ವಿಶ್ವಕಪ್​ಗೆ ದಿಕ್ಸೂಚಿ ಏಷ್ಯಾಕಪ್ ಗೆಲುವು

ಷ್ಯಾದ ಏಕದಿನ ಕ್ರಿಕೆಟ್​ನಲ್ಲಿ ಅಧಿಪತ್ಯ ಸಾಧಿಸಿರುವ ಭಾರತ ತಂಡಕ್ಕೆ ಮುಂದಿನ ಗುರಿ ವಿಶ್ವಕಪ್. ನಾಯಕ ವಿರಾಟ್ ಕೊಹ್ಲಿ ಗೈರಿನಲ್ಲೂ ಯುವ ಪಡೆಯನ್ನು ಕಟ್ಟಿಕೊಂಡು ಭಾರತ ಏಷ್ಯಾದ ಪ್ರಭುತ್ವ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಆದರೆ ಏಷ್ಯಾಕಪ್​ನಲ್ಲಿ ಅಜೇಯವಾಗಿ ಪ್ರಶಸ್ತಿ ಗೆದ್ದರೂ, ವಿಶ್ವ ಸಮರಕ್ಕೆ ವಿಶ್ವಾಸದ ಸಿದ್ಧತೆ ಇದಾಗಿರಲಿಲ್ಲ. ವಿಶ್ವಕಪ್​ಗೆ ಮುನ್ನ ಸುಧಾರಣೆ ಕಾಣಬೇಕಾದ ಅಂಶಗಳು ಬೆಳಕಿಗೆ ಬಂದಿವೆ. ಬೌಲಿಂಗ್ ಮತ್ತು ಆರಂಭಿಕ ಬ್ಯಾಟಿಂಗ್​ನಲ್ಲಿ ಭರವಸೆ ಉಳಿಸಿಕೊಂಡಿದ್ದರೂ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದಲ್ಲಿ ದೌರ್ಬಲ್ಯಗಳು ಎದ್ದುಕಂಡಿವೆ.

ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಟೂರ್ನಿಯಲ್ಲಿ ಆಡಿದ ಕೊನೇ 2 ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕಕ್ಕೆ ಸತ್ವಪರೀಕ್ಷೆ ಎದುರಾಗಿತ್ತು. ಇದೆರಡರಲ್ಲಿ ಸೋಲು ತಪ್ಪಿಸಿಕೊಂಡರೂ, ವಿಶ್ವಾಸ ವೃದ್ಧಿಸುವಂಥ ಫಲಿತಾಂಶ ಹೊರಬೀಳಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ಫಿನಿಶರ್​ಗಳ ಕೊರತೆ ಇನ್ನೂ ಕಾಡುತ್ತಿರುವಂತಿದೆ. ಅಗತ್ಯ ರನ್ ಸರಾಸರಿ 6ಕ್ಕಿಂತ ಕೆಳಗಿದ್ದರೂ, ಉಪಖಂಡದ ಪಿಚ್​ಗಳಲ್ಲೇ ಚೇಸಿಂಗ್​ಗೆ ಒದ್ದಾಡಿದ ಮಧ್ಯಮ ಕ್ರಮಾಂಕ, ಇಂಗ್ಲೆಂಡ್ ವಾತಾವರಣದಲ್ಲಿ ಇನ್ನಷ್ಟು ಬಲಿಷ್ಠ ಬೌಲಿಂಗ್ ವಿಭಾಗದ ಸವಾಲು ಹೇಗೆ ಎದುರಿಸಬಹುದು ಎಂಬ ಆತಂಕ ಮೂಡಿಸಿದೆ.

ಏಕದಿನ ಮಹಾಸಮರಕ್ಕೆ ಇನ್ನು 9 ತಿಂಗಳಷ್ಟೇ ಬಾಕಿ ಉಳಿದಿದ್ದು, ಇದರಲ್ಲಿ ಕೊನೇ 2 ತಿಂಗಳು ಐಪಿಎಲ್​ಗೆ ಸೀಮಿತವಾಗಿರುತ್ತದೆ. ವಿಶ್ವಕಪ್​ಗೆ ಮುನ್ನ ಭಾರತ 18 ಏಕದಿನ ಪಂದ್ಯಗಳನ್ನು (ವೆಸ್ಟ್ ಇಂಡೀಸ್ ವಿರುದ್ಧ 5, ಆಸ್ಟ್ರೇಲಿಯಾದಲ್ಲಿ 3, ನ್ಯೂಜಿಲೆಂಡ್​ನಲ್ಲಿ 5, ಆಸ್ಟ್ರೇಲಿಯಾ ವಿರುದ್ಧ 5) ಮಾತ್ರ ಆಡಲಿದೆ. 11 ಟಿ20 ಪಂದ್ಯ ಸೇರಿಸಿದರೆ, 29 ಸೀಮಿತ ಓವರ್ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದೆ. ಹೀಗಾಗಿ ಮಧ್ಯಮ ಕ್ರಮಾಂಕಕ್ಕೆ ಇನ್ನಷ್ಟು ಸತ್ವ ಪರೀಕ್ಷೆ ಎದುರಾಗಲಿದೆ.

ಭಾರತ ತಂಡದ 4 ಮತ್ತು 6ನೇ ಕ್ರಮಾಂಕ ಇನ್ನೂ ನಿಶ್ಚಯಗೊಂಡಿಲ್ಲ ಎಂಬುದನ್ನು ಹಂಗಾಮಿ ನಾಯಕ ರೋಹಿತ್ ಶರ್ಮ ಕೂಡ ಫೈನಲ್ ಪಂದ್ಯದ ಬಳಿಕ ಒಪ್ಪಿಕೊಂಡಿದ್ದಾರೆ. ‘ಇವೆರಡು ಕ್ರಮಾಂಕದ ಆಟಗಾರರಿಗೆ ವಿಶ್ವಕಪ್​ಗೆ ಮುನ್ನ ಇನ್ನಷ್ಟು ಅವಕಾಶಗಳು ಸಿಗಲಿವೆ. ವಿಶ್ವಕಪ್ ಸನಿಹ ಬಂದಾಗ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು. ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಮುಂದಿನ ಕೆಲ ಸರಣಿಗಳು ಪ್ರಮುಖವಾದವು’ ಎಂದವರು ಹೇಳಿದ್ದಾರೆ.

ಗಾಯದಲ್ಲೂ ಗೆಲ್ಲಿಸಿದ ಜಾಧವ್

ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗಾಯದ ನಡುವೆ ಬ್ಯಾಟಿಂಗ್ ಮಾಡಿ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಗೆಲ್ಲಿಸಿದ್ದ ಕೇದಾರ್ ಜಾಧವ್ ಏಷ್ಯಾಕಪ್ ಫೈನಲ್​ನಲ್ಲೂ ಅಂಥದ್ದೇ ಸಾಹಸ ಪುನರಾವರ್ತಿಸಿದರು. ಸ್ನಾಯುಸೆಳೆತದಿಂದಾಗಿ ಇನಿಂಗ್ಸ್​ನ 38ನೇ ಓವರ್ ಅಂತ್ಯಕ್ಕೆ ಜಾಧವ್ ನಿವೃತ್ತಿ ಹೊಂದಿದಾಗ ಭಾರತಕ್ಕೆ ಇನ್ನೂ 56 ರನ್ ಅಗತ್ಯವಿತ್ತು. ಆಗ ಜಡೇಜಾ (23) ಮತ್ತು ಭುವನೇಶ್ವರ್ (21) 45 ರನ್ ಸೇರಿಸಿದರು. 48ನೇ ಓವರ್​ನಲ್ಲಿ ಜಡೇಜಾ ಔಟಾದಾಗ ಭಾರತಕ್ಕೆ 16 ಎಸೆತಗಳಲ್ಲಿ 11 ರನ್ ಬೇಕಿತ್ತು. ಆಗ ಮತ್ತೆ ಕಣಕ್ಕಿಳಿದ ಜಾಧವ್, ಕೊನೇ ಎಸೆತದಲ್ಲಿ ಜಯ ತಂದರು. ನೋವಿನ ನಡುವೆಯೂ ಸಿಂಗಲ್, ಅವಳಿ ರನ್​ಗಳನ್ನು ಕಸಿದ ಜಾಧವ್​ಗೆ ಚೇತರಿಕೆಗೆ ಇನ್ನೆಷ್ಟು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂಬುದು ಸ್ಪಷ್ಟವಾಗಿಲ್ಲ.

