ಚೆನ್ನೈ ಏರ್​ಪೋರ್ಟ್​ ಫ್ಲೈ​ ಓವರ್​ನಿಂದ ಬಿದ್ದು ಟೆಕ್ಕಿ ಸಾವು

ಚೆನ್ನೈ: ನಗರದ ಏರ್​ಪೋರ್ಟ್​ ಫ್ಲೈ​ ಓವರ್​ನಿಂದ ಬಿದ್ದು ಸೋಮವಾರ ಬೆಳಗ್ಗೆ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ವಿಜಯವಾಡದ ಚೈತನ್ಯ ವೂಯಾರು(32) ಎಂದು ಗುರುತಿಸಲಾಗಿದೆ.
ಚೈತನ್ಯ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಫ್ಲೈ​ ಓವರ್​ನಿಂದ ಬಿದ್ದಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೊಬೈಲ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತ ಅಥವಾ ಮಾತನಾಡುತ್ತ ರೇಲಿಂಗ್ ಮೇಲೆ ಕೂರಲು ಹೋಗಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಫ್ಲೈ​ ಓವರ್​ನಿಂದ ಬಿದ್ದ ರಭಸಕ್ಕೆ ತಲೆ ಬುರುಡೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಏರ್​ಪೋರ್ಟ್​ ಸಂಚಾರಕ್ಕೆ ಮಾತ್ರ ಫ್ಲೈ​ ಓವರ್ ಬಳಸಲಾಗುತ್ತದೆ. ಆದರೆ ಮೃತರ ಬಳಿ ಯಾವುದೇ ಬ್ಯಾಗ್, ಟಿಕೆಟ್​ ಇರಲಿಲ್ಲ. ಬಹುಶಃ ಇ ಟಿಕೆಟ್ ಹೊಂದಿರಬಹುದು ಎನ್ನಲಾಗಿದೆ. ಬಿದ್ದ ರಭಸಕ್ಕೆ ಅವರ ಐ ಫೋನ್ ಸಂಪೂರ್ಣ ಛಿದ್ರವಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಮಗ ಯಾವ ಕಾರಣಕ್ಕೆ ಚೆನ್ನೈಗೆ ಬಂದ ಎಂಬುದು ತಿಳಿಯುತ್ತಿಲ್ಲ ಎಂದು ಮೃತನ ತಂದೆ ಜನಾರ್ಧನ ರಾವ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *