ಸರಣಿ ಗೆಲುವಿನ ಖುಷಿಯಲ್ಲಿ ಕೊಹ್ಲಿ ಮಾಡಿದ ಬಾಂಗ್ರಾ ನೃತ್ಯದ ವಿಡಿಯೋ ಸಖತ್​ ವೈರಲ್​!

ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಖುಷಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ತಂಡದ ಸದಸ್ಯರ ಜತೆ ಸೇರಿ ಮಾಡಿರುವ ಬಾಂಗ್ರಾ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸುದೀರ್ಘ 71 ವರ್ಷಗಳ ಹೋರಾಟದಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್​ ಸರಣಿ ಗೆದ್ದು ಆಸಿಸ್​ ಪಡೆಗೆ ಅವರದ್ದೇ ನೆಲದಲ್ಲಿ ಭಾರಿ ಮುಖಭಂಗ ಉಂಟುಮಾಡಿದೆ. ಈ ಗೆಲುವು ಭಾರತೀಯರ ಪಾಲಿಗೆ ಹೆಮ್ಮೆಯ ಸಂಕೇತವಾಗಿದ್ದು, ಇದೇ ಖುಷಿಯಲ್ಲಿ ಭಾರತ ತಂಡ ಒಟ್ಟಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದೆ.

ಭಾರತಕ್ಕೆ ಬೆಂಬಲ ನೀಡಲು ಆಸ್ಟ್ರೇಲಿಯಾಗೆ ತೆರಳಿದ್ದ ಅಭಿಮಾನಿಗಳ ಜತೆ ಸೇರಿ ಕೊಹ್ಲಿ ಹಾಗೂ ತಂಡದ ಸದಸ್ಯರು ಬಾಂಗ್ರಾ ನೃತ್ಯವನ್ನು ಮಾಡಿದ್ದಾರೆ. ಅಲ್ಲದೆ, ಭಾರತೀಯ ಸೇನೆ ಜತೆ ಸೇರಿ ಕೇಕ್​ ಕತ್ತರಿಸುವ ಮೂಲಕ ಗೆಲುವನ್ನು ಸಂಭ್ರಮಿಸಿದ ಕೊಹ್ಲಿ ಸಖತ್​ ಸ್ಟೆಪ್​​ ಹಾಕಿದರು. (ಏಜೆನ್ಸೀಸ್​)