64 –  ಏಕದಿನ ಟೂರ್ನಿಯೊಂದರಲ್ಲಿ 64ನೇ ಬಾರಿ ಫೈನಲ್ ಆಡಿದ ಭಾರತ ತಂಡ 26ನೇ ಗೆಲುವು ದಾಖಲಿಸಿತು. ಉಳಿದಂತೆ 33ರಲ್ಲಿ ಸೋತಿದ್ದು, 5ರಲ್ಲಿ ಫಲಿತಾಂಶ ದಾಖಲಾಗಿಲ್ಲ.1983ರ ವಿಶ್ವಕಪ್​ನಲ್ಲಿ ಭಾರತ ಮೊದಲ ಫೈನಲ್ ಆಡಿತ್ತು.

26 –  ಏಕದಿನ ಟೂರ್ನಿಯಲ್ಲಿ ಭಾರತ ಗೆದ್ದಿರುವ 26 ಗೆಲುವುಗಳಲ್ಲಿ ಗರಿಷ್ಠ 9 ಜಯ ಶ್ರೀಲಂಕಾ ವಿರುದ್ಧ ಬಂದಿದೆ. ಉಳಿದಂತೆ ಆಸ್ಟ್ರೇಲಿಯಾ ವಿರುದ್ಧ 4, ಪಾಕಿಸ್ತಾನ, ವೆಸ್ಟ್ ಇಂಡೀಸ್ ವಿರುದ್ಧ ತಲಾ 3, ಇಂಗ್ಲೆಂಡ್ ವಿರುದ್ಧ 2 ಮತ್ತು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ವಿರುದ್ಧ ತಲಾ 1 ಗೆಲುವು ಕಂಡಿದೆ.

6 –  ಏಕದಿನ ಮಾದರಿಯ ಏಷ್ಯಾಕಪ್​ನಲ್ಲಿ ಅತ್ಯಧಿಕ 6 ಪ್ರಶಸ್ತಿ ಗೆದ್ದ ದಾಖಲೆ ಭಾರತದ್ದಾಯಿತು. ಈ ಹಿಂದೆ 5 ಬಾರಿ ಗೆದ್ದ ಶ್ರೀಲಂಕಾ ಜತೆ ಸ್ಥಾನ ಹಂಚಿಕೊಂಡಿತ್ತು.

5 – ರೋಹಿತ್ ಶರ್ಮ ಭಾರತಕ್ಕೆ ಏಷ್ಯಾಕಪ್ ಗೆದ್ದುಕೊಟ್ಟ 5ನೇ ನಾಯಕ. ಸುನೀಲ್ ಗಾವಸ್ಕರ್ (1984), ದಿಲೀಪ್ ವೆಂಗ್ಸರ್ಕಾರ್ (1988), ಮೊಹಮದ್ ಅಜರುದ್ದೀನ್ (1990-91, 1995), ಎಂಎಸ್ ಧೋನಿ (2010, 2016) ಹಿಂದಿನ ಸಾಧಕರು.

223 –  ಭಾರತ ತಂಡ ಯಾವುದೇ ಬ್ಯಾಟ್ಸ್ ಮನ್​ನ ಅರ್ಧಶತಕದ ಕೊಡುಗೆ ಇಲ್ಲದೆ ಬೆನ್ನಟ್ಟಿದ ಅತ್ಯಧಿಕ ಸವಾಲು ಇದಾಗಿದೆ. 1999ರಲ್ಲಿ ನ್ಯೂಜಿಲೆಂಡ್ ವಿರುದ್ಧ ನೇಪಿಯರ್​ನಲ್ಲಿ 214 ರನ್ ಸವಾಲು ಬೆನ್ನಟ್ಟಿದ್ದು ಹಿಂದಿನ ದಾಖಲೆ.

