ಹ್ಯಾಮಿಲ್ಟನ್: ಆರಂಭಿಕ 2 ಪಂದ್ಯಗಳಲ್ಲೂ ಜಯ ದಾಖಲಿಸಿ ಸರಣಿಯಲ್ಲಿ ಬಿಗಿಹಿಡಿತ ಸಾಧಿಸಿರುವ ಪ್ರವಾಸಿ ಭಾರತ ತಂಡ ಬುಧವಾರ ಸೆಡ್ಡನ್ ಪಾರ್ಕ್ನಲ್ಲಿ 3ನೇ ಟಿ20 ಪಂದ್ಯ ಆಡಲು ಸಜ್ಜಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆಲುವಿನ ಹೊಸ್ತಿಲಲ್ಲಿದೆ. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಿದ್ಧತೆ ದೃಷ್ಟಿಯಿಂದ ಸರಣಿ ಗೆಲುವು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಆಕ್ಲೆಂಡ್ನಲ್ಲಿ ನಡೆದ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ತಂಡ ಕ್ರಮವಾಗಿ 6 ಹಾಗೂ 7 ವಿಕೆಟ್ಗಳಿಂದ ಜಯ ದಾಖಲಿಸಿತ್ತು.
2019ರ ಏಕದಿನ ವಿಶ್ವಕಪ್ ಬಳಿಕ ಸತತ 5 ಟಿ20 ಸರಣಿಗಳಲ್ಲಿ ಅಜೇಯವಾಗಿರುವ ಭಾರತ ತಂಡ, ವಿದೇಶಿ ನೆಲದಲ್ಲೂ ನಾಗಾಲೋಟ ಮುಂದುವರಿಸುವ ವಿಶ್ವಾಸದಲ್ಲಿದೆ. ಇದು ಆತಿಥೇಯ ನ್ಯೂಜಿಲೆಂಡ್ ಪಾಲಿಗೆ ಮಾಡು ಇಲ್ಲವೆ ಮಡಿ ಈ ಕದನವಾಗಿದೆ.
ರೋಹಿತ್ ಫಾರ್ಮ್ ಚಿಂತೆ: ತವರು ನೆಲದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮ ಕಿವೀಸ್ ನೆಲದಲ್ಲಿ ಎರಡು ಪಂದ್ಯಗಳಲ್ಲೂ ಕನಿಷ್ಠ ಎರಡಂಕಿ ತಲುಪಲು ವಿಫಲರಾಗಿದ್ದಾರೆ. ಕಡೇ 10 ಇನಿಂಗ್ಸ್ ಗಳಲ್ಲಿ ತಲಾ 2 ಶತಕ, ಅರ್ಧಶತಕ ಸಿಡಿಸಿರುವ ರೋಹಿತ್ರಿಂದ ಕಿವೀಸ್ನಲ್ಲಿ ಇದುವರೆಗೆ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಉಳಿದಂತೆ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಮುಂದುವರಿಸಲಿದ್ದಾರೆ. ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಕರ್ನಾಟಕದ ಮತ್ತೋರ್ವ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಹೆಚ್ಚುವರಿ ಬ್ಯಾಟ್ಸ್ಮನ್ ಆಗಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ವೈಫಲ್ಯ ನಡುವೆಯೂ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ನಿರ್ವಹಣೆಯೇ ತಂಡದ ಪ್ಲಸ್ ಪಾಯಿಂಟ್.
