ಬೆಂಗಳೂರು: ಫೇಸ್ ಬುಕ್ ನಲ್ಲಿ ಬಂದ ಷೇರು ಮಾರುಕಟ್ಟೆ ಜಾಹೀರಾತು ನಂಬಿ ಸ್‌ಟಾವೇರ್ ಇಂಜಿನಿಯರ್ 2.39 ಕೋಟಿ ರೂ. ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.
ವೈಟ್‌ಫೀಲ್ಡ್‌ನ 41 ವರ್ಷದ ಸ್‌ಟಾವೇರ್ ಇಂಜಿನಿಯರ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಜ.21ರಂದು ಟೆಕ್ಕಿಯು ಫೇಸ್ ಬುಕ್ ನೋಡುತ್ತಿದ್ದಾಗ ಆಲಿಸ್‌ಬ್ಲ್ಯೂ ಎಂಬ ಟ್ರೇಡಿಂಗ್ ವ್ಯವಹಾರದ ಜಾಹೀರಾತು ಕಾಣಿಸಿಕೊಂಡಿತ್ತು. ಅದರ ಮೇಲೆ ಕ್ಲಿಕ್ ಮಾಡಿದಾಗ ಆಲಿಸ್‌ಬ್ಲ್ಯೂ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಜಾಯಿನ್ ಆಗಿದ್ದ.

ಇದರಲ್ಲಿ ಪೂಜಾ ಶೈನ್ ಎಂಬಾಕೆ ಟೆಕ್ಕಿಗೆ ಕರೆ ಮಾಡಿ, ‘ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ. ನಿಮಗೊಂದು ಲಿಂಕ್ ಕಳುಹಿಸುತ್ತೇನೆ. ಅದರನ್ನು ಬಳಸಿಕೊಂಡು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಹೂಡಿಕೆ ಮಾಡಿ’ ಎಂದು ಒತ್ತಾಯ ಮಾಡಿದ್ದ. ಇದನ್ನು ನಂಬಿದ ಟೆಕ್ಕಿ, ಲಿಂಕ್ ಬಳಸಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಮೊದಲು 50 ಸಾವಿರ ರೂ. ಹೂಡಿಕೆ ಮಾಡಿದ್ದು, ಅದಕ್ಕೆ ಲಾಭಾಂಶ ಸಹ ಪಡೆದುಕೊಂಡಿದ್ದ. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ಸಿಗಲಿದೆ ಎಂದು ಆಮಿಷವನ್ನು ನಂಬಿ , ವಂಚಕರು ಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದ. ಪ್ರತಿಯಾಗಿ ಅಪ್ಲಿಕೇಷನ್‌ನಲ್ಲಿ ಲಾಭಾಂಶ ಗಳಿಸಿರುವ ಬಗ್ಗೆ ತೋರಿಸಲಾಗಿತ್ತು.
ಕೆಲ ದಿನಗಳ ಹಿಂದೆ ಲಾಭಾಂಶ ವಿತ್‌ಡ್ರಾ ಮಾಡಲು ಟೆಕ್ಕಿ ಮುಂದಾದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಕರೆ ಮಾಡಿ ವಿಚಾರಿಸಿದಾಗ ವಿತ್‌ಡ್ರಾ ಮಾಡಲು ಹಣ ಪಾವತಿ ಮಾಡಬೇಕಿದೆ ಎಂದು ಹೇಳಿದ್ದರು. ಇರಬೇಕೆಂದು ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನಂತರ ಲಾಭಾಂಶವನ್ನು ಡ್ರಾ ಮಾಡಲು ಪ್ರಯತ್ನ ಮಾಡಿದಾಗ ಆಗಲೂ ಸಾಧ್ಯವಾಗಲಿಲ್ಲ.
ಅಷ್ಟೊತ್ತಿಗೆ 2.39 ಕೋಟಿ ರೂ. ಹೂಡಿಕೆ ಮಾಡಿಯಾಗಿತ್ತು. ಇತ್ತ ಟ್ರೇಡಿಂಗ್‌ನಲ್ಲಿ ಹೂಡಿಕೆ ಬಗ್ಗೆ ಸಲಹೆ ಕೊಡುತ್ತಿದ್ದವರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಕೊನೆಗೆ ಇದೊಂದು ಸೈಬರ್ ವಂಚನೆ ಎಂದು ಗೊತ್ತಾಗಿ ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರುದಾರರ ಕಡೆಯಿಂದ ವಂಚಕರ ಬ್ಯಾಂಕ್ ಖಾತೆಗಳನ್ನು ಪಡೆದು ತನಿಖೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.