ವಿಶ್ವಕಪ್​ಗೆ ಬಾಳೆಹಣ್ಣು, ರೈಲು ಪ್ರಯಾಣ ಬೇಕೆಂದ ಕೊಹ್ಲಿ ಟೀಮ್

ನವದೆಹಲಿ: ಈಗಾಗಲೆ ವಿದೇಶಿ ಪ್ರವಾಸದ ವೇಳೆ ವ್ಯಾಗ್ಸ್ (ಪತ್ನಿ ಮತ್ತು ಗೆಳತಿಯರು) ಜತೆಗಿರಲು ಅವಕಾಶ ನೀಡಬೇಕೆಂಬ ಮನವಿ ಸಲ್ಲಿಸಿ ಸಕಾರಾತ್ಮಕ ಫಲಿತಾಂಶ ಪಡೆದಿರುವ ಬೆನ್ನಲ್ಲೆ ಟೀಮ್ ಇಂಡಿಯಾ, ಮುಂದಿನ ವರ್ಷದ ಏಕದಿನ ವಿಶ್ವಕಪ್​ಗೆ ಕೆಲ ವಿಶೇಷ ಬೇಡಿಕೆಗಳನ್ನಿಟ್ಟಿದೆ. ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಸಮಯದಲ್ಲಿ ಆಟಗಾರರಿಗೆ ಕಾಯ್ದಿರಿಸಿದ ರೈಲು ಕೋಚ್, ನೆಚ್ಚಿನ ಬಾಳೆಹಣ್ಣು ಪೂರೈಕೆ ಮತ್ತು ಸುಸಜ್ಜಿತ ಜಿಮ್ ಒಳಗೊಂಡ ಹೋಟೆಲ್ ಬುಕ್ಕಿಂಗ್ ಮಾಡಿಕೊಡಬೇಕೆಂದು ವಿರಾಟ್ ಕೊಹ್ಲಿ ಟೀಮ್ ಬಿಸಿಸಿಐಗೆ ಬೇಡಿಕೆ ಸಲ್ಲಿಸಿದೆ. ಇದರಲ್ಲಿ ರೈಲು ವ್ಯವಸ್ಥೆ ಕಲ್ಪಿಸಲು ಷರತ್ತಿನ ಮೇಲೆ ಓಕೆ ಎಂದಿರುವ ಬಿಸಿಸಿಐ, ಇತರ ಬೇಡಿಕೆಗಳಿಗೂ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ.

ಕ್ರೀಡಾಪಟುವಿನ ಪೌಷ್ಟಿಕಾಂಶದ ಆಹಾರಗಳ ಪೈಕಿ ಅತ್ಯಂತ ಮುಖ್ಯವೆನಿಸಿ ರುವ ಬಾಳೆಹಣ್ಣು, ಕಳೆದ ಇಂಗ್ಲೆಂಡ್ ಪ್ರವಾಸ ಸರಣಿಯ ವೇಳೆ ಭಾರತದ ಆಟಗಾರರಿಗೆ ಸೂಕ್ತ ಪ್ರಮಾಣದಲ್ಲಿ ಪೂರೈಕೆಯಾಗಿರಲಿಲ್ಲ. ಇದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ ಮತ್ತು ಕೋಚ್ ರವಿಶಾಸ್ತ್ರಿ, ಇತ್ತೀಚೆಗೆ ಹೈದರಾಬಾದ್​ನಲ್ಲಿ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಜತೆ ನಡೆದ ಮರುಪರಿಶೀಲನಾ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟಿದೆ. ಕಳೆದ ಪ್ರವಾಸದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಮ್ಮ ಆಟಗಾರರಿಗೆ ಅವರಿಷ್ಟದ ಹಣ್ಣುಗಳನ್ನು ಒದಗಿಸಲು ವಿಫಲವಾಗಿತ್ತು. ಆದರೆ ಸಿಒಎ ಜತೆ ರ್ಚಚಿಸಿದ ಆಟಗಾರರು ಬಿಸಿಸಿಐ ವೆಚ್ಚದಲ್ಲೇ

ಬಾಳೆಹಣ್ಣಿನ ಪೂರೈಕೆ ಮಾಡಲು ಟೀಮ್ ಮ್ಯಾನೇಜರ್​ಗೆ ಹೇಳಬೇಕಿತ್ತು ಎಂದಿದ್ದರು. ಜತೆಗೆ ಬುಕ್ ಮಾಡುವ ಹೋಟೆಲ್​ನಲ್ಲಿ ಸುಸಜ್ಜಿತ ಜಿಮ್ ವ್ಯವಸ್ಥೆ ಇರಬೇಕು. ಆಟಗಾರರ ಪತ್ನಿ, ಗೆಳತಿಯರಿಗೆ ಹೋಟೆಲ್​ಗೆ ಪ್ರವೇಶಿಸುವ ಅನುಮತಿ ನೀಡಬೇಕೆಂದು ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.

