Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಫಿಂಗರ್​ಪ್ರಿಂಟ್ ತಂತ್ರಜ್ಞಾನ

Wednesday, 11.07.2018, 3:03 AM       No Comments

ನಮ್ಮ ಬೆರಳುಗಳ ಫೋಟೋ ಪಡೆದ ದುಷ್ಕರ್ವಿುಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸೆಲ್ಪಿಗಳಲ್ಲಿ ನಿಮ್ಮ ಬೆರಳು ಕಾಣದಂತೆ ನೋಡಿಕೊಳ್ಳಿ ಎಂಬ ಸಲಹೆಯೂ ಕೇಳಸಿಗುತ್ತಿದೆ. ಈ ಸಂದರ್ಭದಲ್ಲಿ ಬೆರಳ ತುದಿಯ ಫಿಂಗರ್​ಪ್ರಿಂಟ್ ಜಗತ್ತಿನಲ್ಲೊಂದು ಸುತ್ತು…

|ಟಿ.ಜಿ ಶ್ರೀನಿಧಿ

ಶ್ರೀಕೃಷ್ಣ ಪರಮಾತ್ಮ ಒಂದೇ ಬೆರಳಿನಿಂದ ಗೋವರ್ಧನಗಿರಿಯನ್ನು ಎತ್ತಿದ್ದನಂತೆ. ಇಂತಹ ಸಾಧನೆಗಳೆಲ್ಲ ನಮ್ಮಂತಹ ಹುಲುಮಾನವರಿಗೆ ಸಾಧ್ಯವಾಗದಿದ್ದರೂ ಇಂದಿನ ತಂತ್ರಜ್ಞಾನ ನಮ್ಮ ಬೆರಳುಗಳಿಗೂ ಒಂದಷ್ಟು ವಿಶೇಷ ಶಕ್ತಿಗಳನ್ನು ತಂದುಕೊಟ್ಟಿದೆ. ಇಂತಹ ಹಲವು ಶಕ್ತಿಗಳ ಹಿನ್ನೆಲೆಯಲ್ಲಿರುವುದು ನಮ್ಮ ಬೆರಳ ಗುರುತು, ಅರ್ಥಾತ್ ಫಿಂಗರ್ ಪ್ರಿಂಟ್.

ನಮ್ಮ ಬೆರಳುಗಳ ತುದಿಯ ಒಳಭಾಗದಲ್ಲಿರುವ ವಿಶಿಷ್ಟ ರಚನೆಯ ವಿನ್ಯಾಸಗಳನ್ನು ನಾವು ಬೆರಳ ಗುರುತು ಎಂದು ಕರೆಯುತ್ತೇವೆ. ವಸ್ತುಗಳ ಮೇಲೆ ನಮ್ಮ ಹಿಡಿತವನ್ನು(ಗ್ರಿಪ್) ಉತ್ತಮಗೊಳಿಸುವುದು ಈ ಗುರುತುಗಳ ಮೂಲ ಉದ್ದೇಶ. ಆದರೆ ಅವುಗಳಿಗೆ ದೊರೆತಿರುವ ಪ್ರಾಮುಖ್ಯಕ್ಕೆ ಕಾರಣವೇ ಬೇರೆ. ನಮ್ಮ ಬೆರಳ ಮೇಲಿನ ವಿನ್ಯಾಸ ಹೇಗಿರುತ್ತದೆ ಎನ್ನುವುದು ನಮ್ಮನಮ್ಮ ಡಿಎನ್​ಎಯನ್ನು ಅವಲಂಬಿಸಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಬ್ಬರ ಕೈಬೆರಳ ಗುರುತು ಇನ್ನೊಬ್ಬರ ಕೈಬೆರಳ ಗುರುತಿನಂತೆ ಇಲ್ಲದಿರುವುದಕ್ಕೆ ಇದೇ ಕಾರಣ.

ಪ್ರತಿಯೊಬ್ಬರ ಕೈಬೆರಳ ಗುರುತುಗಳೂ ವಿಶಿಷ್ಟವಾಗಿರುತ್ತವೆ ಎಂದಮೇಲೆ ಅವು ಆ ವ್ಯಕ್ತಿಯನ್ನು ಪ್ರತ್ಯೇಕವಾಗಿ ಗುರುತಿಸಲು ನೆರವಾಗಬಹುದು ತಾನೇ? ಬೆರಳ ಗುರುತನ್ನು ವ್ಯಕ್ತಿಯ ಗುರುತಿನ ಚಿಹ್ನೆಯಾಗಿ ಬಳಸಲು ಪ್ರಾರಂಭಿಸಿದ್ದರ ಹಿನ್ನೆಲೆಯಲ್ಲಿದ್ದದ್ದು ಈ ಉದ್ದೇಶವೇ.

