ಟಿ20 ಸರಣಿ ಮುಖಭಂಗಕ್ಕೆ ಏಕದಿನ ಸರಣಿ ಗೆದ್ದು ಮರ್ಯಾದೆ ಉಳಿಸಿಕೊಂಡ ಆಂಗ್ಲರು

> ​

ಲೀಡ್ಸ್​: ಮೊದಲೆರಡು ಏಕದಿನ ಪಂದ್ಯದಲ್ಲಿ ಸಮಬಲ ಸಾಧಿಸಿ ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಪಂದ್ಯವೆನಿಸಿದ್ದ ಮೂರನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ಭಾರತದ ವಿರುದ್ಧ 8 ವಿಕೆಟ್​ಗಳ ಅಭೂತಪೂರ್ವ ಗೆಲವು ಸಾಧಿಸಿದೆ. ಜವಬ್ದಾರಿಯುತ ಆಟವಾಡಿದ ನಾಯಕ ಇಯಾನ್​ ಮಾರ್ಗನ್(88*)​ ಹಾಗೂ ಕಳೆದ ಪಂದ್ಯದ ಗೆಲುವಿನ ರೂವಾರಿ ಜೋ ರೋಟ್(100*)​ ಅವರ ಮುರಿಯದ ಜತೆಯಾಟದ ನೆರವಿನಿಂದ ಆಂಗ್ಲರ ಪಡೆ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

ಮೊದಲು ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಂ ಇಂಡಿಯಾ ನಿಗದಿತ 50 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 256 ರನ್​ ಕಲೆಹಾಕುವ ಮೂಲಕ ಆಂಗ್ಲರ ಪಡೆಗೆ ಸಾಧಾರಣ ಮೊತ್ತದ ಸವಾಲನ್ನು ನೀಡಿತು.

ನಾಯಕನಾಗಿ ತಂಡದ ಪರ ಜವಬ್ದಾರಿಯುತ ಆಟವಾಡಿದ ವಿರಾಟ್​ ಕೊಹ್ಲಿ 71 ರನ್​ ಕಾಣಿಕೆ ನೀಡಿದರೆ, ಶಿಖರ್​ ಧವನ್​(44) ಹಾಗೂ ಎಂ. ಎಸ್​. ಧೋನಿ (42) ರನ್​ ಗಳಿಸಿದರು. ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದದ್ದು ತಂಡವೂ ಗರಿಷ್ಠ ಮೊತ್ತ ದಾಖಲಿಸುವಲ್ಲಿ ಹಿನ್ನೆಡೆಯಾಯಿತು.

ಇಂಗ್ಲೆಂಡ್​ ಪರ ಮೊನೆಚಾದ ಬೌಲಿಂಗ್​ ದಾಳಿ ಮಾಡಿದ ಡೇವಿಡ್​ ವಿಲ್ಲೆ ಹಾಗೂ ಆದಿಲ್​ ರಶೀದ್​ ತಲಾ ಮೂರು ವಿಕೆಟ್​ ಕಬಳಿಸಿ ಟೀಂ ಇಂಡಿಯಾ ಪಾಲಿಗೆ ಮುಳುವಾದರು. ಉಳಿದಂತೆ ಮಾರ್ಕ್​ ವುಡ್​ ಒಂದು ವಿಕೆಟ್​ ಪಡೆದರೆ, ಶಿಖರ್​ ಧವನ್​ ರನೌಟಾದರು.

ಟೀಂ ಇಂಡಿಯಾ ನೀಡಿದ 257 ರನ್​ ಗುರಿಯನ್ನು ಬೆನ್ನತ್ತಿದ ಆಂಗ್ಲರ ಪಡೆ 44.3 ಓವರ್​​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 260 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಟಿ20 ಸರಣಿಯಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ಇಂಗ್ಲೆಂಡ್​ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ತವರು ನೆಲದಲ್ಲಿ ಮರ್ಯಾದೆ ಉಳಿಸಿಕೊಂಡಿತು.

ತಂಡದ ಪರ ಮುರಿಯದ ಜತೆಯಾಟವಾಡಿದ ನಾಯಕ ಇಯಾನ್​ ಮಾರ್ಗನ್(108 ಎಸೆತಕ್ಕೆ ಅಜೇಯ 88 ರನ್​) ಹಾಗೂ ಜೋ ರೂಟ್ (120 ಎಸೆತಕ್ಕೆ ಅಜೇಯ 100 ರನ್​)​ ಅವರು ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಉಳಿದಂತೆ ಜೇಮ್ಸ್​ ವಿನ್ಸ್​ (27) ಹಾಗೂ ಜಾನಿ ಬೇರ್ ಸ್ಟೋ (30) ರನ್​ ಗಳಿಸಿದರು.

ಟೀಂ ಇಂಡಿಯಾ ಪರ ಯಾವೊಬ್ಬ ಬೌಲರ್​ಗಳು ಕೂಡ ಪರಿಣಾಮಕಾರಿಯಾಗಲಿಲ್ಲ. ಕಳೆದೆರಡು ಪಂದ್ಯದಲ್ಲಿ ಆಂಗ್ಲರ ಪಡೆಗೆ ಕಠಿಣ ಸವಾಲಾಗಿದ್ದ ಕುಲದೀಪ್​ ಯಾದವ್​ ಈ ಪಂದ್ಯದಲ್ಲಿ ಖಾತೆಯನ್ನೇ ತೆರಯಲಿಲ್ಲ. ಶಾರ್ದೂಲ್​ ಠಾಕೂರ್​ ಒಂದು ವಿಕೆಟ್ ಹಾಗೂ ಜೇಮ್ಸ್​ ರನೌಟ್​ ಆಗಿದನ್ನು ಬಿಟ್ಟರೆ ಯಾವೊಬ್ಬ ಬೌಲರ್​ಗಳು ಕೂಡ ಆಂಗ್ಲರ ಬ್ಯಾಟ್ಸ್​ಮನ್​ಗಳಿಗೆ ಸವಾಲಾಗಲೇ ಇಲ್ಲ. (ಏಜೆನ್ಸೀಸ್​)