ವಿಶೇಷ ರೈಲಿಗೆ ಷರತ್ತಿನ ಸಮ್ಮತಿ

ಇಂಗ್ಲೆಂಡ್​ನಲ್ಲಿ ವಿಮಾನ ಪ್ರಯಾಣಕ್ಕೆ ಹೆಚ್ಚಿನ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಹೀಗಾಗಿ ವಿಶೇಷ ರೈಲು ಕೋಚ್ ಬುಕ್ಕಿಂಗ್ ಮಾಡಿದರೆ ವಿಶ್ವಕಪ್ ವೇಳೆ ಪ್ರಯಾಣ ನಿರಾಳವೆನಿಸುತ್ತದೆ. ಇದಕ್ಕಾಗಿ ಆಟಗಾರರು ಇಟ್ಟಿರುವ ಬೇಡಿಕೆಗೆ ಆರಂಭದಲ್ಲಿ ಸಮ್ಮತಿಸದ ಸಿಒಎ, ನಂತರ ಷರತ್ತಿನ ಮೇಲೆ ಓಕೆ ಎಂದಿದೆ. ರೈಲು ಪ್ರಯಾಣದ ವೇಳೆ ಭಾರತೀಯ ಅಭಿಮಾನಿಗಳು ಆಟಗಾರರನ್ನು ಮುತ್ತಿಕ್ಕುವ ಅಪಾಯ ಇರುತ್ತದೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಸಿಒಎ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಆದರೆ ಇಂಗ್ಲೆಂಡ್ ಕ್ರಿಕೆಟಿಗರು ರೈಲಿನಲ್ಲೇ ಪ್ರಯಾಣಿಸುತ್ತಾರೆಂದು ಕೊಹ್ಲಿ ಹೇಳಿದ್ದರಿಂದ, ರೈಲಿನಲ್ಲಿ ಪ್ರಯಾಣಿಸುವ ವೇಳೆ ಏನಾದರೂ ಸಂಭವಿಸಿದರೆ ಅದಕ್ಕೆ ಸಿಒಎ ಅಥವಾ ಬಿಸಿಸಿಐ ಹೊಣೆಯಾಗುವುದಿಲ್ಲ ಎಂಬ ಷರತ್ತಿನ ಮೇಲೆ ಒಪ್ಪಿಗೆ ಸೂಚಿಸಲಾಗಿದೆ.

ಬಾಳೆಹಣ್ಣಿಗೆ ಡಿಮ್ಯಾಂಡ್​ ಯಾಕೆ?

ಟೆನಿಸ್ ಆಟಗಾರರು ಸೇರಿದಂತೆ ಎಲ್ಲ ಕ್ರೀಡಾಪಟುಗಳು ಆಟ ಮತ್ತು ಅಭ್ಯಾಸ ಅವಧಿಯಲ್ಲಿ ಬಾಳೆಹಣ್ಣು ತಿನ್ನುತ್ತಾರೆ. ಕ್ರೀಡಾಪಟುವೊಬ್ಬನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸದೃಢಗೊಳಿಸುವಂಥ ವಿಟಮಿನ್ ಅಂಶಗಳು ಬಾಳೆಹಣ್ಣಿನಲ್ಲಿ ಸಾಕಷ್ಟಿವೆ ಎನ್ನುವ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಟೀಮ್ ಇದಕ್ಕೆ ವಿಶೇಷ ಬೇಡಿಕೆ ಇಟ್ಟಿದೆ. ಬಾಳೆಹಣ್ಣು ಮುಖ್ಯವಾಗಿ ಜೀರ್ಣ ಪ್ರಕ್ರಿಯೆ, ರಕ್ತದ ಒತ್ತಡ ಸಮತೋಲನದಲ್ಲಿರಿಸಲು, ರಕ್ತದಲ್ಲಿ ಸೋಡಿಯಂ ಅಂಶ ಹೆಚ್ಚಿಸಲು, ಸಕ್ಕರೆ ಅಂಶ ಸಮತೋಲನದಲ್ಲಿಡಲು, ಡಿಹೈಡ್ರೇಷನ್ ದೂರ ಮಾಡಲು ಸಹಕಾರಿ ಎನಿಸಿದೆ. ಮುಖ್ಯವಾಗಿ ಕ್ರೀಡಾಪಟು ಮಾನಸಿಕವಾಗಿ ಸದಾ ಉಲ್ಲಾಸದಿಂದ ಇರಲು ಹಾಗೂ ಸತತವಾಗಿ ಆಟವಾಡಿ ಬಳಲಿದ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಬಾಳೆಹಣ್ಣು ಉಪಯುಕ್ತ.