ಮಸಿಹಚ್ಚಿದ ಹೆಬ್ಬೆರಳನ್ನು ಕಾಗದದ ಮೇಲೆ ಒತ್ತಿ ಮೂಡಿಸಿದ ಬೆರಳೊತ್ತು ಸಹಿಯ ಸ್ಥಾನ ಪಡೆದ ಹಾಗೆಯೇ ಅಪರಾಧ ನಡೆದ ಸ್ಥಳದಲ್ಲಿ ಮೂಡಿದ ಬೆರಳ ಗುರುತು ಅಪರಾಧಿಯನ್ನು ಪತ್ತೆ ಮಾಡಲು ನೆರವಾಯಿತು.

ತಂತ್ರಜ್ಞಾನ ಬೆಳೆದ ಹಾಗೆ ಬೆರಳ ಗುರುತುಗಳ ಉಪಯೋಗಕ್ಕೆ ಇನ್ನೊಂದು ಆಯಾಮ ಸಿಕ್ಕಿತು. ಬೆರಳೊತ್ತಿನ ಸಂಗ್ರಹ, ಶೇಖರಣೆ ಹಾಗೂ ಪರಿಶೀಲನೆಯಲ್ಲಿ ತಂತ್ರಜ್ಞಾನದ ಸವಲತ್ತುಗಳ ಬಳಕೆ ಪ್ರಾರಂಭವಾದ ಮೇಲೆ ಅವನ್ನು ಹೊಸ ಕ್ಷೇತ್ರಗಳಲ್ಲಿ ಬಳಸುವುದೂ ಸಾಧ್ಯವಾಯಿತು.

ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ, ಮುಖಚರ್ಯು ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳಲ್ಲಿ ಬಳಸುವ ‘ಬಯೋಮೆಟ್ರಿಕ್ಸ್’ ಪರಿಕಲ್ಪನೆ ಬೆಳೆದದ್ದು ಹೀಗೆಯೇ.

ಕಚೇರಿಗಳಲ್ಲಿ ಹಾಜರಾತಿ ದಾಖಲಿಸಲು ಬೆರಳ ಗುರುತು ಪಡೆಯುವ ಯಂತ್ರಗಳಿರುತ್ತವಲ್ಲ, ಅವು ಇದೇ ಪರಿಕಲ್ಪನೆಯನ್ನು ಬಳಸುತ್ತವೆ. ಮೊಬೈಲ್ ಫೋನ್ ಸಂಪರ್ಕ ಪಡೆಯುವಾಗ ಬೆರಳ ಗುರುತನ್ನು ನಮ್ಮ ಆಧಾರ್ ಮಾಹಿತಿಯೊಡನೆ ಹೋಲಿಸುವ ವ್ಯವಸ್ಥೆಯಲ್ಲೂ ಬಯೋಮೆಟ್ರಿಕ್ಸ್ ಬಳಕೆಯಾಗುತ್ತದೆ. ವೀಸಾ ನೀಡುವಾಗ ಪ್ರವಾಸಿಯ ಬೆರಳ ಗುರುತುಗಳನ್ನು ಸಂಗ್ರಹಿಸುವ ಕೆಲ ದೇಶಗಳು ನಾವು ಅಲ್ಲಿಗೆ ಹೋದಾಗ ಗುರುತು ದೃಢೀಕರಿಸಲು ನಮ್ಮ ಬೆರಳೊತ್ತನ್ನು ಆ ಮಾಹಿತಿಯೊಡನೆ ಹೋಲಿಸಿ ನೋಡುವುದೂ ಉಂಟು.

ಮೊಬೈಲ್ ಫೋನ್-ಲ್ಯಾಪ್​ಟಾಪ್​ಗಳಲ್ಲೆಲ್ಲ ಕಾಣಸಿಗುವ ಫಿಂಗರ್​ಪ್ರಿಂಟ್ ಸೆನ್ಸರ್ ಹಿಂದಿರುವುದೂ ಇದೇ ಪರಿಕಲ್ಪನೆ. ಪಾಸ್​ವರ್ಡ್ ಬದಲು ನಮ್ಮ ಬೆರಳೊತ್ತನ್ನು ಬಳಸಲು ಸಾಧ್ಯವಾಗಿಸಿದ್ದು ಈ ಸಾಧನದ ವೈಶಿಷ್ಟ್ಯ. ಮೊಬೈಲ್ ಪರದೆಯ ಕೆಳಗೋ, ಹಿಂಬದಿ ಕವಚದಲ್ಲೋ ಇರುತ್ತಿದ್ದ ಈ ಸಾಧನವನ್ನು ಇದೀಗ ಪರದೆಯ ಅಂಗವಾಗಿಯೇ ರೂಪಿಸುವ ಪ್ರಯತ್ನವೂ ನಡೆದಿದೆ.

ತಂತ್ರಜ್ಞಾನ ಜಗತ್ತಿನಲ್ಲಿ ನಮ್ಮ ಬೆರಳೊತ್ತು ಎಲ್ಲಿ ಹೇಗೆಯೇ ಬಳಕೆಯಾಗಲಿ, ಅಲ್ಲೆಲ್ಲ ನಡೆಯುವುದು ಸರಿಸುಮಾರು ಒಂದೇ ರೀತಿಯ ಪ್ರಕ್ರಿಯೆ. ಬೆರಳೊತ್ತನ್ನು ಸ್ಕಾ್ಯನ್ ಮಾಡಿ ಉಳಿಸಿಟ್ಟುಕೊಳ್ಳುವುದು (ಎನ್​ರೋಲ್​ವೆುಂಟ್) ಈ ಪ್ರಕ್ರಿಯೆಯ ಮೊದಲ ಭಾಗವಾದರೆ ನಂತರ ಯಾವಾಗಲೋ ನಾವು ನೀಡುವ ಬೆರಳೊತ್ತನ್ನು ಹೀಗೆ ಉಳಿಸಿಟ್ಟ ವಿವರದೊಡನೆ ಹೋಲಿಸಿ ಇದು ಇಂಥವರದ್ದೇ ಎಂದು ದೃಢೀಕರಿಸುವುದು(ವೆರಿಫಿಕೇಶನ್) ಇನ್ನೊಂದು ಭಾಗ. ಇದನ್ನೆಲ್ಲ ಬಹಳ ಕ್ಷಿಪ್ರವಾಗಿ ಹಾಗೂ ಸಮರ್ಥವಾಗಿ ಮಾಡಬಲ್ಲ ತಾಂತ್ರಿಕ ಸವಲತ್ತುಗಳು ಇಂದು ಲಭ್ಯವಿರುವುದರಿಂದಲೇ ಫಿಂಗರ್​ಪ್ರಿಂಟ್ ಇಂದು ಭೌತಿಕ ಸಹಿಗೆ, ಮೊಬೈಲ್-ಕಂಪ್ಯೂಟರ್​ನ ಪಾಸ್​ವರ್ಡ್​ಗೆ ಪರ್ಯಾಯವಾಗಿ ಬೆಳೆಯುತ್ತಿದೆ.

ಹಾಗೆಂದು ಈ ತಂತ್ರಜ್ಞಾನ ನೂರಕ್ಕೆ ನೂರು ಪರಿಪೂರ್ಣ ಎಂದೇನೂ ಇಲ್ಲ. ಬೆರಳುಗಳಿಗೆ ಕೊಳೆಮೆತ್ತಿಕೊಂಡಾಗ, ಗಾಯವಾದಾಗಲೆಲ್ಲ ಬೆರಳೊತ್ತಿನ ಪರೀಕ್ಷೆ ಅಷ್ಟೇನೂ ಸಮರ್ಪಕವಾಗಿ ನಡೆಯುವುದಿಲ್ಲ. ಬೆರಳೊತ್ತನ್ನು ಉಳಿಸಿಡುವುದು, ಮತ್ತೆ ಸಂಗ್ರಹಿಸಿ ಹೋಲಿಸುವುದು ಎಲ್ಲವೂ ಡಿಜಿಟಲ್ ರೂಪದಲ್ಲೇ ಆದ್ದರಿಂದ ನಮ್ಮ ಬೆರಳೊತ್ತನ್ನು ನಕಲಿಸಿ ಬಳಸುವುದು ಅಸಾಧ್ಯ ಸಂಗತಿಯೇನಲ್ಲ (ಹಾಗೆಂದು ಅದು ಸುಲಭಸಾಧ್ಯವೂ ಅಲ್ಲ). ಹೀಗಾಗಿ ಡಿಜಿಟಲ್ ಜಗತ್ತಿನ ಉಳಿದೆಲ್ಲ ಮಾಹಿತಿಯಂತೆ ನಾವು ನಮ್ಮ ಬೆರಳೊತ್ತನ್ನೂ ಜೋಪಾನವಾಗಿ ನೋಡಿಕೊಳ್ಳುವುದು ಒಳ್ಳೆಯದು. ಭೌತಿಕ ರೂಪದಲ್ಲೂ, ಫೋಟೋ ರೂಪದಲ್ಲೂ!

Leave a Reply

Your email address will not be published. Required fields are marked *

Back To Top