ತಂತ್ರಜ್ಞಾನ ಬಳಕೆಯಿಂದ ಹೈನುಗಾರಿಕೆ ಲಾಭ: ರವಿರಾಜ ಹೆಗ್ಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಅನುಭವದ ಮೂಲಕ ಹೊಸ ವಿಚಾರಗಳನ್ನು ಅಳವಡಿಸಿಕೊಂಡರೆ ಪರಿಪೂರ್ಣತೆ ಸಾಧ್ಯವಾಗುತ್ತದೆ. ತಾಂತ್ರಿಕ ಬೆಳವಣಿಗೆಗಳನ್ನು ಹೈನುಗಾರರು ಅರಿತುಕೊಂಡರೆ ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬಹುದು ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದರು.
ಪುರಭವನದಲ್ಲಿ ಡಾ. ವರ್ಗೀಸ್ ಕುರಿಯನ್ ಜನ್ಮ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಒಕ್ಕೂಟ ವ್ಯವಸ್ಥೆಯಿಂದಾಗಿ ಹಾಲಿಗೆ ನಿರ್ದಿಷ್ಟ ದರ ಲಭಿಸುತ್ತಿದೆ. ಇದಕ್ಕೆ ಡಾ.ವರ್ಗೀಸ್ ಕುರಿಯನ್ ಕಾರಣಕರ್ತರು. ಒಕ್ಕೂಟಕ್ಕೆ ಲಭಿಸಿದ ಲಾಭ ಮತ್ತೆ ಹೈನುಗಾರರಿಗೆ ಲಭಿಸುತ್ತಿದೆ ಎಂದರು.
ಕರ್ನಾಟಕ ಹಾಲು ಮಂಡಳಿ ನಿರ್ದೇಶಕ ಡಾ.ಡಿ.ಎನ್. ಹೆಗಡೆ, ದ.ಕ. ಸ.ಹಾ.ಉ.ಒ. ವ್ಯವಸ್ಥಾಪಕ ಡಾ.ಬಿ.ವಿ ಸತ್ಯನಾರಾಯಣ, ನಿರ್ದೇಶಕರಾದ ಶಶಿಧರ ಶೆಟ್ಟಿ, ಸುಚರಿತ ಶೆಟ್ಟಿ, ದಿವಾಕರ ಶೆಟ್ಟಿ, ಪದ್ಮನಾಭ ಶೆಟ್ಟಿ, ಜಾನಕಿ ಹಂದೆ, ಉದಯ ಕೋಟ್ಯಾನ್, ಕೃಷ್ಣ ಭಟ್, ವೀಣಾ ರೈ, ಸವಿತಾ, ಪಶುಸಂಗೋಪನಾ ಇಲಾಖೆಯ ಡಾ. ಸರ್ವೋತ್ತಮ ಉಡುಪ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಕೃಷ್ಣ, ಡಾ. ನಿಕೇತನಾ ಉಪಸ್ಥಿತರಿದ್ದರು.

ಮುಂದಿನ 2 ತಿಂಗಳಲ್ಲಿ ಉಪ್ಪೂರಿನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿರುವ 87 ಕೋಟಿ ರೂ. ವೆಚ್ವದ ಸುಸಜ್ಜಿತ ನಂದಿನಿ ಡೈರಿ ಘಟಕ ಕಾರ‌್ಯಾರಂಭ ಮಾಡಲಿದೆ.
ಕೊಡವೂರು ರವಿರಾಜ ಹೆಗ್ಡೆ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