ಪೂರ್ಣಕಾಲಿಕ ನಾಯಕತ್ವಕ್ಕೆ ರೋಹಿತ್ ಸಿದ್ಧ

ದುಬೈ: ಕಳೆದ ಮಾರ್ಚ್​ನಲ್ಲಿ ನಡೆದ ನಿದಾಹಸ್ ಕಪ್ ತ್ರಿಕೋನ ಟಿ20 ಟೂರ್ನಿಯ ಬಳಿಕ ಏಷ್ಯಾಕಪ್​ನಲ್ಲೂ ಹಂಗಾಮಿ ನಾಯಕರಾಗಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಸಫಲರಾಗಿರುವ ರೋಹಿತ್ ಶರ್ಮ, ಮುಂದಿನ ದಿನಗಳಲ್ಲಿ ಅವಕಾಶ ಬಂದಾಗ ಟೀಮ್ ಇಂಡಿಯಾದ ಪೂರ್ಣಕಾಲಿಕ ನಾಯಕರಾಗಿ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿರಾಟ್ ಕೊಹ್ಲಿ ನಾಯಕನ ಸ್ಥಾನಕ್ಕೆ ನಿಕಟ ಪೈಪೋಟಿ ಒಡ್ಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿಯೂ 3 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ರೋಹಿತ್, ‘ಟೂರ್ನಿಯಲ್ಲಿ ಯುವ ಆಟಗಾರರಿಗೆ ಯಾವುದೇ ಒತ್ತಡವಿಲ್ಲದೆ ಅವರ ಆಟ ಆಡುವ ಅವಕಾಶ ಕಲ್ಪಿಸಿದ್ದೆ. ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದಾಗ ಯುವ ಆಟಗಾರರಿಗೆ ಅವಕಾಶ ದೊರೆತರೂ, ಹಿರಿಯರು ವಾಪಸಾದಾಗ ಸ್ಥಾನ ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಸಿಗುವ ಅವಕಾಶವನ್ನು ನಿಶ್ಚಿಂತೆಯಿಂದ ಬಳಸಿಕೊಳ್ಳಬೇಕು’ ಎಂದು ಫೈನಲ್ ಗೆಲುವಿನ ಬಳಿಕ ಹೇಳಿದರು. ಬಾಂಗ್ಲಾ 48.3 ಓವರ್​ಗಳಲ್ಲಿ 222 ರನ್ ಪೇರಿಸಿದರೆ, ಪ್ರತಿಯಾಗಿ ಸಂಘಟಿತ ಬ್ಯಾಟಿಂಗ್ ನಡೆಸಿದ ಭಾರತ ತಂಡ 7 ವಿಕೆಟ್​ಗೆ 223 ರನ್ ಪೇರಿಸಿ 2010ರ ಬಳಿಕ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಏಷ್ಯಾದ ಚಾಂಪಿಯನ್ ಪಟ್ಟಕ್ಕೇರಿತು. ಲಿಟನ್ ದಾಸ್ ಪಂದ್ಯಶ್ರೇಷ್ಠ ಮತ್ತು ಟೂರ್ನಿಯ 5 ಇನಿಂಗ್ಸ್​ಗಳಲ್ಲಿ 342 ರನ್ ಬಾರಿಸಿದ ಶಿಖರ್ ಧವನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ಟ್ರೋಫಿ ಜತೆಗೆ 72.51 ಲಕ್ಷ ರೂ. ಬಹುಮಾನ ಪಡೆಯಿತು.

ಧೋನಿ ನಾಯಕತ್ವದಲ್ಲಿ ನಾನು ಗಮನಿಸಿದಂತೆ, ಅವರೆಂದೂ ಗಾಬರಿಗೊಳಗಾದವರಲ್ಲ. ಜಾಣ್ಮೆಯಿಂದ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ನನ್ನಲ್ಲೂ ಈ ಗುಣದ ಸಾಮ್ಯತೆಗಳಿವೆ. ಮೊದಲು ಯೋಚಿಸುತ್ತೇನೆ, ನಂತರ ಸ್ಪಂದಿಸುತ್ತೇನೆ.

