ರವಿಶಾಸ್ತ್ರಿ ವೇತನ ಶೇ. 20 ಏರಿಕೆ: 9.5-10 ಕೋಟಿ ರೂ.ಗೆ ಹೆಚ್ಚಳ ನಿರೀಕ್ಷೆ!

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ಆಗಿ ಇತ್ತೀಚೆಗಷ್ಟೇ ಮರುನೇಮಕಗೊಂಡಿರುವ ರವಿಶಾಸ್ತ್ರಿ, ಹೊಸ ಅವಧಿಯ ವಾರ್ಷಿಕ ವೇತನದಲ್ಲಿ ಶೇ. 20ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ. ಇದರಿಂದ ಅವರು ವಾರ್ಷಿಕ 9.5ರಿಂದ 10 ಕೋಟಿ ರೂ. ನಡುವಿನ ವೇತನ ಪಡೆಯಲಿದ್ದಾರೆ ಎನ್ನಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲಗಳು ಈ ವಿಷಯವನ್ನು ತಿಳಿಸಿವೆ. ಈ ಮೂಲಕ ರವಿಶಾಸ್ತ್ರಿ ವಿಶ್ವದ ಶ್ರೀಮಂತ ಕ್ರಿಕೆಟ್ ಕೋಚ್ ಎನಿಸಿದ್ದಾರೆ.

57 ವರ್ಷದ ರವಿಶಾಸ್ತ್ರಿ ಇತ್ತೀಚೆಗಷ್ಟೇ 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ವರೆಗೆ ಹೊಸ ಒಪ್ಪಂದ ಪಡೆದುಕೊಂಡಿದ್ದಾರೆ. ಈ ವರ್ಷ ಏಕದಿನ ವಿಶ್ವಕಪ್​ವರೆಗಿನ ಅವರ ಹಿಂದಿನ ಅವಧಿಯಲ್ಲಿ ವಾರ್ಷಿಕ 8 ಕೋಟಿ ರೂ. ವೇತನ ಪಡೆಯುತ್ತಿದ್ದರು. ಕಳೆದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಾತ್ಕಾಲಿಕ ವಿಸ್ತರಣೆ ಪಡೆದಿದ್ದ ಅವರ ಹೊಸ ಒಪ್ಪಂದ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಆರಂಭಗೊಳ್ಳಲಿದೆ. ಅವರ ಹೊಸ ಒಪ್ಪಂದ ಒಟ್ಟು 26 ತಿಂಗಳುಗಳದ್ದಾಗಿದೆ. ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಕನ್ನಡತಿ ಶಾಂತಾ ರಂಗಸ್ವಾಮಿ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ರವಿಶಾಸ್ತ್ರಿ ಅವರನ್ನು ಮರುನೇಮಕ ಮಾಡಿತ್ತು.

ಬೌಲಿಂಗ್ ಕೋಚ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮರುನೇಮಕಗೊಂಡಿರುವ ಭರತ್ ಅರುಣ್ ಮತ್ತು ಆರ್. ಶ್ರೀಧರ್ ತಲಾ 3.5 ಕೋಟಿ ರೂ. ವಾರ್ಷಿಕ ವೇತನ ಪಡೆಯಲಿದ್ದಾರೆ ಎನ್ನಲಾಗಿದೆ. ನೂತನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ 2.5ರಿಂದ 3ಕೋಟಿ ರೂ. ನಡುವೆ ವಾರ್ಷಿಕ ವೇತನ ಪಡೆಯಲಿದ್ದಾರೆ. ಹೊಸ ಒಪ್ಪಂದ ಸೆಪ್ಟೆಂಬರ್ 1ರಿಂದಲೇ ಅನ್ವಯಿಸಲಿದೆ.

