ವಿರಾಟ್ ಕೊಹ್ಲಿ ಅತಿವೇಗದ 60 ಶತಕಗಳ ದಾಖಲೆ

ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 60ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕದ ಮೂಲಕ ಮಿಂಚಿದ್ದು ಪಂದ್ಯದ ಪ್ರಮುಖ ಹೈಲೈಟ್. ಈ ಮೂಲಕ ಅವರು ಅತಿವೇಗವಾಗಿ ಈ ಸಾಧನೆ ಮಾಡಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿರುವುದು ವಿಶೇಷ.

29 ವರ್ಷದ ಕೊಹ್ಲಿ ತಾನಾಡಿದ 347ನೇ ಪಂದ್ಯದ 386ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ಸಚಿನ್ ಈ ಸಾಧನೆಗಾಗಿ ಇನ್ನೂ 40 ಇನಿಂಗ್ಸ್ ಹೆಚ್ಚು ಆಡಿದ್ದರು. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 60 ಶತಕ ಸಿಡಿಸಿದ 5ನೇ ಬ್ಯಾಟ್ಸ್​ಮನ್ ಎನಿಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (71), ಶ್ರೀಲಂಕಾದ ಕುಮಾರ ಸಂಗಕ್ಕರ (63) ಮತ್ತು ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲಿಸ್ (62) ಇತರ ಸಾಧಕರು. ಕಾಕತಾಳೀಯವೆಂದರೆ ಸಚಿನ್ ಕೂಡ ವೆಸ್ಟ್ ಇಂಡೀಸ್ ವಿರುದ್ಧವೇ 60ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದರು. 2002ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಸಚಿನ್ 30ನೇ ವಯಸ್ಸಿಗೆ ಮುನ್ನ 65 ಶತಕ ಸಿಡಿಸಿದ್ದರು. ನವೆಂಬರ್ 5ಕ್ಕೆ 30ನೇ ವಯಸ್ಸಿಗೆ ಕಾಲಿಡುತ್ತಿರುವ ಕೊಹ್ಲಿಗೆ ಈ ದಾಖಲೆ ಮುರಿಯುವ ಅವಕಾಶ ವಿರಳ. ಆದರೆ ಏಕದಿನದಲ್ಲಿ ಸಚಿನ್ 30ನೇ ವಯಸ್ಸಿಗೆ ಮುನ್ನ 34 ಶತಕ ಸಿಡಿಸಿದ್ದರೆ, ಕೊಹ್ಲಿ ಇದಕ್ಕಿಂತ 2 ಶತಕ ಮುಂದಿದ್ದಾರೆ.

ಕೊಹ್ಲಿ ಸಾಗುತ್ತಿರುವ ವೇಗ ಗಮನಿಸಿದರೆ ಇನ್ನು 256 ಇನಿಂಗ್ಸ್ ಗಳಲ್ಲೇ ಅವರು 100 ಶತಕ ಪೂರೈಸುವ ನಿರೀಕ್ಷೆ ಇಡಬಹುದು. ಯಾಕೆಂದರೆ ಕೊಹ್ಲಿ ಸದ್ಯ ಪ್ರತಿ 6.4 ಇನಿಂಗ್ಸ್​ಗೊಂದು ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್ 7.82 ಇನಿಂಗ್ಸ್​ಗೊಂದು ಶತಕ ಸಿಡಿಸಿದ್ದರೆ, ಪಾಂಟಿಂಗ್ ಪ್ರತಿ ಶತಕಕ್ಕೆ 9.4 ಇನಿಂಗ್ಸ್ ಆಡಿದ್ದರು. ಸಂಗಕ್ಕರ ಪ್ರತಿ 10.5 ಇನಿಂಗ್ಸ್​ಗೊಂದು ಮತ್ತು ಕಾಲಿಸ್ ಪ್ರತಿ 9.95 ಇನಿಂಗ್ಸ್​ಗೊಂದು ಶತಕ ಬಾರಿಸಿದ್ದರು. ಇನ್ನು ಏಕದಿನ ಕ್ರಿಕೆಟ್​ನಲ್ಲಿ 204 ಇನಿಂಗ್ಸ್​ಗಳಲ್ಲೇ 36 ಶತಕ ಸಿಡಿಸಿರುವ ಕೊಹ್ಲಿ, ಪ್ರತಿ 5.7 ಇನಿಂಗ್ಸ್​ಗೊಂದು ಶತಕದ ದಾಖಲಿಸಿದ್ದಾರೆ. ಇದರಿಂದ ಕೊಹ್ಲಿ, ಸಚಿನ್ (452) ಆಡಿದಷ್ಟೇ ಏಕದಿನ ಇನಿಂಗ್ಸ್​ಗಳನ್ನು ಆಡಿದರೆ 80 ಶತಕ ಸಿಡಿಸಬಲ್ಲರು! ಅಂದರೆ ಸಚಿನ್​ಗಿಂತ 30 ಶತಕ ಅಧಿಕ!

ರೋಹಿತ್ 20 ಶತಕಗಳ ದಾಖಲೆ

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ 6 ಬಾರಿ 150 ಪ್ಲಸ್ ರನ್ ಸಿಡಿಸಿದ ದಾಖಲೆ ಬರೆದ ರೋಹಿತ್ ಶರ್ಮ 4ನೇ ಅತಿವೇಗದ 20 ಶತಕ ಸಾಧಕ ಎನಿಸಿದರು. ಹಾಶಿಂ ಆಮ್ಲ (108 ಇನಿಂಗ್ಸ್), ಕೊಹ್ಲಿ (133) ಮತ್ತು ಎಬಿ ಡಿವಿಲಿಯರ್ಸ್ (175) ಮುಂಚೂಣಿ ಸಾಧಕರು. ಸಚಿನ್​ಗಿಂತ (197) ವೇಗವಾಗಿ ರೋಹಿತ್ (183 ಇನಿಂಗ್ಸ್) ಈ ಸಾಧನೆ ಮಾಡಿರುವುದು ವಿಶೇಷ.