ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯದಲ್ಲಿ ಬಳಸಿದ ಬಾಲ್ ಅನ್ನು ಅಂಪೈರ್ನಿಂದ ಪಡೆದದ್ದು ಏಕೆ? ಇದು ಧೋನಿ ನಿವೃತ್ತಿ ಘೋಷಿಸುವ ಮುನ್ಸೂಚನೆಯೇ ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಈ ಮಧ್ಯೆ ಧೋನಿ ಬಾಲ್ ಪಡೆದ ಕುರಿತು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಸತ್ಯವನ್ನು ಹೊರಹಾಕಿದ್ದಾರೆ.
ಧೋನಿ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಾರೆ ಎಂಬುದು ಸುಳ್ಳು ಸುದ್ದಿ. ಟೀಂ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ಗೆ ಪಂದ್ಯದಲ್ಲಿ ಬಳಸಿದ ಬಾಲ್ ಅನ್ನು ತೋರಿಸಲು ಧೋನಿ ಅಂಪೈರ್ನಿಂದ ಬಾಲ್ ಪಡೆದಿದ್ದರು. ಆದರೆ, ಇದೇ ದೃಶ್ಯವನ್ನು ಬಳಸಿಕೊಂಡು ಧೋನಿ ನಿವೃತ್ತರಾಗುತ್ತಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
2014ರ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಡುವೆಯೇ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಆದರೆ, ಸೀಮಿತ ಓವರ್ ಕ್ರಿಕೆಟ್ನಲ್ಲಿ ಮುಂದುವರಿದಿದ್ದಾರೆ. ಕನಿಷ್ಠ 2019ರಲ್ಲಿ ಇಂಗ್ಲೆಂಡ್ನಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್ವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ನಿರೀಕ್ಷೆ ಇದೆ.
ಇದುವರೆಗೆ 321 ಏಕದಿನ ಪಂದ್ಯ ಆಡಿರುವ ಧೋನಿ 51.25ರ ಸರಾಸರಿಯಲ್ಲಿ 10,046 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೇ ಅವರು ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 12ನೇ ಮತ್ತು ಭಾರತದ 4ನೇ ಬ್ಯಾಟ್ಸ್ಮನ್ ಎನಿಸಿದ್ದರು. ಹಾಲಿ ಕ್ರಿಕೆಟಿಗರಲ್ಲಿ ಅವರು ಅತ್ಯಧಿಕ ಏಕದಿನ ರನ್ ಬಾರಿಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ. (ಏಜೆನ್ಸೀಸ್)