ಬೆಂಗಳೂರು: ಕರ್ನಾಟಕ ತಂಡ 78ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಕೂಟದಲ್ಲಿ 3 ದಶಕಗಳ ಪ್ರಾಬಲ್ಯವನ್ನು ಮುಂದುವರಿಸಿದೆ. ಒಡಿಶಾದ ಭುವನೇಶ್ವರದಲ್ಲಿ ಗುರುವಾರ ಮುಕ್ತಾಯಗೊಂಡ ಕೂಟದಲ್ಲಿ ಕರ್ನಾಟಕದ ಈಜುಪಟುಗಳು 16 ಚಿನ್ನ, 11 ಬೆಳ್ಳಿ ಮತ್ತು 14 ಕಂಚಿನ ಸಹಿತ ಒಟ್ಟು 41 ಪದಕಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿದರು. ತಮಿಳುನಾಡು (8 ಚಿನ್ನ, 5 ಬೆಳ್ಳಿ, 3 ಕಂಚು) ದ್ವೀತಿಯ ಮತ್ತು ಮಹಾರಾಷ್ಟ್ರ (5 ಚಿನ್ನ, 6 ಬೆಳ್ಳಿ, 6 ಕಂಚು) ತೃತೀಯ ಸ್ಥಾನ ಗಳಿಸಿತು.
ಕರ್ನಾಟಕ ತಂಡ ಪುರುಷರ ಮತ್ತು ಮಹಿಳಾ ವಿಭಾಗದಲ್ಲೂ ಟೀಮ್ ಚಾಂಪಿಯನ್ಷಿಪ್ ಗೆದ್ದುಕೊಂಡಿತು. ರಾಜ್ಯ ತಂಡ ಪುರುಷರ ವಿಭಾಗದಲ್ಲಿ 5 ಚಿನ್ನ, 7 ಬೆಳ್ಳಿ, 8 ಕಂಚು ಮತ್ತು ಮಹಿಳೆಯರ ವಿಭಾಗದಲ್ಲಿ 10 ಚಿನ್ನ, 4 ಬೆಳ್ಳಿ, 5 ಕಂಚು ಒಲಿಸಿಕೊಂಡಿತು. ಕೂಟದ ಐದನೇ ಹಾಗೂ ಕೊನೇ ದಿನ ಕರ್ನಾಟಕ 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ ಒಲಿಸಿಕೊಂಡಿತು. ಕೂಟದಲ್ಲಿ ಒಟ್ಟು 14 ಹೊಸ ದಾಖಲೆಗಳು ನಿರ್ಮಾಣಗೊಂಡವು.
ಧಿನಿಧಿ, ಶೋನ್ಗೆ ಪ್ರಶಸ್ತಿ
ಕರ್ನಾಟಕದ ಈಜುಪಟುಗಳಾದ ಶೋನ್ ಗಂಗೂಲಿ ಮತ್ತು ಧಿನಿಧಿ ದೇಸಿಂಘು ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಶೋನ್ ಮತ್ತು ಧಿನಿಧಿ ಕೂಟದಲ್ಲಿ ತಲಾ 2 ಕೂಟದಾಖಲೆ ನಿರ್ಮಿಸಿದ್ದರು.
ಶೋನ್, ವಿಹಿತಾಗೆ ಚಿನ್ನ
ಕರ್ನಾಟಕದ ಶೋನ್ ಗಂಗೂಲಿ ಕೂಟದ ಕೊನೇ ದಿನ ನೂತನ ಕೂಟದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು ಪುರುಷರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 4 ನಿಮಿಷ, 24.64 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ, 2023ರಲ್ಲಿ ಆರ್ಯನ್ ನೆಹ್ರಾ (4ನಿ, 25.62ಸೆ) ನಿರ್ಮಿಸಿದ್ದ ದಾಖಲೆ ಮುರಿದರು. ಮಹಿಳೆಯರ 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ರಾಜ್ಯದ ವಿಹಿತಾ ನಯನಾ ಲೋಗನಾಥನ್ 1 ನಿಮಿಷ, 5.18 ಸೆಕೆಂಡ್ಗಳಲ್ಲಿ ಈಜಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.
ಪುರುಷರ 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಕರ್ನಾಟಕದ ಉತ್ಕರ್ಷ್ ಸಂತೋಷ್ ಪಾಟೀಲ್ (56.29 ಸೆ) ಬೆಳ್ಳಿ ಮತ್ತು ಆಕಾಶ್ ಮಣಿ (56.35ಸೆ) ಕಂಚು ಜಯಿಸಿದರು. ಪುರುಷರ 100 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ತನಿಷ್ ಜಾರ್ಜ್ ಮ್ಯಾಥ್ಯೂ (51.30ಸೆ) ಬೆಳ್ಳಿ ಗೆದ್ದರು. ಮಹಿಳೆಯರ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ರಾಜ್ಯದ ಅದಿತಿ ಎನ್. ಮುಲಯ್ (9ನಿ, 21.55ಸೆ) 4ನೇ ಸ್ಥಾನದೊಂದಿಗೆ ಪದಕ ವಂಚಿತರಾದರು.