಡ ಪ್ರದೇಶಗಳಿಂದ ದಾರಿತಪ್ಪಿಸುವುದು ಮತ್ತು ಅವುಗಳನ್ನು ಗುಹೆಗಳ ಬಳಿ ಇರುವ ಬಲೆಗಳು ಅಥವಾ ಪಂಜರಗಳ ಕಡೆಗೆ ಹೋಗುವಂತೆ ಮಾಡುತ್ತದೆ ಎಂದರು.
ಈ ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಲುವಾಗಿ ಅರಣ್ಯ ಇಲಾಖೆ, ತೋಳಗಳ ಚಲನವಲನವನ್ನು ಪತ್ತೆಹಚ್ಚಲು ಥರ್ಮಲ್ ಡ್ರೋನ್‌ಗಳನ್ನು ಸಹ ಬಳಸುತ್ತದೆ. ಅಲ್ಲದೆ, ಬಲೆಗಳನ್ನು ಇಟ್ಟಿರುವ ಕಡೆಗೆ ತೋಳಗಳನ್ನು ಓಡಿಸಲು ಪಟಾಕಿ ಮತ್ತು ಶಬ್ದವನ್ನು ಸಹ ಬಳಸಿಕೊಳ್ಳಲಾಗುತ್ತದೆ.
#WATCH | Uttar Pradesh: Drone visuals from Bahraich where a search operation is underway to catch the wolves left. So far 4 wolves have been caught. There are 2 wolves left.
Late last night, a wolf attacked a 7-year-old boy and a woman, residents of Barbigha Hardi PS area of… pic.twitter.com/wthuykjNDs
— ANI (@ANI) September 2, 2024
ಅಂದಹಾಗೆ ಬಹ್ರೈಚ್‌ನಲ್ಲಿ ಪರಿಸ್ಥಿತಿ ಹೆಚ್ಚು ಭೀಕರವಾಗಿದೆ. ವರದಿಯ ಪ್ರಕಾರ ಜುಲೈ 17 ರಂದು ಮೊದಲ ದಾಳಿ ನಡೆದಿದ್ದು, ಬಹ್ರೈಚ್‌ನ ಮಹಾಸಿ ಬ್ಲಾಕ್ ಬಳಿಯ 30 ಹಳ್ಳಿಗಳ ಜನರು ಭಯದ ಭೀತಿಯಲ್ಲಿ ನಿತ್ಯವೂ ಬದುಕು ನಡೆಸುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಸಹ ಜನರು ಹೆದರುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಗುಂಪು ಗುಂಪಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ತೋಳಗಳ ಭಯದಿಂದ ಏಕಾಂಗಿಯಾಗಿ ಇರಲು ಸಹ ಭಯಪಡುವಂತಾಗಿದೆ.
ಕಳೆದ 50 ದಿನಗಳಲ್ಲಿ 9 ಮಕ್ಕಳು ಮತ್ತು ಓರ್ವ ಮಹಿಳೆ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ತೋಳಗಳ ದಾಳಿಯಿಂದ 26 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಭಾರತ-ನೇಪಾಳ ಗಡಿ ಜಿಲ್ಲೆ ಬಹ್ರೈಚ್‌ನಲ್ಲಿ ಈ ಘಟನೆ ನಡೆದಿದೆ. (ಏಜೆನ್ಸೀಸ್)
ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!
ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ: ಸುಟ್ಟು ಕರಕಲಾದ ನಾಲ್ವರು ಭಾರತೀಯರು, DNA ಮೂಲಕ ಗುರುತು ಪತ್ತೆ