ಕಳೆದ 11 ವಿಶ್ವಕಪ್​ಗಳಲ್ಲಿ ಭಾರತದ ಆರಂಭ ಹೇಗಿತ್ತು: ಅಂಕಿ ಅಂಶಗಳು ಹೇಳುವುದೇನು?

ಸೌಥಾಂಪ್ಟನ್: ಟೀಮ್ ಇಂಡಿಯಾ 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಅಭಿಯಾನವನ್ನು ಬುಧವಾರ ಇಲ್ಲಿನ ರೋಸ್​ಬೌಲ್ ಕ್ರೀಡಾಂಗಣದಲ್ಲಿ ಆರಂಭಿಸಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆದ್ದು ವಿಶ್ವಕಪ್​ನ ಅಭಿಮಾನವನ್ನು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಗಾಯದ ಸಮಸ್ಯೆಗಳಿಂದ ಆರಂಭದಲ್ಲೇ ಜಂಘಾಬಲವನ್ನು ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸುಲಭವಾಗಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಆದರೂ ವಿಶ್ವಕಪ್​ನಲ್ಲಿ ಮೊದಲ ಪಂದ್ಯ ಎಂಬುದು ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆಟಗಾರರ ಆತ್ಮವಿಶ್ವಾಸ ಹೆಚ್ಚುತ್ತದೆ. ಇದೇ ಆತ್ಮವಿಶ್ವಾಸದಲ್ಲಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಆಟವಾಡಲು ಸಾಧ್ಯವಾಗತ್ತದೆ. ಆದರೆ, ಇದುವರೆಗೆ ನಡೆದ 11 ಆವೃತ್ತಿಯ ವಿಶ್ವಕಪ್​ನಲ್ಲಿ ಭಾರತ ತಂಡ ತಾನು ಆಡಿದ ಮೊದಲ ಪಂದ್ಯದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು ಎಂದು ಅಂಕಿ ಅಂಶಗಳು ಹೇಳುತ್ತಿವೆ.

ವಿಶ್ವಕಪ್​ನಲ್ಲಿ ಭಾರತ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ 6 ಪಂದ್ಯಗಳಲ್ಲಿ ಸೋಲನುಭವಿಸಿದೆ. 1975ರಲ್ಲಿ ನಡೆದ ಮೊದಲ ವಿಶ್ವಕಪ್​ನಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ 36 ರನ್​ಗಳಿಂದ ಸೋಲನುಭವಿಸಿದ್ದರೆ, 1979ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲನುಭವಿಸಿತ್ತು. 1983ರಲ್ಲಿ ಕಪಿಲ್​ ದೇವ್​ ನೇತೃತ್ವದ ಟೀಂ ಇಂಡಿಯಾ ವೆಸ್ಟ್​ ಇಂಡೀಸ್​ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಫೈನಲ್​ ಪಂದ್ಯದಲ್ಲೀ ವೆಸ್ಟ್​ ಇಂಡಿಸ್​ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್​ ಜಯಿಸಿತ್ತು.

1987ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ ಒಂದು ರನ್​ಗಳಿಂದ ಸೋಲನುಭವಿಸಿತ್ತು. 1992ರಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ 9 ರನ್​ಗಳಿಂದ ಸೋಲನುಭವಿಸಿತ್ತು. 1996ರಲ್ಲಿ ಕೀನ್ಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 4 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು. 2003ಲ್ಲಿ ನೆದರ್​ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. 2007ರಲ್ಲಿ ಬಾಂಗ್ಲಾದೇಶ ತಂಡ 5 ವಿಕೆಟ್​ಗಳಿಂದ ಭಾರತದ ವಿರುದ್ಧ ಗೆಲುವು ಸಾಧಿಸಿತ್ತು. ಈ ಟೂರ್ನಿಯಲ್ಲಿ ಭಾರತ ತಂಡ ಲೀಗ್​ ಹಂತದಲ್ಲೇ ನಿರ್ಗಮಿಸಿತ್ತು.

2011 ರಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ತನ್ನ ಅಭಿಯಾನವನ್ನು ಆರಂಭಿಸಿತ್ತು. ಧೋನಿ ನೇತೃತ್ವದ ತಂಡ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು. 2015ರಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 76 ರನ್​ಗಳಿಂದ ಗೆಲುವು ಸಾಧಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *