ಹೊಸ ವರ್ಷ, ಹೊಸ ತಿಂಗಳು, ಹೊಸ ದಿನ ಏನು ನಡೆಯಬಹುದು ಎನ್ನುವುದರ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಅದನ್ನು ನಿಖರವಾಗಿ ತಿಳಿಯುವುದು ಅಸಾಧ್ಯ ಎಂದು ಗೊತ್ತಿದ್ದರೂ ಈ ಕುತೂಹಲ ಕಡಿಮೆಯಾಗುವುದೇ ಇಲ್ಲ. ಪರೀಕ್ಷೆ ಮುಗಿಸಿದ ವಿದ್ಯಾರ್ಥಿ ತನಗೆ ಎಷ್ಟು ಅಂಕ ಬರಬಹುದು ಎಂದು ಲೆಕ್ಕಹಾಕಿದ ಹಾಗೆಯೇ ಚುನಾವಣೆ ಮುಗಿಸಿದ ರಾಜಕಾರಣಿಗಳು ತಮ್ಮ ಪಾರ್ಟಿಗೆ ಸಿಗಬಹುದಾದ ಸೀಟಿನ ಲೆಕ್ಕಾಚಾರದಲ್ಲಿ ತೊಡಗುತ್ತಾರೆ; ಹೀಗೆ ತಾವು ಮುನ್ನುಡಿದದ್ದು (ಮುನ್ನುಡಿ = ಟ್ಟಛಿಛಜ್ಚಿಠಿ ) ಎಷ್ಟು ಸರಿಯಾಗಿರಬಹುದು ಎಂಬ ಪ್ರಶ್ನೆಯನ್ನೂ ಸೇರಿಸಿಕೊಂಡು ತಮ್ಮ ಕುತೂಹಲ ಹೆಚ್ಚಿಸಿಕೊಳ್ಳುತ್ತಾರೆ.
ಮುಂದೆ ನಡೆಯಬಹುದಾದ ಸಂಗತಿಗಳ ಬಗ್ಗೆ ನಮಗೆ ಇರುವ ಈ ಕುತೂಹಲದ ಪ್ರತಿಬಿಂಬ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಕಾಣಲು ಸಿಗುತ್ತದೆ. ಆ ಕ್ಷೇತ್ರ ಬೆಳೆದಂತೆಲ್ಲ ಅಲ್ಲೂ ಈ ಕುತೂಹಲ ಜಾಸ್ತಿಯಾಗುತ್ತಿದ್ದು, ಪ್ರೆಡಿಕ್ಟಿವ್ ತಂತ್ರಜ್ಞಾನವೆಂಬ ಹೊಸ ಕ್ಷೇತ್ರವೇ ಸೃಷ್ಟಿಯಾಗಿದೆ.
ಹಳೆಯ ಮೊಬೈಲ್ ಫೋನುಗಳ ಕೀಪ್ಯಾಡಿನಲ್ಲಿ ಮೆಸೇಜ್ ಕಳಿಸಿದ ಅನುಭವವಿದ್ದವರಿಗೆ ಖ9 ಎಂಬ ಹೆಸರು ನೆನಪಿರಬಹುದು. ಆ ಫೋನುಗಳಲ್ಲಿ ಇರುತ್ತಿದ್ದ ಹನ್ನೆರಡು ಕೀಲಿಗಳ ಪೈಕಿ ಒಂಬತ್ತನ್ನು (2ರಿಂದ 9 ಹಾಗೂ 0) ಬಳಸಿ ಸಂದೇಶಗಳನ್ನು ಟೈಪ್ ಮಾಡಲು ಈ ತಂತ್ರಜ್ಞಾನ ನೆರವಾಗುತ್ತಿತ್ತು. ತಲಾ ಮೂರು-ನಾಲ್ಕು ಅಕ್ಷರಗಳಿದ್ದ ಕೀಲಿಗಳನ್ನು ಒತ್ತಿದಾಗ ನಾವು ಏನು ಟೈಪ್ ಮಾಡುತ್ತಿರಬಹುದು ಎಂದು ಊಹಿಸಿ ತೋರಿಸುತ್ತಿದ್ದದ್ದು ಅದರ ಕೆಲಸ. ಇದು ಪ್ರೆಡಿಕ್ಟಿವ್ ತಂತ್ರಜ್ಞಾನದ ಹಳೆಯ ಉದಾಹರಣೆಗಳಲ್ಲೊಂದು.
‘ಪ್ರೆಡಿಕ್ಟಿವ್ ಟೆಕ್ಸ್ ್ಟ ಎಂದು ಕರೆಸಿಕೊಳ್ಳುವ ಈ ಕ್ಷೇತ್ರ ಇದೀಗ ಎಷ್ಟು ಬೆಳೆದಿದೆಯೆಂದರೆ ಮೊದಲ ಕೆಲ ಅಕ್ಷರಗಳನ್ನು ಟೈಪ್ ಮಾಡಿದ ಕೂಡಲೇ ಆ ಪದವನ್ನು ಊಹಿಸುವ ವ್ಯವಸ್ಥೆ ಮೊಬೈಲಿನ ಬಹುತೇಕ ಕೀಲಿಮಣೆಗಳಲ್ಲಿದೆ. ಸರ್ಚ್ ಇಂಜಿನ್ಗಳಲ್ಲಿ ಮಾಹಿತಿ ಹುಡುಕಲು ಹೊರಟಾಗ ನಮ್ಮ ಕೀವರ್ಡ್ಗಳನ್ನೂ ಅದು ಹೀಗೆಯೇ ಊಹಿಸುತ್ತದೆ. ಅಷ್ಟೇ ಅಲ್ಲ, ಇ-ಮೇಲ್ ಬರೆಯಲು ಕುಳಿತಾಗ ಮೊದಲ ಕೆಲ ಪದಗಳನ್ನು ಟೈಪ್ ಮಾಡುತ್ತಿದ್ದಂತೆಯೇ ಆ ಸಾಲನ್ನು ತಾನಾಗಿಯೇ ಪೂರ್ತಿಮಾಡುವ ವ್ಯವಸ್ಥೆಗಳು ಕೂಡ ರೂಪುಗೊಂಡಿವೆ. ಯಾವುದೋ ಸಂಶೋಧನಾ ಕೇಂದ್ರದ ಮೂಲೆಯಲ್ಲಿ ಮಾತ್ರವಲ್ಲ, ಈ ಸೌಲಭ್ಯ ನಮ್ಮ-ನಿಮ್ಮ ಮೊಬೈಲಿನಲ್ಲೇ ಸಿಗುತ್ತಿದೆ (ಜಿ-ಮೇಲ್ ಬಳಸಿ ಇಂಗ್ಲಿಷಿನಲ್ಲೊಂದು ಇಮೇಲ್ ಬರೆದು ನೋಡಿ)!
ಮುನ್ನುಡಿಯುವ ಕೆಲಸ ಟೈಪ್ ಮಾಡಿದ ಪದಗಳಿಗೆ ಮಾತ್ರ ಸೀಮಿತವಾದರೆ ಸಾಕೇ? ದೊಡ್ಡ ಯಂತ್ರಗಳ ನಿರ್ವಹಣೆಯಲ್ಲೂ ಪ್ರೆಡಿಕ್ಟಿವ್ ತಂತ್ರಜ್ಞಾನದ ಕೈವಾಡ ಕಾಣಸಿಗುತ್ತಿದೆ. ಕಾರ್ಖಾನೆಗಳಲ್ಲಿ ಕೆಲಸಮಾಡುವ ಯಂತ್ರಗಳನ್ನು ನಿರಂತರವಾಗಿ ಗಮನಿಸಿಕೊಳ್ಳುತ್ತ, ಅವುಗಳಿಗೆ ನಿರ್ವಹಣೆ ಯಾವಾಗ ಬೇಕಾಗಬಹುದು ಎಂದು ತಿಳಿಸುವ ಈ ಕ್ಷೇತ್ರಕ್ಕೆ ‘ಪ್ರೆಡಿಕ್ಟಿವ್ ಮೈಂಟೆನೆನ್ಸ್’ ಎಂದು ಹೆಸರಿಡಲಾಗಿದೆ. ನಾವು ಓಡಾಡುವ ವಾಹನಗಳೂ ಯಂತ್ರಗಳೇ ತಾನೇ, ಅವುಗಳ ಕಾರ್ಯಾಚರಣೆಯಲ್ಲಿ ಯಾವಾಗ ಏನು ಸಮಸ್ಯೆ ಬರಬಹುದೆಂದು ಹೇಳುವ ‘ಪ್ರೆಡಿಕ್ಟಿವ್ ವೆಹಿಕಲ್ ಟೆಕ್ನಾಲಜಿ’ ಕೂಡ ಬೆಳೆದಿದೆ.