ಪುಟಿದೇಳುವ ತವಕದಲ್ಲಿ ಕಿವೀಸ್: ಸತತ ಸೋಲುಗಳಿಂದ ಮಂಕಾಗಿರುವ ಆತಿಥೇಯ ನ್ಯೂಜಿಲೆಂಡ್ ತಂಡ ಸೆಡ್ಡನ್ ಪಾರ್ಕ್ನಲ್ಲಿ ಸೆಡ್ಡು ಹೊಡೆಯುವ ಗುರಿಯಲ್ಲಿದೆ. ಆಲ್ರೌಂಡರ್ಗಳೇ ತಂಡಕ್ಕೆ ಕೈಕೊಡುತ್ತಿದ್ದು, ಬೌಲರ್ಗಳಿಂದಲೂ ಇದುವರೆಗೆ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಇದಕ್ಕೆ ಹಿಂದಿನ ಎರಡು ಪಂದ್ಯಗಳೇ ಸಾಕ್ಷಿ. ತವರು ನೆಲದಲ್ಲೇ ಮುಖಭಂಗ ತಪ್ಪಿಸಿಕೊಳ್ಳಲು ಕಿವೀಸ್ ತಂಡಕ್ಕೆ ಪ್ರತಿಹೋರಾಟ ಅನಿವಾರ್ಯ. -ಪಿಟಿಐ/ಏಜೆನ್ಸೀಸ್
ಭಾರತ ಸರಣಿ ಗೆದ್ದರೂ ರ‍್ಯಾಂಕಿಂಗ್ ಪ್ರಗತಿ ಇಲ್ಲ
ಸತತ ಐದು ಟಿ20 ಸರಣಿಗಳಲ್ಲಿ ಅಜೇಯವಾಗಿರುವ ಭಾರತ, ಕಿವೀಸ್ ತಂಡವನ್ನು ಮಣಿಸಿ ಸರಣಿ ಜಯ ಖಚಿತ ಪಡಿಸಿಕೊಂಡರೂ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಮೇಲೇರಲು ಸಾಧ್ಯವಿಲ್ಲ. ಸದ್ಯ 5ನೇ ಸ್ಥಾನದಲ್ಲಿರುವ ಭಾರತ, ಕಿವೀಸ್ ಎದುರು 5-0ಯಿಂದ ಸರಣಿ ಜಯಿಸಿದರಷ್ಟೇ 1 ಸ್ಥಾನ ಮೇಲೇರಲಿದೆ. ಸದ್ಯ ಕಿವೀಸ್ 6ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೊದಲ ನಾಲ್ಕು ಸ್ಥಾನದಲ್ಲಿವೆ.
04: ಹ್ಯಾಮಿಲ್ಟನ್ನಲ್ಲಿ ಮೈದಾನದಲ್ಲಿ ನಡೆದ ಕಳೆದ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ನಾಲ್ಕು ಬಾರಿ ಜಯ ದಾಖಲಿಸಿವೆ.
25: ವಿರಾಟ್ ಕೊಹ್ಲಿ 25 ರನ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ನಾಯಕ ಎನಿಸಲಿದ್ದಾರೆ. ಸದ್ಯ ಧೋನಿ (1,112) ಮುಂಚೂಣಿಯಲ್ಲಿದ್ದಾರೆ. ಒಟ್ಟಾರೆಯಾಗಿ ಕೇನ್ ವಿಲಿಯಮ್ಸನ್ (1,148) ಮತ್ತು ಫಾಫ್ ಡು ಪ್ಲೆಸಿಸ್ (1,273) ಮೊದಲೆರಡು ಸ್ಥಾನದಲ್ಲಿದ್ದಾರೆ.
03: ಕಿವೀಸ್ ಪ್ರವಾಸದಲ್ಲಿ 3ನೇ ಬಾರಿ ಟಿ20 ಸರಣಿ ಆಡುತ್ತಿರುವ ಭಾರತ, ಈ ಪಂದ್ಯ ಗೆದ್ದರೆ ಮೊದಲ ಬಾರಿಗೆ ಸರಣಿ ಗೆದ್ದಂತಾಗಲಿದೆ. 2008-09ರಲ್ಲಿ 0-2ರಿಂದ ಹಾಗೂ ಕಳೆದ ವರ್ಷ 1-2ರಿಂದ ಸರಣಿ ಸೋತಿತ್ತು.
04: ಕೆಎಲ್ ರಾಹುಲ್ ಈ ಪಂದ್ಯದಲ್ಲೂ ಅರ್ಧಶತಕ ಬಾರಿಸಿದರೆ, ಟಿ20ಯಲ್ಲಿ ಸತತ 4 ಅರ್ಧಶತಕ ಸಿಡಿಸಿದ ಮೊದಲ ಭಾರತೀಯರೆನಿಸಲಿದ್ದಾರೆ.
