ಸಿಡಿದ ಸ್ಮೃತಿ, ಭಾರತಕ್ಕೆ ಜಯ

ಪ್ರೊವಿಡೆನ್ಸ್: ಚೊಚ್ಚಲ ಐಸಿಸಿ ಟ್ರೋಫಿಯೊಂದನ್ನು ಈ ಸಲವಾದರೂ ಗೆದ್ದು ಬಹುವರ್ಷಗಳ ಕನಸನ್ನು ನನಸಾಗಿಸುವ ಹಾದಿಯಲ್ಲಿರುವ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾಗೆ ಸೋಲಿನ ಆಘಾತ ನೀಡಿದೆ. ಸ್ಟಾರ್ ಬ್ಯಾಟುಗಾರ್ತಿ ಸ್ಮೃತಿ ಮಂದನಾ(83 ರನ್, 55 ಎಸೆತ, 9 ಬೌಂಡರಿ, 3 ಸಿಕ್ಸರ್) ಅವರ ಚುಟುಕು ಕ್ರಿಕೆಟ್​ನ ಶ್ರೇಷ್ಠ ಇನಿಂಗ್ಸ್ ಮತ್ತು ಸಂಘಟಿತ ಸ್ಪಿನ್ ಬೌಲಿಂಗ್ ನೆರವಿನಿಂದ ಭಾರತ ತಂಡ 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು 48 ರನ್​ಗಳಿಂದ ಮಣಿಸಿ ಅಜೇಯವಾಗಿ ಸೆಮಿಫೈನಲ್ ಕದನಕ್ಕೆ ಸಜ್ಜಾಯಿತು. ಸತತ 4ನೇ ಜಯ ಕಂಡ ಭಾರತ ನ. 22ರಂದು ಸೆಮೀಸ್​ನಲ್ಲಿ ವೆಸ್ಟ್ ಇಂಡೀಸ್ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್​ಗೆ ಇಳಿಯಿತು. ಸತತ 13 ಇನಿಂಗ್ಸ್ ಗಳ ನಂತರ ಸ್ಮೃತಿ ಸಿಡಿಸಿದ ಆಕರ್ಷಕ ಅರ್ಧಶತಕ ಮತ್ತು ನಾಯಕಿ ಹರ್ವನ್​ಪ್ರೀತ್ ಕೌರ್(43 ರನ್, 27 ಎಸೆತ, 3 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್​ಗೆ 167 ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಸ್ಪಿನ್ನರ್​ಗಳಾದ ಅನುಜಾ ಪಾಟೀಲ್ 3 ವಿಕೆಟ್, ದೀಪ್ತಿ ಶರ್ಮ , ರಾಧಾ ಯಾದವ್, ಪೂನಂ ಯಾದವ್ ಕಬಳಿಸಿದ ತಲಾ 2 ವಿಕೆಟ್​ಗಳ ಸಂಘಟಿತ ದಾಳಿಗೆ 19.4 ಓವರ್​ಗಳಲ್ಲಿ 119 ರನ್​ಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಅಲಿಸಾ ಹೀಲಿ ಗಾಯದಿಂದಾಗಿ ಬ್ಯಾಟಿಂಗ್​ಗೆ ಇಳಿಯದೆ ಇದ್ದುದು ಆಸ್ಟ್ರೇಲಿಯಾಗೆ ದೊಡ್ಡ ಹಿನ್ನಡೆಯಾಯಿತು.

ಭಾರತದ ಸ್ಪಿನ್ ಅಸ್ತ್ರ್ಕೆ ಆಸೀಸ್ ತತ್ತರ: ಬ್ಯಾಟಿಂಗ್​ನಲ್ಲಿ ಗಮನಾರ್ಹವಾಗಿ ಆಡಿದ ಭಾರತ ಸ್ಪಿನ್ ಬೌಲಿಂಗ್​ನಲ್ಲಿ ಗುಣಮಟ್ಟ ನಿರ್ವಹಣೆ ತೋರುವ ಮೂಲಕ ಆಸ್ಟ್ರೇಲಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿಯಿತು. ಮೊದಲ ವಿಕೆಟ್​ಗೆ ಇಜೆ ವಿಲಾನಿ ಮತ್ತು ಬೆತ್ ಮೂನಿ 27 ರನ್​ಗಳ ಎಚ್ಚರಿಕೆಯ ಆಟವಾಡಿದರೂ ಅವರನ್ನು ದೀಪ್ತಿ ಶರ್ಮ ಒಂದೇ ಓವರ್​ನಲ್ಲಿ ಡಗ್​ಔಟ್ ಸೇರಿಸಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಎಲ್ಲಿಸ್ ಪೆರ್ರಿ(39ರನ್, 28ಎಸೆತ, 3ಬೌಂಡರಿ, 1ಸಿಕ್ಸರ್) ಮಾತ್ರ ಪ್ರತಿರೋಧ ತೋರಿದರು.

