ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು

ವಿಜಯವಾಣಿ ಸುದ್ದಿಜಾಲ ಕೊಡೇಕಲ್
ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯುವ ಜತೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದೇ ಟೀಮ್ ಮೋದಿ ತಂಡದ ಪ್ರಮುಖ ಧ್ಯೇಯ. ಯುವಕರು ಈ ತಂಡದಲ್ಲಿ ಭಾಗವಹಿಸಬೇಕು ಎಂದು ಗ್ರಾಮದ ಟೀಮ್ ಮೋದಿ ತಂಡದ ಸಂಚಾಲಕ ಬಸವರಾಜ ಭದ್ರಗೋಳ ಹೇಳಿದರು.
ಗ್ರಾಮದ ಶ್ರೀ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಟೀಮ್ ಮೋದಿ ತಂಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ, ಜನರಲ್ಲಿ ಜಾಗೃತಿ ಮೂಡಿಸಲು ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಈ ತಂಡ ಸಿದ್ಧವಾಗಿದೆ. 2019ರ ಲೋಕಸಭೆ ಚುನಾವಣೆವರೆಗೆ ಕಾರ್ಯ ನಿರ್ವಹಿಸಲಿದೆ. ರಾಜಕೀಯ ರಹಿತವಾಗಿ ಜನರನ್ನು ತಲುಪುವುದೇ ತಂಡದ ಮುಖ್ಯ ಕೆಲಸ ಎಂದು ಹೇಳಿದರು.
ರಾಜನಕೊಳ್ಳುರಿನ ಸಂಗನಗೌಡ ಧನರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಹಲವು ಯೋಜನೆಗಳ ಕುರಿತು ಜನರಿಗೆ ಮಾಹಿತಿ, ಸಕರ್ಾರದ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಕಳೆದ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ನಮೋ ಬ್ರಿಗೇಡ್ ಮೂಲಕ ಮೋದಿಯವರ ಪರ ಪ್ರಚಾರ ನಡೆಸಲಾಗಿತ್ತು. ಅದರ ಮುಂದುವರಿದ ಭಾಗ ಟೀಮ್ ಮೋದಿ ಎಂದು ಹೇಳಿದರು.
ಗ್ರಾಮದ ಶ್ರೀಗದ್ದೆಮ್ಮ ದೇವಿ ಕಟ್ಟೆ ಮುಂಭಾಗದಲ್ಲಿ ಟೀಂ ಮೋದಿ ತಂಡದ ಸದಸ್ಯರು ಕೈಗೊಂಡಿದ್ದ ಬೃಹತ್ ಬೈಕ್ ರ್ಯಾಲಿಗೆ ತಿಮ್ಮಮ್ಮ ಶಂಭಣ್ಣಗೌಡ ಮತ್ತು ರಾಜಾ ಜೀತೇಂದ್ರನಾಯಕ ಜಹಾಗೀರದಾರ ಚಾಲನೆ ನೀಡಿದರು. ನೀಲಕಂಠಸ್ವಾಮಿ ವೀರಕ್ತಮಠ, ಅಂಬ್ರಣ್ಣ ಹುಡೇದ, ಮೋಹನ ಪಾಟೀಲ್, ರಂಗನಾಥ ದೋರಿ, ತಿರುಪತಿ ಚವ್ಹಾಣ್, ದೇವು ಗೋಪಾಳಿ, ಮಲ್ಲು ನವಲಗುಡ್ಡ, ರವೀಂದ್ರ ಅಂಗಡಿ, ದಾವಲ್ಸಾಬ್ ಕಮತಗಿ, ಧರೆಪ್ಪ ಮೇಟಿ, ಅಶೋಕ ಅಂಗಡಿ, ಸಂಗಮೇಶ ಹೂಗಾರ, ಪ್ರಮೋದ ಜೋಶಿ, ಶಾಂತಿಲಾಲ ರಾಠೋಡ್, ಮಲ್ಲು ಜಂಗಳಿ, ಬಸವರಾಜಗೌಡ ಜೇವರ್ಗಿ, ಅಮರಪ್ಪ ಸಜ್ಜನ, ವಿಶ್ವನಾಥ ಬಬಲೇಶ್ವರ, ವೀರಸಂಗಪ್ಪ ಅಂಬ್ಲಿಹಾಳ, ರಮೇಶ ಬಿರಾದಾರ, ಶಿವಶಂಕರ ಯಡಹಳ್ಳಿ ಇತರರಿದ್ದರು.

ಬೃಹತ್ ಬೈಕ್ ರ್ಯಾಲಿ: ಕೊಡೇಕಲ್ನಲ್ಲಿ ಟೀಮ್ ಮೋದಿ ತಂಡದ ಸದಸ್ಯರು ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ಸುಮಾರು 200 ಯುವಕರು ಪಾಲ್ಗೊಂಡಿದ್ದರು. ಶ್ರೀ ಗದ್ದೆಮ್ಮದೇವಿಯ ಕಟ್ಟೆಯಿಂದ ಪ್ರಾರಂಭವಾದ ಬೈಕ್ ರ್ಯಾಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೋದಿಯವರ ಕಾರ್ಯ ಸಾಧನೆಗಳನ್ನು ಘೋಷಣೆ ಕೂಗಲಾಯಿತು. ಕೊಡೇಕಲ್, ಬರದೇವನಾಳ, ಬೂದಿಹಾಳ, ಮಾರನಾಳ, ಹಗರಟಗಿ ಸೇರಿ ಸುತ್ತಲಿನ ಗ್ರಾಮದ ಯುವಕರು ಭಾಗವಹಿಸಿದ್ದರು.