ರಚನೆಯ ಸಂಕೀರ್ಣತೆಯಲ್ಲಿ ಮನುಷ್ಯನ ದೇಹ ಯಾವ ಯಂತ್ರಕ್ಕೂ ಕಡಿಮೆಯಲ್ಲ. ಅದರ ಆರೋಗ್ಯ ಕಾಪಾಡಿಕೊಳ್ಳುವುದು ಯಂತ್ರಗಳ ನಿರ್ವಹಣೆಗಿಂತ ಕ್ಲಿಷ್ಟ ಎಂದರೂ ಸರಿಯೇ. ಈ ಕೆಲಸದಲ್ಲೂ ಪ್ರೆಡಿಕ್ಟಿವ್ ತಂತ್ರಜ್ಞಾನ ನೆರವಾಗುತ್ತದೆ. ಅನೇಕ ವ್ಯಕ್ತಿಗಳ ಆರೋಗ್ಯ ಹಾಗೂ ಅಭ್ಯಾಸಗಳ ಬಗ್ಗೆ ಸಂಗ್ರಹಿಸಿದ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು, ಮುಂದೆ ನಮ್ಮ ಆರೋಗ್ಯ ಹೇಗಿರಬಹುದು ಎನ್ನುವುದನ್ನು ಮೊದಲೇ ಹೇಳುವ ‘ಪ್ರೆಡಿಕ್ಟಿವ್ ಹೆಲ್ತ್ಕೇರ್’ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಆಗತಾನೇ ಹುಟ್ಟಿದ ಮಗುವಿನ ಆರೋಗ್ಯ ಭವಿಷ್ಯದಲ್ಲಿ ಹೇಗಿರಬಹುದು ಎಂದು ಹೇಳುವುದು, ಅದಕ್ಕೆ ಬೇಕಾಗಬಹುದಾದ ಔಷಧೋಪಚಾರವನ್ನು ಮುಂಚಿತವಾಗಿಯೇ ಮಾಡುವುದು ಇದರಿಂದಾಗಿ ಸಾಧ್ಯವಾಗಬಹುದೆಂಬ ನಿರೀಕ್ಷೆ ಕೂಡ ಇದೆ.
ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಇಂದೇ ಮುನ್ನುಡಿಯುವ ಈ ಎಲ್ಲ ಉದಾಹರಣೆಗಳ ಹಿನ್ನೆಲೆಯಲ್ಲೂ ಇರುವುದು ದತ್ತಾಂಶ (ಡೇಟಾ). ವಿವಿಧ ಮೂಲಗಳಿಂದ ಸಂಗ್ರಹಿಸಿದ ಈ ದತ್ತಾಂಶವನ್ನು ಸೂಕ್ತವಾಗಿ ಸಂಸ್ಕರಿಸುವುದರಿಂದಲೇ ಮುನ್ನುಡಿಯುವ ಈ ಕೆಲಸ ಸಾಧ್ಯವಾಗುತ್ತದೆ. ಹಿಂದಿನ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಮುಂದೇನು ನಡೆಯಬಹುದು ಎಂದು ತಿಳಿಸುವ, ಅನೇಕ ಕ್ಷೇತ್ರಗಳಲ್ಲಿ ವಿಸ್ತರಿಸಿಕೊಂಡಿರುವ ಈ ಪ್ರಕ್ರಿಯೆಯೇ ‘ಪ್ರೆಡಿಕ್ಟಿವ್ ಅನಲಿಟಿಕ್ಸ್’. ಪ್ರೆಡಿಕ್ಟಿವ್ ಟೆಕ್ಸ್ಟ್ ಇರಲಿ, ಪ್ರೆಡಿಕ್ಟಿವ್ ಹೆಲ್ತ್ಕೇರ್ ಇರಲಿ, ಅದೆಲ್ಲ ಸಾಧ್ಯವಾಗುವುದು ಲಕ್ಷಾಂತರ ಇಮೇಲ್ ಸಂದೇಶಗಳನ್ನೋ ಸಾವಿರಾರು ಜನರ ಅಭ್ಯಾಸಗಳನ್ನೋ ವಿವರವಾಗಿ ವಿಶ್ಲೇಷಿಸಿದಾಗಲೇ. ಇಷ್ಟೆಲ್ಲ ಸಾಧ್ಯತೆಗಳಿರುವುದರಿಂದಲೇ ಮುಂದೆ ನಡೆಯುವುದನ್ನು ಮೊದಲೇ ಹೇಳಲು ನೆರವಾಗುವ ಪ್ರೆಡಿಕ್ಟಿವ್ ಅನಲಿಟಿಕ್ಸ್ ಬಗ್ಗೆ ಈಗ ಎಲ್ಲಿಲ್ಲದ ಕುತೂಹಲ ಸೃಷ್ಟಿಯಾಗಿದೆ.
ಪ್ರೆಡಿಕ್ಟಿವ್ ಅನಲಿಟಿಕ್ಸ್ನಿಂದ ಇಷ್ಟೆಲ್ಲ ಸಾಧ್ಯವಾಗುತ್ತದೆ, ಸರಿ. ಆದರೆ ಮುಂದೆ ನಡೆಯುವುದನ್ನು ಊಹಿಸಲು ಈ ಪ್ರಕ್ರಿಯೆಗೆ ಸಾಧ್ಯವಾಗುವುದು ಹೇಗೆ?
ಐಟಿ ಕ್ಷೇತ್ರದಲ್ಲಿ ಬಳಕೆಯಾಗುವ ಬೇರೆಲ್ಲ ತಂತ್ರಜ್ಞಾನಗಳಂತೆ ಇದರ ಹಿನ್ನೆಲೆಯಲ್ಲೂ ಆಲ್ಗರಿದಮ್ಳು ಕೆಲಸಮಾಡುತ್ತವೆ (ಇವನ್ನು ಕನ್ನಡದಲ್ಲಿ ಕ್ರಮಾವಳಿಗಳೆಂದು ಕರೆಯಬಹುದು). ತಂತ್ರಜ್ಞಾನದ ನೆರವಿನಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬೇಕಾದ ಹೆಜ್ಜೆಗಳ ಸರಣಿಗಳೇ ಇವು. ಮುಂದೆ ನಡೆಯಬಹುದಾದ್ದನ್ನು ಊಹಿಸುವ ಇಂತಹ ಆಲ್ಗರಿದಮ್ಳನ್ನು ‘ಪ್ರೆಡಿಕ್ಟಿವ್ ಆಲ್ಗರಿದಮ್ಗಳೆಂದು ಕರೆಯುತ್ತಾರೆ.
1+1=2 ಎನ್ನುವ ಸರಳ ಆಲ್ಗರಿದಮ್ಳಿಗಿಂತ ಭಿನ್ನವಾದ, ಹಿಂದೆ ನಡೆದ-ಈಗ ನಡೆಯುತ್ತಿರುವ ಘಟನೆಗಳನ್ನು ನಿರಂತರ ಕಲಿಕೆಗಾಗಿ ಬಳಸುವ ಆಲ್ಗರಿದಮ್ಳು ಪ್ರೆಡಿಕ್ಟಿವ್ ತಂತ್ರಜ್ಞಾನದ ವಿಕಾಸದಲ್ಲಿ ನೆರವಾಗುತ್ತಿವೆ. ಈ ಆಲ್ಗರಿದಮ್ಳಿಂದ ದೊರಕುವ ಫಲಿತಾಂಶ ಎಷ್ಟರ ಮಟ್ಟಿಗೆ ನಿಖರವಾಗಿರಬಹುದು ಎಂದು ಕೇಳಿದಿರಾ? ಅದನ್ನು ಪ್ರೆಡಿಕ್ಟ್ ಮಾಡುವುದಕ್ಕೂ ಒಂದು ಪ್ರೆಡಿಕ್ಟಿವ್ ಆಲ್ಗರಿದಮ್ ಬರಬಹುದು, ಕಾದುನೋಡೋಣ!