ಟೀಮ್ ನ್ಯೂಸ್
ಭಾರತ: ಗೆಲುವಿನ ನಾಗಾಲೋಟದಲ್ಲಿರುವ ಭಾರತ ತಂಡದಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಕಡಿಮೆ. ಬ್ಯಾಟಿಂಗ್ನಲ್ಲಿ ಸಮರ್ಥ ನಿರ್ವಹಣೆ ಬರುತ್ತಿರುವುದರಿಂದ ಈ ವಿಭಾಗದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಬೌಲಿಂಗ್ನಲ್ಲಿ ಕೊಂಚ ದುಬಾರಿಯಾಗು ತ್ತಿರುವ ಶಾರ್ದೂಲ್ ಠಾಕೂರ್ ಬದಲಿಗೆ ನವದೀಪ್ ಸೈನಿ ಕಣಕ್ಕಿಳಿಯಬಹುದು. ಆರಂಭಿಕ 2 ಪಂದ್ಯಗಳಲ್ಲೂ ಹೊರಗುಳಿದಿದ್ದ ಎಡಗೈ ಬೌಲರ್ ಕುಲದೀಪ್ ಯಾದವ್, ಮತ್ತೋರ್ವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬದಲಿಗೆ ತಂಡಕ್ಕೆ ವಾಪಸಾಗಬಹುದು.
ನ್ಯೂಜಿಲೆಂಡ್: ಸರಣಿ ಉಳಿವಿಗೆ ಅಡ್ಡ ಕತ್ತರಿಯಲ್ಲಿ ಸಿಲುಕಿರುವ ನ್ಯೂಜಿಲೆಂಡ್ ತಂಡದಲ್ಲಿ ಕೆಲ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ಆರಂಭಿಕ 2 ಪಂದ್ಯಗಳಲ್ಲೂ ವಿಫಲರಾಗಿರುವ ಆಲ್ರೌಂಡರ್ ಕಾಲಿನ್ ಡಿಗ್ರಾಂಡ್ಹೋಮ್ ಬದಲಿಗೆ ಡೆರಿಲ್ ಮಿಚೆಲ್ ಹನ್ನೊಂದರ ಬಳಗದಲ್ಲಿ ಕಾಣಿಸಿದರೂ ಅಚ್ಚರಿ ಇಲ್ಲ. ಇದರಿಂದ ಮಿಚೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಂತಾಗುತ್ತದೆ. 2 ಪಂದ್ಯಗಳಿಂದ 1 ವಿಕೆಟ್ ಕಬಳಿಸಿರುವ ಮಧ್ಯಮ ವೇಗಿ ಬ್ಲೈರ್ ಟಿಕ್ನರ್ ಬದಲಿಗೆ ಸ್ಕಾಟ್ ಕಗಿಲಿನ್ ಕಣಕ್ಕಿಳಿಯಬಹುದು.
ಪಿಚ್ ರಿಪೋರ್ಟ್
ಸೆಡ್ಡನ್ ಪಾರ್ಕ್ನಲ್ಲಿ ರನ್ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಇಲ್ಲಿ ನಡೆದಿರುವ ಹಿಂದಿನ 5 ಪಂದ್ಯಗಳೇ ಇದಕ್ಕೆ ಪುಷ್ಠಿ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 3 ಬಾರಿ 190ಕ್ಕೂ ಹೆಚ್ಚು ರನ್ ಪೇರಿಸಿವೆ. ಈ ನೆಲದಲ್ಲಿ ಭಾರತ-ಕಿವೀಸ್ ಕಡೆಯ ಬಾರಿಗೆ ಎದುರಾಗಿದ್ದು, ಕಳೆದ ಫೆಬ್ರವರಿ 10 ರಂದು ನಡೆದ ಪಂದ್ಯದಲ್ಲಿ. ಆಗ ಕಿವೀಸ್ ನೀಡಿದ್ದ 213 ರನ್ ಬೆನ್ನಟ್ಟಿದ ಭಾರತ ಕೇವಲ 4 ರನ್ಗಳಿಂದ ಸೋಲು ಕಂಡಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 12.30 ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್