ಟೆಕ್ಕಿಗೆ 18 ಲಕ್ಷ ರೂ. ವಂಚಿಸಿದ ಮೋಸಗಾತಿ

ಬೆಂಗಳೂರು: ಅಮೆರಿಕದಲ್ಲಿ ನೆಲೆಸಿದ್ದ ನಗರದ ಸಾಫ್ಟ್​ವೇರ್ ಇಂಜಿನಿಯರ್​ಗೆ ಭಾರತ್ ಮ್ಯಾಟ್ರಿಮೋನಿಯಲ್​ನಲ್ಲಿ ಪರಿಚಯಳಾದ ಯುವತಿ ಮದುವೆ ಆಗುವುದಾಗಿ ನಂಬಿಸಿ 18 ಲಕ್ಷ ರೂ. ವಂಚಿಸಿದ್ದಾಳೆ.

ಈ ಸಂಬಂಧ ಎಲೆಕ್ಟ್ರಾನಿಕ್ಸ್ ಸಿಟಿಯ ಜ್ಯೋತಿಕೃಷ್ಣನ್ (35) ಎಂಬುವರು ದೂರು ನೀಡಿದ್ದಾರೆ. ಈ ಮೇರೆಗೆ ಜೆ.ಪಿ. ನಗರ ಪುಟ್ಟೇನಹಳ್ಳಿಯ ರಮ್ಯಾ ನಾಯರ್ ಮತ್ತು ಟಿ.ಕೆ. ಕುಂಜೀರಾಮನ್ ವಿರುದ್ಧಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.

2013ರ ಮಾರ್ಚ್​ನಲ್ಲಿ ಜ್ಯೋತಿಕೃಷ್ಣನ್, ಅಮೆರಿಕದ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾಗಲು ವೈವಾಹಿಕ ಜಾಲತಾಣ ಭಾರತ್ ಮ್ಯಾಟ್ರಿಮೋನಿಯಲ್​ನಲ್ಲಿ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆಗ ರಮ್ಯಾ ನಾಯರ್ ಪರಿಚಯವಾಗಿದ್ದು ಮದುವೆಗೆ ಒಪ್ಪಿದ್ದಳು. ತಾನು ಐಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದೇನೆ. ಆದ್ದರಿಂದ 2 ವರ್ಷಗಳ ಬಳಿಕ ಮದುವೆ ಆಗುತ್ತೇನೆ ಎಂದಿದ್ದಳು. ಅದಕ್ಕೆ ಜ್ಯೋತಿಕೃಷ್ಣನ್ ಒಪ್ಪಿದ್ದಾಗ ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.

ಈ ನಡುವೆ ತನಗೆ ಸ್ವಲ್ಪ ಹಣ ಬೇಕೆಂದು ರಮ್ಯಾ ಕೇಳಿದಾಗ ಜ್ಯೋತಿಕೃಷ್ಣನ್ ಆಕೆಯ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 3 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಐಫೋನ್, ಐಪ್ಯಾಡ್ ಎಂದು ಉಡುಗೊರೆ ರೂಪದಲ್ಲಿ 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕೊಟ್ಟಿದ್ದರು. 2015 ರಿಂದ 2017ವರೆಗೆ ಮದುವೆ ತಯಾರಿ ಮತ್ತು ವೈದ್ಯಕೀಯ ಚಿಕಿತ್ಸೆಗೆಂದು ಕುಂಜಿರಾಮನ್ ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಜಮಾ ಮಾಡಿದ್ದರು. ಆದರೆ, ಈ ವ್ಯಕ್ತಿ ಯಾರೆಂಬುದು ಗೊತ್ತಿರಲಿಲ್ಲ. ರಮ್ಯಾ ಮೊಬೈಲ್​ಗೆ ಕರೆ ಮಾಡಿದಾಗ ಸ್ವೀಕರಿಸುತ್ತಿರಲಿಲ್ಲ. ಅಮೆರಿಕದಿಂದ ಬೆಂಗಳೂರಿಗೆ ಬಂದು ಆಕೆ ಮನೆಗೆ ಹೋಗಿ ನಿಶ್ಚಿತಾರ್ಥ ಮಾಡಿಕೊಡುವಂತೆ ಕೇಳಿದಾಗ 2018ರಲ್ಲಿ ಒಟ್ಟಿಗೆ ಮದುವೆ ಮಾಡಿಕೊಳ್ಳುವುದಾಗಿ ರಮ್ಯಾ ಹೇಳಿದ್ದಳು. ಇದನ್ನು ನಂಬಿ ವಾಪಸ್ ಅಮೆರಿಕಕ್ಕೆ ಹೋದಾಗ ಮತ್ತಷ್ಟು ಹಣ ಪಡೆದಿದ್ದಳು.

ಜ.21ರಂದು ಬೆಂಗಳೂರಿಗೆ ಬಂದ ಜ್ಯೋತಿಕೃಷ್ಣನ್, ರಮ್ಯಾ ಜತೆ ಮೊಬೈಲ್ ಸಂಪರ್ಕದಲ್ಲಿದ್ದರು. ಕೆಲ ದಿನಗಳ ನಂತರ ಸಂಪರ್ಕಕ್ಕೆ ಸಿಕ್ಕಿರಲಿಲಲ್ಲ. ಫೆ.20ರಂದು ಆಕೆ ಮನೆ ಬಳಿಗೆ ಹೋದಾಗ ಮನೆ ಖಾಲಿ ಮಾಡಿದ್ದು ಗೊತ್ತಾಗಿದೆ. ಆಗ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಬಗ್ಗೆ ಜ್ಯೋತಿಕೃಷ್ಣನ್ ಠಾಣೆಗೆ ಬಂದು ದೂರು ನೀಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.