ಟಿ20, ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಯುವಕರಿಗೆ ಆದ್ಯತೆ: ಟಿ20 ವಿಶ್ವಕಪ್ ಪೂರ್ವಸಿದ್ಧತೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವತ್ತ ಗಮನ ಹರಿಸುವೆ ಎಂದು ರವಿಶಾಸ್ತ್ರಿ ಕೋಚ್ ಆಗಿ ತಮ್ಮ ಮುಂದಿನ ಅವಧಿಯ ಬಗ್ಗೆ ಹೇಳಿದ್ದಾರೆ. ನಿರ್ವಹಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ಮೀಸಲು ಪಡೆ ಬಲಿಷ್ಠಗೊಳಿಸುವ ಬಗ್ಗೆಯೂ ಆದ್ಯತೆ ನೀಡಲಾಗುವುದು ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. -ಪಿಟಿಐ/ಏಜೆನ್ಸೀಸ್

ಶ್ರೀಮಂತ ಕ್ರಿಕೆಟ್ ಕೋಚ್!

ಭಾರತೀಯ ಕ್ರಿಕೆಟಿಗರಂತೆ ಕೋಚ್​ಗಳ ವೇತನವೂ ಇತ್ತೀಚೆಗೆ ಭಾರಿ ಪ್ರಗತಿ ಕಂಡಿದೆ. ಬಿಸಿಸಿಐ ಮೂಲಗಳ ಪ್ರಕಾರ, 1996-97ರಲ್ಲಿ ಭಾರತ ತಂಡದ ಕೋಚ್ ಆಗಿದ್ದ ಮದನ್ ಲಾಲ್ ಪಡೆಯುತ್ತಿದ್ದ ಮಾಸಿಕ ವೇತನ 5 ಲಕ್ಷ ರೂ. ಬಳಿಕ ಕಪಿಲ್ ದೇವ್ 1999ರಿಂದ 2000ದವರೆಗೆ ಕೋಚ್ ಆಗಿದ್ದಾಗ ಪ್ರತಿ ಪಂದ್ಯಕ್ಕೆ 4 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಜತೆಗೆ ವರ್ಷಾಂತ್ಯಕ್ಕೆ ಶೇ.35ರಷ್ಟು ಬೋನಸ್ ಗಳಿಸುತ್ತಿದ್ದರು. 2000ದಿಂದ 2005ರವರೆಗೆ ಕೋಚ್ ಆಗಿದ್ದ ಜಾನ್ ರೈಟ್ ವಾರ್ಷಿಕ 1 ಕೋಟಿ ರೂ ಪಡೆಯುತ್ತಿದ್ದರೆ, 2005ರಿಂದ 2007ರ ನಡುವೆ ಗ್ರೇಗ್ ಚಾಪೆಲ್ 1.25 ಕೊಟಿ ರೂ. ವಾರ್ಷಿಕ ವೇತನ ಪಡೆದಿದ್ದರು. 2011ರ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕೋಚ್ ಗ್ಯಾರಿ ಕರ್ಸ್ಟನ್ 4 ಕೋಟಿ ರೂ. ವಾರ್ಷಿಕ ವೇತನ ಪಡೆಯುತ್ತಿದ್ದರು. ಬಳಿಕ ಡಂಕನ್ ಫ್ಲೆಚರ್ ವಾರ್ಷಿಕ 4.2 ಕೋಟಿ ರೂ. ಪಡೆದಿದ್ದರೆ, ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ವಾರ್ಷಿಕ 6.25 ಕೋಟಿ ರೂ. ವೇತನ ಪಡೆದಿದ್ದರು. ಈ ನಡುವೆ ವೀಕ್ಷಕವಿವರಣೆ ತ್ಯಜಿಸಿ 2015-16ರ ಅವಧಿಯಲ್ಲಿ ರವಿಶಾಸ್ತ್ರಿ ಟೀಮ್ ಡೈರೆಕ್ಟರ್ ಆಗಿದ್ದಾಗ 7 ಕೋಟಿ ರೂ. ವೇತನ ಪಡೆಯುತ್ತಿದ್ದರು. ಬಳಿಕ ಕೋಚ್ ಆದಾಗ ಅವರ ವೇತನ 8 ಕೋಟಿ ರೂ.ಗೆ ಏರಿಕೆಯಾಗಿತ್ತು.

Leave a Reply

Your email address will not be published. Required fields are marked *