ಸ್ಟೀವ್‌ ಸ್ಮಿತ್‌ ಕ್ಷಮೆ ಯಾಚನೆ, ಮುಖ್ಯ ಕೋಚ್‌ ಸ್ಥಾನಕ್ಕೆ ಡರೇನ್‌ ಲೆಹ್ಮನ್‌ ರಾಜೀನಾಮೆ

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಪ್ರಕರಣದ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ಹೇಳಿದ್ದು, ತಮ್ಮ ಪೋಷಕರ ಹಾಗೂ ಆಸೀಸ್ ಜನರ ಕ್ಷಮೆ ಕೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ನನ್ನ ತಪ್ಪಿನ ಅರಿವಾಗಿದ್ದು, ಅದರ ಪರಿಣಾಮಗಳನ್ನು ಸಹ ಅರ್ಥ ಮಾಡಿಕೊಂಡಿದ್ದೇನೆ. ಇದು ನಾಯಕತ್ವದ ಸೋಲಾಗಿದೆ. ಇದರಿಂದಾಗಿ ನಾನು ಸಾಕಷ್ಟು ನೊಂದಿದ್ದು, ಇದು ನನ್ನ ಜೀವನದ ಉದ್ದಕ್ಕೂ ವಿಷಾಧದಿಂದ ಕೂಡಿರುತ್ತದೆ. ಇದರಿಂದ ನಾನು ಒಂದೊಳ್ಳೆ ಪಾಠವನ್ನು ಕಲಿಯುತ್ತೇನೆ ಎಂದು ಕಣ್ಣೀರಿಟ್ಟರು.

ಮೊದಲಿಗೆ ನಾನು ಎಲ್ಲರಲ್ಲೂ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ಕ್ರಿಕೆಟ್‌ ಅನ್ನು ನಾನು ತುಂಬ ಪ್ರೀತಿಸುತ್ತೇನೆ. ಕ್ರಿಕೆಟ್‌ ಆಡಲು ಬಯಸುವ ಮಕ್ಕಳನ್ನು ಬೆಂಬಲಿಸುವುದನ್ನು ನಾನು ಪ್ರೀತಿಸುತ್ತೇನೆ. ಈಗ ನೀವು ನನ್ನನ್ನು ಯಾವುದೇ ಸಮಯದಲ್ಲಾದರೂ ಪ್ರಶ್ನಿಸುವಂತಹ ಪರಿಸ್ಥಿತಿ ಉಂಟಾಗಿದ್ದು, ಇದು ನನ್ನ ಪೋಷಕರಿಗೂ ನೋವನ್ನುಂಟು ಮಾಡುತ್ತಿದೆ. ಆಸಿಸ್‌ನ ಜನರು ಮತ್ತು ಅಭಿಮಾನಿಗಳಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ ಸ್ಟೀವ್‌ ಸ್ಮಿತ್‌ ಅವರ ತಂದೆ ಪೀಠರ್‌ ಕೂಡ ಸ್ಟೀವ್‌ ಜತೆಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸ್ಟೀವ್‌ ಸ್ಮಿತ್‌ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್​ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೋರಿದ್ದು, ಡೇವಿಡ್ ವಾರ್ನರ್ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ.

ಮುಖ್ಯ ಕೋಚ್‌ ಸ್ಥಾನಕ್ಕೆ ಡರೇನ್‌ ಲೆಹ್ಮನ್‌ ರಾಜೀನಾಮೆ

ಚೆಂಡು ವಿರೂಪ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಸ್ಟೀವ್‌ ಸ್ಮಿತ್‌ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್​ ಸುದ್ದಿಗೋಷ್ಠಿ ನಡೆಸಿದ ಬಳಿಕ ಮುಖ್ಯ ಕೋಚ್‌ ಸ್ಥಾನಕ್ಕೆ 48 ವರ್ಷದ ಡರೇನ್‌ ಲೆಹ್ಮನ್‌ ರಾಜೀನಾಮೆ ನೀಡಿದ್ದಾರೆ. ಈಗ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಹೊಸ ಕೋಚ್‌ನ್ನು ಹುಡುಕುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯ ಸಿಇಒ ಜೇಮ್ಸ್‌ ಸುಂದರ್‌ ಲ್ಯಾಂಡ್‌, ಪ್ರಕರಣದಲ್ಲಿ ಕೋಚ್‌ ಡರೇನ್‌ ಲೆಹ್ಮನ್‌ರ ಪಾತ್ರ ಇಲ್ಲ ಎಂದು ಕ್ಲೀನ್‌ ಚಿಟ್‌ ನೀಡಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *