ನವದೆಹಲಿ: ಕಬಡ್ಡಿ ನಂತರ ಮತ್ತೊಂದು ದೇಸಿ ಕ್ರೀಡೆ ಕಾರ್ಪೋರೇಟ್ ರಂಗು ಪಡೆದುಕೊಳ್ಳಲು ಸಜ್ಜಾಗಿದೆ. ಚೊಚ್ಚಲ ಆವೃತ್ತಿ ಖೋಖೋ ವಿಶ್ವಕಪ್ ಟೂರ್ನಿಗೆ ಸೋಮವಾರ ಚಾಲನೆ ದೊರೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ನೇಪಾಳ ಪುರುಷರ ತಂಡಗಳು ಎದುರಾಗಲಿವೆ.
ಜ.19ರವರೆಗೆ ಐಜಿಐ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ 20 ಮತ್ತು ಮಹಿಳಾ ವಿಭಾಗದಲ್ಲಿ 19 ತಂಡಗಳು ಭಾಗವಹಿಸಲಿವೆ. ಒಟ್ಟು 23 ದೇಶಗಳು ಕಣದಲ್ಲಿವೆ. ಟೂರ್ನಿಯ ವಿಜೇತರಿಗೆ ಬಹುಮಾನ ಮೊತ್ತ ವಿತರಿಸಲಾಗುವುದಿಲ್ಲ. ಟ್ರೋಫಿಯನ್ನಷ್ಟೇ ನೀಡಲಾಗುವುದು. ಕರ್ನಾಟಕದ ಗೌತಮ್ ಎಂ.ಕೆ. ಭಾರತದ ಪುರುಷರ ತಂಡದಲ್ಲಿ ಮತ್ತು ಚೈತ್ರಾ ಬಿ. ಮಹಿಳಾ ತಂಡದಲ್ಲಿದ್ದಾರೆ.
ಪುರುಷರ ವಿಭಾಗದಲ್ಲಿ ತಂಡಗಳನ್ನು ತಲಾ 5ರಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಹಾಗೂ ಮೂರನೇ ಸ್ಥಾನ ಪಡೆದ 2 ಅತ್ಯುತ್ತಮ ತಂಡಗಳು ಕ್ವಾರ್ಟರ್‌ೈನಲ್‌ಗೆ ಅರ್ಹತೆ ಪಡೆಯಲಿವೆ. ಭಾರತ ತಂಡ ಎ ಗುಂಪಿನಲ್ಲಿ ನೇಪಾಳ, ಪೆರು, ಬ್ರೆಜಿಲ್, ಭೂತಾನ್ ತಂಡಗಳೊಂದಿಗೆ ಸ್ಥಾನ ಪಡೆದುಕೊಂಡಿದೆ. ಮಹಿಳಾ ವಿಭಾಗದಲ್ಲಿ ಎ ಗುಂಪಿನಲ್ಲಿ ಭಾರತ, ಇರಾನ್, ಮಲೇಷ್ಯಾ, ದ.ಕೊರಿಯಾ ಸಹಿತ 4 ತಂಡಗಳಷ್ಟೇ ಇದ್ದರೆ, ಇತರ 3 ಗುಂಪಿನಲ್ಲಿ ತಲಾ 5 ತಂಡಗಳಿವೆ.
ಇಂದಿನ ಪಂದ್ಯ
ಭಾರತ-ನೇಪಾಳ
ಆರಂಭ: ರಾತ್ರಿ 8.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಡಿಡಿ, ಹಾಟ್‌ಸ್ಟಾರ್