| ರೋಹಿತ್ ಶರ್ಮ, ಭಾರತ ತಂಡದ ನಾಯಕ

ವಿಕೆಟ್ ಹಿಂದೆ ಧೋನಿಗೆ 800 ಬಲಿ

ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 800 ಬಲಿ ಪಡೆದ ಏಷ್ಯಾದ ಮೊದಲ ವಿಕೆಟ್ ಕೀಪರ್ ಎನಿಸಿದ್ದಾರೆ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಒಟ್ಟಾರೆಯಾಗಿ 3ನೇ ಅತ್ಯಧಿಕ ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಧೋನಿ ಅವರದಾಗಿದೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ (998) ಮತ್ತು ಆಸ್ಟ್ರೇಲಿಯಾದ ಆಡಂ ಗಿಲ್ಕ್ರಿಸ್ಟ್ (905) ಮೊದಲೆರಡು ಸ್ಥಾನದಲ್ಲಿದ್ದಾರೆ. 37 ವರ್ಷದ ಧೋನಿ ಟೆಸ್ಟ್ ನಲ್ಲಿ 256 ಕ್ಯಾಚ್, 38 ಸ್ಟಂಪಿಂಗ್ ಮಾಡಿದ್ದರೆ, ಏಕದಿನದಲ್ಲಿ 306 ಕ್ಯಾಚ್ ಮತ್ತು 113 ಸ್ಟಂಪಿಂಗ್ ಸಾಧಿಸಿದ್ದಾರೆ. ಟಿ20ಯಲ್ಲಿ 54 ಕ್ಯಾಚ್ ಹಿಡಿದಿದ್ದು, 33 ಸ್ಟಂಪಿಂಗ್ ಮಾಡಿದ್ದಾರೆ.

ಕಿರಿಯರ ಏಷ್ಯಾಕಪ್​ನಲ್ಲಿ ಶುಭಾರಂಭ

ಸವಾರ್: ರೋಹಿತ್ ಶರ್ಮ ಸಾರಥ್ಯದ ಟೀಮ್ ಇಂಡಿಯಾ 7ನೇ ಬಾರಿ ಏಷ್ಯಾಕಪ್ ಗೆದ್ದ ಸ್ಪೂರ್ತಿಯೊಂದಿಗೆ ಅಭಿಯಾನ ಆರಂಭಿಸಿದ ಭಾರತ ಕಿರಿಯರ ತಂಡ, 19 ವಯೋಮಿತಿಯ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರಂಭಿಕ ಯಶಸ್ವಿ ಜೈಸ್ವಾಲ್ (104 ರನ್, 113 ಎಸೆತ, 8 ಬೌಂಡರಿ, 5 ಸಿಕ್ಸರ್) ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ಮೊದಲ ಪಂದ್ಯದಲ್ಲಿ 171 ರನ್​ಗಳಿಂದ ನೇಪಾಳ ತಂಡವನ್ನು ಸೋಲಿಸಿತು. ಇದರಿಂದ ಕಳೆದ ಆವೃತ್ತಿಯ ಲೀಗ್ ಪಂದ್ಯದಲ್ಲಿ ನೇಪಾಳ ವಿರುದ್ಧ ಕಂಡಿದ್ದ ಆಘಾತಕಾರಿ ಸೋಲಿಗೆ ಸೇಡು ತೀರಿಸಿಕೊಂಡಿತು.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ, ಯಶಸ್ವಿ ಸಿಡಿಸಿದ ಶತಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಸಿಮ್ರಾನ್ ಸಿಂಗ್(82 ರನ್, 61 ಎಸೆತ, 6 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ 9 ವಿಕೆಟ್​ಗೆ 304 ರನ್ ಪೇರಿಸಿತು. ಪ್ರತಿಯಾಗಿ ನೇಪಾಳ, ಎಡಗೈ ಸ್ಪಿನ್ನರ್​ಗಳಾದ ಸಿದ್ಧಾರ್ಥ್ ದೇಸಾಯಿ(21ಕ್ಕೆ 3) ಮತ್ತು ಹರ್ಷ್ ದೇಸಾಯಿ(19ಕ್ಕೆ 3) ಜೋಡಿಯ ಸಂಘಟಿತ ದಾಳಿಗೆ ನಲುಗಿ 36.5 ಓವರ್​ಗಳಲ್ಲಿ 133 ರನ್​ಗೆ ಆಲೌಟ್ ಆಯಿತು. ಭಾರತ ಭಾನುವಾರ ಯುಎಇ ತಂಡವನ್ನು ಎದುರಿಸಲಿದೆ.