ಸ್ಮೃತಿ-ಹರ್ವನ್ ಭರ್ಜರಿ ಆಟ

ಸ್ಮೃತಿ ಜತೆ ಆರಂಭಿಕರಾಗಿ ಬ್ಯಾಟಿಂಗ್​ಗೆ ಇಳಿದ ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಉತ್ತಮ ಆರಂಭ ನೀಡಲು ವಿಫಲಗೊಂಡರು. ಬೆನ್ನಲ್ಲೇ ಜೆಮೀಮಾ ರೋಡ್ರಿಗಸ್ ಕೂಡ ಒಂದಂಕಿ ಮೊತ್ತಕ್ಕೆ ಡಗ್​ಔಟ್ ಸೇರಿದರು. ಬಳಿಕ ಕಣಕ್ಕಿಳಿದ ನಾಯಕಿ ಹರ್ವನ್​ಪ್ರೀತ್ ಕೌರ್ ನೀಡಿದ ಸಾಥ್​ನೊಂದಿಗೆ ಸ್ಪೋಟಕ ಆಟ ಮುಂದುವರಿಸಿದ ಸ್ಮೃತಿ ಕೇವಲ 13.2 ಓವರ್​ಗಳಲ್ಲಿ ತಂಡದ ಮೊತ್ತವನ್ನು 117ಕ್ಕೇರಿಸಿ ಬೃಹತ್ ಮೊತ್ತಕ್ಕೆ ಬುನಾದಿ ಹಾಕಿಕೊಟ್ಟರು. ಇವರಿಬ್ಬರ ಬೌಂಡರಿ-ಸಿಕ್ಸರ್​ಗಳ ಅಬ್ಬರಕ್ಕೆ ಆಸ್ಟ್ರೇಲಿಯಾ ಆಟಗಾರ್ತಿಯರು ದಂಗಾದರು. ಆದರೆ ಹರ್ವನ್​ಪ್ರೀತ್ ಕೌರ್​ರನ್ನು ಕಿಮಿನ್ಸ್ ಔಟ್ ಮಾಡುವ ಮೂಲಕ ಭಾರತದ ಬಿರುಸಿನ ಮೊತ್ತಕ್ಕೆ ಬ್ರೇಕ್ ನೀಡಿದರು. ಕನ್ನಡತಿ ವೇದಾ ಕೃಷ್ಣಮೂರ್ತಿ(3), ಡಿ ಹೇಮಲತಾ(1) ಒಂದಂಕಿ ಮೊತ್ತಕ್ಕೆ ವೈಫಲ್ಯ ಕಂಡರು. ಆದಾಗ್ಯೂ ಏಕಾಂಗಿಯಾಗಿ ಹೋರಾಟ ಮುಂದುವರಿಸಿದ ಸ್ಮೃತಿ ಆಸೀಸ್ ಬೌಲರ್​ಗಳನ್ನು ದಂಡಿಸುವ ಮೂಲಕ ತಂಡದ ಮೊತ್ತವನ್ನು ಕ್ಕೇರಿಸಿ ಔಟಾದರು.

ಇದು ಸ್ಮೃತಿ ಮಂದನಾ ಟಿ20 ಕ್ರಿಕೆಟ್​ನ ಜೀವನಶ್ರೇಷ್ಠ ಇನಿಂಗ್ಸ್ ಆಗಿದೆ. ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಪೇರಿಸಿದ 76 ರನ್ ಹಿಂದಿನ ಗರಿಷ್ಠವಾಗಿತ್ತು.